ಕಾಂಗ್ರೆಸ್ ಎಂಎಲ್ಸಿ ಸುನೀಲಗೌಡ ಪಾಟೀಲ ಗಂಭೀರ ಆರೋಪ | ಗೃಹ ಸಚಿವರಿಗೆ ದೂರು
ವಿಜಯಪುರ: ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಹಾಗೂ ಅವರ ಬೆಂಬಲಿಗನೋರ್ವ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಆರೋಪಿಸಿದ್ದಾರೆ.
ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತಮಗೆ ಬೆದರಿಕೆ ಹಾಕಿದ ಪಂಜಾಬ್ ಮೂಲದ ಸರದಾರ್ಜಿ ಭಾವಚಿತ್ರ ಪ್ರದರ್ಶಿಸಿ, ಈ ಕುರಿತು ತಾವು ವಿಜಯಪುರದ ಆದರ್ಶ ನಗರ ಪೊಲೀಸ್ ಠಾಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮುಖ್ಯಮಂತ್ರಿ, ಗೃಹಸಚಿವ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿರುವುದಾಗಿ ವಿವರಿಸಿದರು.
ಏ.28ರಂದು ನಗರದ ಮಹೇಶ್ವರಿ ಭವನದಲ್ಲಿ ನಡೆದ ಮದುವೆ ಮನೆಗೆ ನಾನು ಹೋಗಿದ್ದಾಗ ಕಾರಣವಿಲ್ಲದೇ ನನ್ನ ಮತ್ತು ನನ್ನ ಕಾರು ಚಾಲಕ, ಗನ್ ಮ್ಯಾನ್ ವಿರುದ್ಧ ವಿಜುಗೌಡ ಮತ್ತು ಸರ್ದಾರ್ ಇಬ್ಬರೂ ಸೇರಿ ಕುಲ್ಲಕ ಕಾರಣಕ್ಕೆ ಜಗಳ ತೆಗೆದು, ಶಸ್ತ್ರಾಸ್ತ್ರ ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದರು.
ವಿಜುಗೌಡ ಪಾಟೀಲ ಅವರು ವಿಜಯಪುರ ಕಾರಾಗೃಹದಲ್ಲಿ ಇರುವ ಕೈದಿಗಳಿಗೆ ಮೊಬೈಲ್ ಸಿಮ್ ಕಾರ್ಡ್, ಮಾದಕ ಪದಾರ್ಥಗಳು ಹಾಗೂ ಲಿಕ್ಕರ್ ಸರಬರಾಜು ಮಾಡುವ ಮೂಲಕ ಆ ಕ್ರಿಮಿನಲ್‌ಗಳ ಸಹಾಯ ಪಡೆದುಕೊಂಡು ನನಗೆ ಜೀವ ಬೆದರಿಕೆ ಹಾಕಿಸುವ ಕೃತ್ಯದಲ್ಲಿ ತೊಡಗಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ ಸುನೀಲಗೌಡರು, ಇದಕ್ಕೆ ಸೂಕ್ತ ಸಾಕ್ಷಾಧಾರಗಳು ತಮ್ಮಲ್ಲಿದ್ದು ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಏ.26ರಂದು ವಿಜಯಪುರದಲ್ಲಿ ಆಯೋಜಿಸಲಾಗಿದ್ದ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬಬಲೇಶ್ವರದಿಂದ ಬರುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಹಲಗಣಿ ಕ್ರಾಸ್ ಬಳಿ ವಿಜುಗೌಡ ಮತ್ತು ಅವರ ಗನ್ ಮ್ಯಾನ್ ಅಡ್ಡಗಟ್ಟಿ ಬೆದರಿಸಿ ವಾಪಸ್ ಕಳುಹಿಸಿದ್ದಾರೆ’ ಎಂದು ಸುನೀಲಗೌಡ ದೂರಿದರು.
ಡಾ.ಮಹಾಂತೇಶ ಬಿರಾದಾರ ಇದ್ದರು.

