ವಿಜಯಪುರ: ಕೇಂದ್ರದ ಮೋದಿಯವರ ಬಿಜೆಪಿ ಸರಕಾರ ದೇಶದ ಆರ್ಥಿಕ ಸ್ಥಿತಿ ಹದಗೆಡಿಸಿದ್ದಲ್ಲದೇ ಬೆಲೆ ಏರಿಕೆಯಿಂದ ಜನರ ಜೀವನವನ್ನು ದುರ್ಭರಗೊಳಿಸಿದೆ. ಈ ಸಲ ಇವರಿಗೆ ಮತ ನೀಡಬೇಡಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿ ನಡೆದ ಲಿಂಗಾಯತ ರೆಡ್ಡಿ ಸಮುದಾಯದ ಬೃಹತ್ ಸಭೆಯಲ್ಲಿ ಅವರು ಮಾತನಾಡಿ, ಈ ಭಾಗದಲ್ಲಿ ಸಚಿವ ಎಂ.ಬಿ.ಪಾಟೀಲರಿಂದ ಹದಿನೈದು ಲಕ್ಷ ಎಕರೆಯಷ್ಟು ಜಮೀನಿಗೆ ನೀರಾವರಿಯಾಗಿದೆ. ಇಷ್ಟೆಲ್ಲ ಮಾಡಿದರೂ ಏನೂ ಮಾಡದ ಬಿಜೆಪಿ ಬರೀ ಸುಳ್ಳು ಹೇಳಿಕೊಂಡು ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೆಣ್ಣುಮಕ್ಕಳ ಉಚಿತ ಪ್ರಯಾಣದ ಮೊತ್ತ ಇನ್ನೂರು ಕೋಟಿ ರೂ. ತಲುಪಿದೆ. ಇದರಿಂದ ಮಹಿಳೆಯರಿಗೆ ಬಹಳ ಅನುಕೂಲವಾಗಿದೆ. ಇದೇ ರೀತಿ ಗೃಹ ಜ್ಯೋತಿ, ಅನ್ನ ಭಾಗ್ಯ, ಮಹಿಳೆಯರಿಗೆ ಎರಡು ಸಾವಿರ ರೂ. ನೀಡಿದ್ದು ನಮ್ಮ ಜನಾನುರಾಗಿ ನಡೆಯ ಉದ್ದೇಶ. ಮೋದಿಯವರ ಬೆಲೆ ಏರಿಕೆಯ ಸಂಕಟದಿಂದ ಜನರನ್ನು ಪಾರು ಮಾಡಲು ಈ ಗ್ಯಾರಂಟಿಗಳನ್ನು ನೀಡಲಾಗಿದೆ. ಆದರೆ ಇದರ ಪರಿವೇ ಇಲ್ಲದೆ ಇದನ್ನು ಬಿಟ್ಟಿ ಭಾಗ್ಯ ಎಂದು ಹೇಳುತ್ತಾರೆ. ಬಿಜೆಪಿಯ ಯಾವೊಂದು ಸಂಸದರೂ ಕೇಂದ್ರದಲ್ಲಿ ಮಾತನಾಡಿಲ್ಲ. ಡಿ.ಕೆ.ಸುರೇಶ ಒಬ್ಬರೇ ನಾಡಿಗೆ ದನಿಯಾಗಿದ್ದರು ಎಂದರು.
ರಾಜು ಆಲಗೂರರಿಗೆ ಮತ ನೀಡಿದರೆ ನಮಗಾದ ಅನ್ಯಾಯ ತಡೆಯಲು ಸಾಧ್ಯ. ಮೋದಿಯವರಂತೆ ಬೇರೆ ದೇಶದಲ್ಲಿ ಸುಳ್ಳು ಹೇಳಿದರೆ ಕಿತ್ತಿ ಹಾಕಲಾಗುತ್ತದೆ. ಆದರೆ ನಮ್ಮ ದೇಶದ ಜನ ಯಾಕೆ ಸಹಿಸಿಕೊಂಡಿದ್ದಾರೋ ಗೊತ್ತಿಲ್ಲ. ಈ ಸಲ ಮೋದಿಯವರ ವರ್ಚಸ್ಸು ನಡೆಯಲ್ಲ. ಪಕ್ಕದ ಬಾಗಲಕೋಟೆಗೆ ಮೋದಿ ಬಂದರೂ ಹೆಚ್ಚು ಜನಕ್ಕೆ ತಲುಪಿಲ್ಲ ಎಂದು ಹೇಳಿದರು.
