ವಿಜಯಪುರ: ಸಂಸದ ರಮೇಶ ಜಿಗಜಿಣಗಿ ದೆಹಲಿಯಲ್ಲಿ ಸರಕಾರಿ ಬಂಗಲೆಯಲ್ಲಿ ವಾಸಿಸುತ್ತ ಕೇವಲ ಟಿಎ, ಡಿಎ ಪಡೆಯಲು ಮಾತ್ರ ಸೀಮಿತರಾಗಿದ್ದು, ಜಿಲ್ಲೆಯಲ್ಲಿ ಎಸ್ಸಿ, ಎಸ್ಸಿ ಸಮುದಾಯಕ್ಕೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ನಿವರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಜಯಪುರ ಸಂಸದರ ಬಗ್ಗೆ ಹೇಳಿ ಹೇಳಿ ಸಾಕಾಗಿದೆ. ಜಿಲ್ಲೆಯಲ್ಲೂ ಅಭಿವೃದ್ಧಿ ಮಾಡಿಲ್ಲ. ಎಸ್.ಸಿ. ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದರೂ ಎಸ್ಸಿ, ಎಸ್ಟಿ ಸಮುದಾಯಕ್ಕೂ ನ್ಯಾಯ ಒದಗಿಸಿಲ್ಲ. ವಿಮಾನದಲ್ಲಿ ಉಚಿತವಾಗಿ ತಿರುಗಾಡುತ್ತ, ಟಿಎ, ಡಿಎ ಪಡೆದು ದೆಹಲಿಯಲ್ಲಿ ಸರಕಾರಿ ಬಂಗಲೆಯಲ್ಲಿ ಹಾಯಾಗಿ ವಾಸಿಸುವುದಕ್ಕೆ ಮಾತ್ರ ಅವರು ಸೀಮಿತರಾಗಿದ್ದಾರೆ. ಇದಷ್ಟೇ ಅವರು ಕೆಲಸ ಎಂದುಕೊಂಡಿದ್ದಾರೆ. ಮತ ಹಾಕು ಎಂದರೂ ಜನತೆ ಯೋಚನೆ ಮಾಡುತ್ತಾರೆ. ಇನ್ನು ನಿಮ್ಮ ಮತವೇ ಬೇಡ ಎಂದು ಹೇಳಿರುವ ರಮೇಶ ಜಿಗಜಿಣಗಿ ಅವರಿಗೆ ಯಾರಾದರೂ ವೋಟು ಹಾಕುತ್ತಾರಾ ಎಂದು ಪ್ರಶ್ನಿಸಿದ ಅವರು, ವಿದ್ಯಾವಂತ, ಸೌಮ್ಯ ಸ್ವಭಾವದ ಪ್ರೊ. ರಾಜು ಆಲಗೂರ ಅವರಿಗೆ ಎಲ್ಲರೂ ಮತಹಾಕಿ ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ಅವರು ಕರೆ ನೀಡಿದರು.
ಎಲೆಕ್ಟ್ರಾಲ್ ಬಾಂಡ್ ಪ್ರಕರಣದ ಸಂಪೂರ್ಣ ತನಿಖೆಯಾದರೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕೂಡ ಒಳಗೆ ಹೋಗಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಅಚ್ಥೆ ದಿನ್ ಎಂದು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದು 10 ವರ್ಷಗಳಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ನಾವು ಸಾಕ್ಷಿ ಪುರಾವೆ ಇಟ್ಟುಕೊಂಡು ಮಾತನಾಡುತ್ತೇನೆ. ಮೋದಿ ಥರ ಸುಳ್ಳು ಹೇಳುವುದಿಲ್ಲ. ಎಲೆಕ್ಟ್ರಾಲ್ ಬಾಂಡ್ ಒಳ್ಳೆಯದಾದರೂ ಖರೀದಿಸಿದವರ ಹೆಸರನ್ನು ಗೌಪ್ಯವಾಗಿ ಇಡುವ ಕಾನೂನು ಜಾರಿಗೆ ತಂದಿದ್ದರು. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಕಾರಣ ಬಾಂಡ್ ಖರೀದಿದಾರರ ಹೆಸರುಗಳು ಬಹಿರಂಗವಾಗಿವೆ ಎಂದು ಅವರು ಹೇಳಿದರು.
