ರೇವತಗಾಂವ ಗ್ರಾಮದಲ್ಲಿ ದುರ್ಗಾದೇವಿ ದೇವರುಗಳ ಭವ್ಯ ಭೇಟಿ
ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮದ ದುರ್ಗಾದೇವಿ ಜಾತ್ರೆಯ ಅಂಗವಾಗಿ ಮಂಗಳವಾರದಂದು ದುರ್ಗಾದೇವಿ ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿತು.
ಗ್ರಾಮದ ಮಾತಂಗ ಓಣೆಯಲ್ಲಿರುವ ದುರ್ಗಾದೇವಿ ಜಾತ್ರೆಯ ನಿಮಿತ್ತ ನಸುಕಿನ ಜಾವ ದುರ್ಗಾದೇವಿಯ ಪುಣ್ಯಸ್ಥಾನವು ಬೀಮಾ ನದಿಯ ನೀರಿನಿಂದ ನೇರವೇರಿಸಿ ವಾಸುದೇವ, ಮುದಕಪ್ಪ ಹಾಗೂ ದುರ್ಗಪ್ಪ ಪೂಜಾರಿಗಳಿಂದ ರುದ್ರಾಬಿಷೇಕ ಪೂಜೆಯು ಜರುಗಿತು. ಭಕ್ತರಿಂದ ದೀರ್ಘದಂಡ ನಮಸ್ಕಾರವನ್ನು ಸಲ್ಲಿಸುವ ಮೂಲಕ ತಮ್ಮ ಹರಿಕೆಗಳನ್ನು ತೀರಿಸಿದರು. ನಂತರ ಜಾತ್ರೆಯಲ್ಲಿ ಸೇರಿದ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವು ಜರುಗಿತು. ನಂತರ ಗ್ರಾಮದ ಕಲಾವಿದರಿಂದ ಚೌಡಕಿ ಪದಗಳು ಜರುಗಿದವು.
ಸಾಯಂಕಾಲ ೫ ಗಂಟೆ ಗ್ರಾಮದ ದುರ್ಗಾದೇವಿ ಹಾಗೂ ತಿಕೋಟದ ದುರ್ಗಾದೇವಿ ಪಲ್ಲಕ್ಕಿಗಳ ಮೆರವಣಿಗೆಯು ವಿವಿಧ ವಾದ್ಯ ವೈಭವಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ನೆರದ ಭಕ್ತ ಸಮೂಹ ಮುಂದೆ ದೇವರುಗಳ ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮವು ಸಡಗರದಿಂದ ಜರುಗಿತು. ಈ ವೇಳೆಯಲ್ಲಿ ಭಕ್ತರು ಭಂಡಾರ, ಬದಾಮ, ಖಾರೀಕ್, ಚುರುಮುರಿ, ಶೇಂಗಾ ಮುಂತಾದ ಪದಾರ್ಥಗಳನ್ನು ದೇವರುಗಳ ಪಲ್ಲಕ್ಕಿಗಳ ಮೇಲೆ ಎಸೆದು ತಮ್ಮ ಹರಿಕೆಗಳನ್ನು ಈಡೇರಿಸಿಕೊಂಡರು.

