ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭವಿಷ್ಯ
ವಿಜಯಪುರ: ಈ ಸಲ ವಿಜಯಪುರದಲ್ಲಿ ಬದಲಾವಣೆ ನಿಶ್ಚಿತ, ಕಾಂಗ್ರೆಸ್ ದಿಗ್ವಿಜಯ ಸಾಧಿಸುವುದು ಖಚಿತ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಬುಧವಾರ ಮುಸ್ಸಂಜೆ ಮಮದಾಪುರ ಮತ್ತು ಜೈನಾಪುರ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ಹಾಲಿ ಸಂಸದ ರಮೇಶ ಜಿಗಜಿಣಗಿ ಮೂರು ಬಾರಿ ಸಂಸದರಾದರೂ ಸಿಕ್ಕ ಅವಕಾಶವನ್ನು ಅಭಿವೃದ್ಧಿಗೆ ಬಳಸದೇ ಕಾಲಹರಣ ಮಾಡಿದ್ದಾರೆ. ಇದನ್ನು ಅರಿತಿರುವ ಮತದಾರರು ಈ ಬಾರಿ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ. ವಿಜಯಪುರದಲ್ಲಿ ಬದಲಾವಣೆ ನಿಶ್ಚಿತ. ಕಾಂಗ್ರೆಸ್ ದಿಗ್ವಿಜಯ ಖಚಿತ. ಎಲ್ಲರೂ ಕೈ ಹಿಡಿಯಿರಿ. ಅಭಿವೃದ್ಧಿಯತ್ತ ಮುನ್ನಡೆಯಿರಿ. ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಗೆಲ್ಲಿಸಿ ನಮ್ಮೆಲ್ಲರ ಕೈ ಬಲಪಡಿಸಿ ಎಂದು ಅವರು ಕರೆ ನೀಡಿದರು.
ಮಮದಾಪುರದಲ್ಲಿ ಮಾತನಾಡಿದ ಅವರು, ಈಗಾಗಲೇ ಮಮದಾಪುರ ಬಳಿ ಅರಣ್ಯ ಅಭಿವೃದ್ಧಿ ಪಡಿಸಲಾಗುತ್ತಿದೆ. ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ಹಸಿರೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಇಲ್ಲಿ ಲಭ್ಯವಿರುವ 1600 ಎಕರೆ ಪ್ರದೇಶದಲ್ಲಿ ಶ್ರೀಗಳ ಗೌರವಾರ್ಥ ದೊಡ್ಡ ಪ್ರಮಾಣದಲ್ಲಿ ಅರಣ್ಯ ಬೆಳೆಸಲಾಗುತ್ತಿದೆ. ಈ ಪ್ರದೇಶದಲ್ಲಿ ಅತೀ ಹೆಚ್ಚು ಆಕ್ಸಿಜನ್ ಲಭ್ಯವಾಗಲಿದೆ. ಭವಿಷ್ಯದಲ್ಲಿ ಮಮದಾಪುರ ಪ್ರಕೃತಿದತ್ತ ಸುಂದರ ಅರಣ್ಯ ಪ್ರವಾಸಿ ತಾಣವಾಗಲಿದೆ ಎಂದು ಹೇಳಿದರು.
ಜೈನಾಪುರದಲ್ಲಿ ಮಾತನಾಡಿದ ಸಚಿವರು, ಜೈನಾಪುರ ಭಾಗದ ಜನ ಕಷ್ಟ ಮತ್ತು ನೋವಿನಲ್ಲಿದ್ದಾಗಲೂ ಕಾಂಗ್ರೆಸ್ಸಿನ ಕಟ್ಟಾ ಬೆಂಬಲಿಗರಾಗಿ ಕೈ ಹಿಡಿಯುತ್ತ ಬಂದಿದ್ದಾರೆ. ಈ ಭಾಗದ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರೈತರು, ಬಡವರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲ ವರ್ಗದ ಜನರ ಬದುಕನ್ನು ಸಮೃದ್ಧ ಮಾಡಲಾಗುವುದು ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಎಲೆಕ್ಟ್ರಾಲ್ ಬಾಂಡ್ ಹಗರಣದ ಸಂಪೂರ್ಣ ತನಿಖೆಯಾದರೆ ಬಿಜೆಪಿಯ ಅಗ್ರಗಣ್ಯ ನಾಯಕರು ಒಳಹೋಗುತ್ತಾರೆ. ಅಭಿವೃದ್ಧಿಯ ಹರಿಕಾರ. ತಾವೊಬ್ಬ ಪ್ರಾಮಾಣಿಕ ವ್ಯಕ್ತಿ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡ ಈ ಪ್ರಕರಣದಲ್ಲಿ ಕಳಚಿದೆ. ಹೀಗಾಗಿ ಅವರು ಈಗ ಭ್ರಷ್ಟಾಚಾರ ವಿಷಯ ಪ್ರಸ್ತಾಪಿಸಿದೇ ಭಾವನಾತ್ಮಕ ವಿಚಾರಗಳನನ್ನು ಪ್ರಸ್ತಾಪಿಸುತ್ತ ಮತ ಕೇಳುತ್ತಿದ್ದಾರೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಮದಾಪುರದಲ್ಲಿ ಬಿಜೆಪಿ ಹಲವಾರು ಪ್ರಮುಖ ಮುಖಂಡರು ಸಚಿವ ಎಂ.ಬಿ.ಪಾಟೀಲರ ಕಾರ್ಯವೈಖರಿ ಮೆಚ್ಚಿ ಕಾಂಗ್ರೆಸ್ಸಿಗೆ ಸೇರ್ಪಡೆಯಾದರು.