ನಾವು ನಿವರಗಿ ಭಾಗಕ್ಕೂ ನೀರು ಕೊಡುತ್ತೇವೆ. ಜಿಗಜಿಣಗಿ, ಗುಂದವಾನ ಸೇರಿ 16 ಕೆರೆಗಳಿಗೆ ಮೂರು ತಿಂಗಳಲ್ಲಿ ನೀರು ಬರಲಿದೆ. ಸುಮಾರು 40 ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಪ್ರೊ. ರಾಜು ಆಲಗೂರ ಅವರಿಗೆ ಹಾಕುವ ಮತ, ಎಂಬಿಪಿ, ಸಿದ್ಧರಾಮಯ್ಯ, ಕಟಕದೊಂಡಗೆ ಹಾಕಿದಂತೆ. ಹೀಗಾಗಿ ಪ್ರೊ.ರಾಜು ಆಲಗೂರ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ನಾನು ಮೊದಲ ಬಾರಿಗೆ ಶಾಸಕನಾಗಿದ್ದಾಗ ಭೀಮಾ ನದಿಗೆ ನಾಲ್ಕು ಬ್ಯಾರೇಜ್ ನಿರ್ಮಿಸಿದ್ದೇನೆ. ಎರಡನೇ ಬಾರಿ ಶಾಸಕನಾಗಿದ್ದಾಗ ಮತ್ತೆ ಎರಡು ಬ್ಯಾರೇಜ್ ನಿರ್ಮಿಸಿ ಈ ಭಾಗದಲ್ಲಿ ನೀರಾವರಿಗೆ ಕೊಡುಗೆ ನೀಡಿದ್ದೇನೆ. ಕಳೆದ 30 ವರ್ಷಗಳಲ್ಲಿ ಸಂಸದರಾಗಿ ರಮೇಶ ಜಿಗಜಿಣಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಮುಂದೆಯೂ ತಮ್ಮೆಲ್ಲರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ರಾಷ್ಡ್ರ ಮಟ್ಟದಲ್ಲಿ ಸೇವೆ ಸಲ್ಲಿಸಲು ಮತ ಹಾಕಿ ಗೆಲ್ಲಿಸಿ. ಜಿಲ್ಲೆಯ ಜೀತದಾಳಾಗಿ ದುಡಿಯುವೆ. ನಿಮ್ಮೆಲ್ಲರ ಧ್ವನಿಯಾಗಿ ಸಂಸತ್ತಿನಲ್ಲಿ ಕೆಲಸ ಮಾಡುತ್ತೇನೆ. ಈ ಬಾರಿ ನನಗೊಂದು ಅವಕಾಶ ನೀಡಿ ಎಂದು ಮತಯಾಚಿಸಿದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಮೋದಿ ಅಭಿವೃದ್ಧಿಯಲ್ಲಿ ಫೇಲ್ ಆಗಿದ್ದಾರೆ. ರೈತರು, ಯುವಕರು, ಮಹಿಳೆಯರ ಅಭಿವೃದ್ಧಿಗೆ ಕಾಂಗ್ರೆಸ್ ಯೋಜನೆ ರೂಪಿಸಿದೆ. ಪ್ರೊ.ರಾಜು ಆಲಗೂರ ಗೆಲ್ಲಿಸಿ ನಮ್ಮೆಲ್ಲರ ಕೈ ಬಲಪಡಿಸಿ. ನಮಗೆಲ್ಲರಿಗೂ ನೈತಿಕ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಎಸ್. ಲೋಣಿ ಮಾತನಾಡಿ, ಪ್ರೊ. ರಾಜು ಆಲಗೂರ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ನಿಷ್ಕ್ರೀಯವಾಗಿದ್ದಾರೆ. ಸಂಸದ ಜಿಗಜಿಣಗಿ ಅವರಿಗೆ ವಿಶ್ರಾಂತಿಗೆ ಕಳುಹಿಸಿ ಪ್ರೊ.ರಾಜು ಆಲಗೂರ ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಹೇಳಿದರು.
ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮುಖಂಡರಾದ ಎಂ.ಆರ್.ಪಾಟೀಲ, ಡಾ.ಬಾಬುರಾಜೇಂದ್ರ ನಾಯಕ, ಮಹಾದೇವ ಹಿರಕುರುಬರ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಡಿ. ಹಕ್ಕೆ, ಮುಖಂಡರಾದ ಡಿ.ಎಲ್.ಚವ್ಹಾಣ, ಸುರೇಶಗೌಡ ಪಾಟೀಲ, ಸಂತೋಷಗೌಡ ಪಾಟೀಲ, ಮಹಾದೇವ ಸಾಹುಕಾರ ಭೈರಗೊಂಡ, ಭೀಮನಗೌಡ ಬಿರಾದಾರ, ಸಾಹೇಬಗೌಡ ಬಿರಾದಾರ, ಸುರೇಶ ಘೋಣಸಗಿ, ದಾನಮ್ಮ ಪಾಟೀಲ, ಬಾಬುಗೌಡ ಪಾಟೀಲ, ಭಾರತಿ, ಮುರ್ತುಜ, ಬಾಬಾಸಹೇಬ, ಶ್ರೀಶೈಲಗೌಡ, ರಾಜು ಜಾಧವ, ಪ್ರಕಾಶಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

