ವಿಜಯಪುರ: ಪ್ರಜ್ವಲ್ ಲೈಂಗಿಕ ಹಗರಣದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದರು.
ಈ ಪ್ರಕರಣದಿಂದ ಮೈತ್ರಿ ಪಕ್ಷ ಬಿಜೆಪಿಗೂ ಮುಜುಗರ ಆಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪ್ರಜ್ವಲ್ ರೇವಣ್ಣ ಅಷ್ಟೇ ಅಲ್ಲ. ತಪ್ಪು ಮಾಡಿದ ಯಾರಿಗೇ ಆಗಲಿ ಶಿಕ್ಷೆಯಾಗಲೇಬೇಕು. ಸರ್ಕಾರ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದೆ. ತನಿಖೆಯಿಂದ ಸತ್ಯ ಹೊರ ಬರಲಿದೆ ಎಂದರು.
ರಾಜ್ಯ ಸರ್ಕಾರದ ಆಡಳಿತ ವಿರೋಧಿ ಅಲೆಯ ಕಾರಣದಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಲಿದೆ. ರಾಜ್ಯದಲ್ಲಿ ಲೋಕಸಭೆಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ 11 ಬಿಜೆಪಿ ಹಾಗೂ ಮೈತ್ರಿ ಪಕ್ಷವಾದ ಜೆಡಿಎಸ್ 3 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ. ಎರಡನೇ ಹಂತದ ಕ್ಷೇತ್ರಗಳಲ್ಲೂ ಬಿಜೆಪಿ ಮುಂದಿದೆ. ಇದನ್ನು ಸಹಿಸಲಾಗದ ಕಾಂಗ್ರೆಸ್ ಅಭಿವೃದ್ಧಿ ಆಧಾರಿತ ಚುನಾವಣೆ ಪ್ರಚಾರ ಮಾಡದೆ ಅಶ್ಲೀಲ ವಿಡಿಯೋ ಪ್ರಕರಣವನ್ನು ರಾಜಕೀಕರಣಗೊಳಿಸುತ್ತಿದೆ ಎಂದು ದೂರಿದರು.
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿ ದೂರದ ಕೊಲ್ಕತ್ತಾ ನಗರದಲ್ಲಿ ಪತ್ತೆಯಾಗಿದ್ದಾನೆ. ಈ ಕೃತ್ಯದ ಹಿಂದೆ ಜಿಹಾದ್ ಕೈವಾಡದ ಶಂಕೆಯಿದೆ. ಹುಬ್ಬಳ್ಳಿಯ ನೇಹಾ ಹತ್ಯೆ ಕೃತ್ಯದ ಕೆಲವು ಅಂಶಗಳಿಂದ ಈ ಘಟನೆಯಲ್ಲೂ ದೇಶವಿರೋಧಿ ಶಕ್ತಿಗಳ ಕೈವಾಡದ ಶಂಕೆ ಇದೆ ಎಂದು ಆರೋಪಿಸಿದರು.
ನಾವು ಅಭಿವೃದ್ಧಿ ಆಧಾರಿತವಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಮೋದಿ ಆಡಳಿತ ಬಂದ ಮೇಲೆ ದೇಶದಲ್ಲಿ ಭಯೋತ್ಪಾದನೆ, ನಕ್ಸಲ್ ಚಟುವಟಿಕೆ ನಿಗ್ರಹವಾಗಿ ದೇಶದ ಜನರು ಸುರಕ್ಷಿತವಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಯೋಜನೆಗಳು ಅಭಿವೃದ್ಧಿ ಕಂಡಿವೆ. ಇದೆಲ್ಲ ಮೋದಿ ಸರ್ಕಾರ ಮಾಡಿರುವ ಅಭಿವೃದ್ಧಿ. ಇಂಥ ಅಭಿವೃದ್ಧಿ ವ್ಯವಸ್ಥೆಯಲ್ಲಿ ಉದ್ಯೋಗ ಸೃಷ್ಡಿಯಾಗಿರುವುದು ನಿರುದ್ಯೋಗ ನಿವಾರಣೆಗೆ ಸಹಕಾರಿ ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಎಂ.ಎಲ್.ಸಿ ಅರುಣ ಶಹಾಪೂರ, ವಕ್ತಾರ ಸಂಜಯ ಪಾಟೀಲ ಕನಮಡಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಈರಣ್ಣ ರಾವೂರ, ರಾಜು ಗಚ್ಚಿನಮಠ, ಮಾಧ್ಯಮ ಪ್ರಮುಖ ವಿಜಯ ಜೋಶಿ ಸೇರಿದಂತೆ ಹಲವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