ಮಮದಾಪುರದಲ್ಲಿ ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿ, ಸಚಿವ ಎಂ.ಬಿ.ಪಾಟೀಲರು ನಮ್ಮ ಮಮದಾಪೂರ ಗ್ರಾಮದ ಐತಿಹಾಸಿಕ ಕೆರೆಯನ್ನು ತುಂಬಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಅಧರ್ಮ ಹೆಚ್ಚಾದಾಗ ಧರ್ಮವನ್ನು ರಕ್ಷಿಸಲು ದೇವರು ಬೇರೆ ರೂಪದಲ್ಲಿ ಬರುವಂತೆ ಅವರು ಎಲ್ಲ ಭಾಗಗಳನ್ನು ಸಮಾನವಾಗಿ ಅಭಿವೃದ್ಧಿ ಮಾಡುತ್ತ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ನಮ್ಮ ಉಸಿರಿರುವ ವರೆಗೂ ನಿಮ್ಮ ಋಣ ತೀರಿಸುತ್ತೇವೆ. ಬಾಯಿಗೆ ಕೀಲಿ ಹಾಕಿಕೊಂಡಿರುವ ಸಂದರ ರಮೇಶ ಜಿಗಜಿಣಗಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ಪ್ರೊ.ರಾಜು ಆಲಗೂರ ಬೆಂಬಲಿಸಿ ಕೈ ಬಲಪಡಿಸುತ್ತೇವೆ ಎಂದು ಹೇಳಿದರು.
ಜೈನಾಪುರದಲ್ಲಿ ಕಾಂಗ್ರೆಸ್ ಮುಖಂಡರಾದ ರಾಜೇಂದ್ರ ದೇಸಾಯಿ ಮತ್ತು ಬಸವರಾಜ ದೇಸಾಯಿ ಮಾತನಾಡಿ, ಸಚಿವ ಎಂ. ಬಿ. ಪಾಟೀಲರು ನಮ್ಮ ಭಾಗದ ಎಲ್ಲ ಸಮುದಾಯಗಳ ಸಕಲ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಹೀಗಾಗಿ ಅವರಿಗೆ ಸಂಪೂರ್ಣ ಬೆಂಬಲ ನೀಡಿ ಪ್ರೊ.ರಾಜು ಆಲಗೂರ ಅವರನ್ನು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕುಮಾರ ದೇಸಾಯಿ, ಎಚ್. ಬಿ. ಹರನಟ್ಟಿ, ಚನ್ನಪ್ಪ ಕೊಪ್ಪದ, ಕೃಷ್ಣಾ ಕುಲಕರ್ಣಿ, ಶೇಖರ ಪೂಜಾರಿ, ರಫೀಕ್ ಕಾಣೆ, ಮುನ್ನಾ ಗಣಿ, ಪಂಚಯ್ಯ ಹಿರೇಮಠ, ಈರಣ್ಣ ಕೊಪ್ಪದ, ಮಲ್ಲಿಕಾರ್ಜುನ ಗಂಗೂರ, ಪ್ರಶಾಂತ ದೇಸಾಯಿ, ಕಲ್ಲನಗೌಡ ಪಾಟೀಲ, ಸಂಗಪ್ಪ ಕಾರಿಜೋಳ, ಕಲ್ಲಿನಾಥ ದೇಸಾಯಿ, ಗದಿಗೆಪ್ಪ ಚಿಕ್ಕರೆಡ್ಡಿ, ಭೀಮಶಿ ನಾಗರಾಳ, ಆನಂದಸ್ವಾಮಿ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