ಅಭ್ಯರ್ಥಿ ಪ್ರೊ.ರಾಜು ಆಲಗೂರ್ ಅವರು ಮಾತನಾಡಿ, ನೀವು ನನ್ನಲ್ಲಿ ವಿಶ್ವಾಸವಿಟ್ಟು ಮತ ಹಾಕಿದರೆ ಅದಕ್ಕೆ ತಕ್ಕಂತೆ ಜಿಲ್ಲೆಯ ಅಭಿವೃದ್ಧಿಗೆ ದುಡಿಯುತ್ತೇನೆ. ಹದಿನೈದು ವರ್ಷಗಳ ಕಾಲ ಈ ಕ್ಷೇತ್ರ ಏನೊಂದೂ ಕಾಣಲಿಲ್ಲ. ನೀರಾವರಿಗೆ ಒತ್ತು ನೀಡದೇ ಬಿಜೆಪಿ ಸಂಸದ ಬರೀ ಸಮಯ ವ್ಯರ್ಥ ಮಾಡಿದರು. ನಾನು ಹತ್ತು ಅಂಶದ ಕಾರ್ಯಕ್ರಮಗಳನ್ನು ಹಾಕೊಕೊಂಡು ಮುನ್ನಡೆಯಲು ನಿರ್ಧರಿಸಿರುವೆ ಎಂದರು.
ಡಾ.ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಭ್ಯ ವ್ಯಕ್ತಿಯಾಗಿರುವ ಆಲಗೂರರು ಕಾಂಗ್ರೆಸ್‌ನ ಸಿದ್ಧಾಂತದ ಜೊತೆ ಬೆಳೆದವರು. ಇವರು ಸುಸಂಸ್ಕೃತ ಕುಟುಂಬದಿಂದ ಬಂದಿದ್ದಾರೆ. ಇವರನ್ನು ಆರಿಸಿದರೆ ಕೃಷ್ಣಾ ಮೇಲ್ದಂಡೆ ಯೋಜನೆ ಗೆಜೆಟ್ ನೋಟಿಫಿಕೇಷನ್, ವಿಜಯಪುರಕ್ಕೆ ವೇಗದ ರೈಲು, ಪಾರಂಪರಿಕ ಪಟ್ಟಿಯಲ್ಲಿ ಗೋಳಗುಮ್ಮಟವನ್ನು ಸೇರಿಸುವುದು ಸೇರಿ ಅನೇಕ ಯೋಜನೆಗಳನ್ನು ಆಲಗೂರರು ಹಾಕಿಕೊಂಡಿದ್ದಾರೆ.
ರಾಮಲಿಂಗಾರೆಡ್ಡಿ ಅವರು ಸಮ ಸಮಾಜದ ದಾರಿಯಲ್ಲಿ ನಡೆದವರು. ದೇವರಹಿಪ್ಪರಗಿ ಬಸ್ ನಿಲ್ದಾಣಕ್ಕೆ ಮಡಿವಾಳ ಮಾಚಿದೇವರ ಹೆಸರು ಇಡಲು ಇವರೇ ಕಾರಣ. ಬಸವಣ್ಣನವರ ಆದರ್ಶದಲ್ಲಿ ನಂಬಿಕೆ ಇಟ್ಟವರಾಗಿದ್ದಾರೆ ಎಂದು ಡಾ.ಬಿರಾದಾರ ಹೇಳಿದರು.
ಮುಖಂಡರಾದ ಸುಭಾಶ ಛಾಯಾಗೋಳ, ಕೆಪಿಸಿಸಿಯ ಮನೋಹರ, ಎಲ್.ಬಿ.ಪಾಟೀಲ, ನಂದಿ ಸಹಕಾರಿ ಸಂಸ್ಥೆಯ ಆನಂದಕುಮಾರ ದೇಸಾಯಿ ಜೈನಾಪುರ, ಡಾ.ಎಲ್.ಎಚ್.ಬಿದರಿ, ಕೃಷ್ಣಾರೆಡ್ಡಿ, ಸುರೇಶ ದೇಸಾಯಿ, ಅಯ್ಯನಗೌಡ ಪಾಟೀಲ, ಡಾ.ಪ್ರಭುಗೌಡ ಪಾಟೀಲ, ಸಂಗನಗೌಡ ಹರನಾಳ, ಎಚ್.ಆರ್. ಮಾಚಪ್ಪನವರ ಇದ್ದರು.
Subscribe to Updates
Get the latest creative news from FooBar about art, design and business.
ಜನರ ಕೆಲಸ ಮಾಡದ ಬಿಜೆಪಿಯನ್ನು ಕಿತ್ತೊಗೆಯಿರಿ :ರಾಮಲಿಂಗಾರೆಡ್ಡಿ
Related Posts
Add A Comment

