ಮೋರಟಗಿಯಲ್ಲಿ ಬಹಿರಂಗ ಪ್ರಚಾರ | ಮಾಜಿ ಶಾಸಕ ಭೂಸನೂರ ಕಿಡಿ
ಮೋರಟಗಿ: ಒಂದು ಕುಟುಂಬಕ್ಕೆ ಜಯಕಾರ ಹಾಕುವ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಬುದ್ಧಿ ಕಲಿಸಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕು ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಲೋಕಸಭೆ ಚುನಾವಣೆಯ ವಿಜಯಪುರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರ ಮಂಗಳವಾರ ಮತ ಯಾಚಿಸಿ ಅವರು ಮಾತನಾಡಿದರು.
ನಮ್ಮ ಪಕ್ಷ ಯಾವತ್ತೂ ಭಾರತ ಮಾತಾ ಕೀ ಜೈ ಎನ್ನುವ ಮೂಲಕ ದೇಶ ಪ್ರೇಮ ಮೆರೆಯುತ್ತದೆ. ಜನರಲ್ಲಿ ಸೌಹಾರ್ದ ಮೂಡಿಸುತ್ತದೆ. ಆದರೆ ಕಾಂಗ್ರೆಸ್ ನವರು ಕೇವಲ ಸೋನಿಯಾ ಗಾಂಧಿ ಕೀ ಜೈ, ರಾಹುಲ್ ಗಾಂಧಿ ಕೀ ಜೈ ಎನ್ನುವ ಮೂಲಕ ಒಂದು ಕುಟುಂಬವನ್ನು ಓಲೈಸುವ ಕಾರ್ಯ ಮಾಡುತ್ತಾರೆ. ಇಂಥವರಿಂದ ದೇಶದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರು.
ಬಡವರಿಗೆ ಪ್ರಧಾನಿ ನರೇಂದ್ರ ಮೋದಿ ಏನು ಮಾಡಿದ್ದಾರೆ ಎಂದು ಕೆಲವರು ಕೇಳುತ್ತಾರೆ. ಸಂಕಷ್ಟ ಸಮಯದಲ್ಲಿ ಎಲ್ಲರಿಗೂ ವ್ಯಾಕ್ಸಿನ್ ನೀಡುವ ಮೂಲಕ ಪ್ರಾಣ ಉಳಿಸಿದ ಪುಣ್ಯಾತ್ಮ ಮೋದಿ ಎಂಬುದನ್ನು ಯಾರೂ ಮರೆಯಬಾರದು.
ಅಡುಗೆ ಅನಿಲ, ಆರೋಗ್ಯಕ್ಕೆ ಅಭಯ, ಶೌಚಗೃಹ ನಿರ್ಮಾಣಕ್ಕೆ ಸಹಾಯಧನ, ಆಯುಷ್ಮಾನ್ ಭಾರತ, ಜನೌಷಧಿ ಕೇಂದ್ರ, ಮನೆ ಮನೆಗೆ ನಲ್ಲಿ ಸಂಪರ್ಕ, ರೈತರಿಗೆ ಕಿಸಾನ್ ಸಮ್ಮಾನ, ಬಡವರಿಗೆ ಅಕ್ಕಿ ಹೀಗೆ ಅನೇಕ ಯೋಜನೆಗಳನ್ನು ಪ್ರಧಾನಿ ಮೋದಿ ಬಡವರಿಗಾಗಿ ಜಾರಿಗೊಳಿಸಿದ್ದಾರೆ. ನಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕೆ ಮೋದಿ ಕ್ರಮ ಕೈಗೊಂಡಿದ್ದಾರೆ. ನಡೆದಾಡುವ ದೇವರೆಂದೇ ಖ್ಯಾತರಾದ ಸಿದ್ಧೇಶ್ವರ ಶ್ರೀಗಳು ಕೂಡ ಪ್ರಧಾನಿ ಮೋದಿ ಅವರನ್ನು ಕೊಂಡಾಡಿದ್ದಾರೆ. ಕೇವಲ ದೇಶವಲ್ಲ, ಇಂದು ಜಗತ್ತೇ ಅವರ ಮಾತು ಕೇಳುವಂತಾಗಿದೆ. ಗಂಡನಿಂದ ಹಣ ಕಿತ್ತುಕೊಂಡು ಹೆಂಡತಿಗೆ ಕೊಡುವ, ಬಹಿರಂಗವಾಗಿ ಪಾಕಿಸ್ತಾನ್ ಜಿಂದಾಬಾದ್ ಎಂದೂ ಘೋಷಣೆ ಕೂಗಿದರೂ ಕ್ರಮ ಕೈಗೊಳ್ಳದ ಕಾಂಗ್ರೆಸ್ ನಿಂದ ದೇಶ ಭದ್ರವಾಗಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನವರು ದೇಶವನ್ನೇ ಕೊಳ್ಳೆ ಹೊಡೆಯುತ್ತಾರೆ. ರೈತರಿಗೆ ರಾಜ್ಯ ಸರಕಾರ ನೀಡುತ್ತಿದ್ದ ೪ ಸಾವಿರ ರೂ.ಸಹಾಯ ಧನವನ್ನು ಕಾಂಗ್ರೆಸ್ ಸರಕಾರ ಬಂದ್ ಮಾಡಿದೆ. ಸಂವಿಧಾನ ಬರೆದ ಡಾ.ಅಂಬೇಡ್ಕರ್ ಅವರಿಗೆ ಗೌರವ ನೀಡದ ಕಾಂಗ್ರೆಸ್ ಸರಕಾರ ದಲಿತರನ್ನೂ ಕಡೆಗಣಿಸಿದೆ. ಈ ಎಲ್ಲ ಸಂಗತಿಗಳನ್ನು ಪರಿಗಣಿಸಿ ನಾವೆಲ್ಲ ಏಕತೆಯಿಂದ ಬಿಜೆಪಿ ಬೆಂಬಲಿಸೋಣ ಎಂದರು.
ರೈತರ ಹೊಲಗಳು ಹಾಗೂ ಗ್ರಾಮೀಣ ಭಾಗಕ್ಕೆ ರಸ್ತೆಗಳನ್ನು, ಹೊಲಗಳಿಗೆ ಉಚಿತ ವಿದ್ಯುತ್, ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಸಂಕಲ್ಪ ನಮ್ಮದಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ನೀವು ಅಭಿವೃದ್ಧಿ ಸದ್ದು ಕೇಳಲು ಸಾಧ್ಯ ಎಂದರು.
ಡಿ.ಕೆ.ಸುರೇಶ ಕೇವಲ ೨ ಬಾರಿ ಸಂಸದರಾಗಿ ತಮ್ಮ ಆಸ್ತಿ ೨೪೬೫ ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಆದರೆ ಮೋದಿಯವರು ಮೂರು ಬಾರಿ ಮುಖ್ಯಮಂತ್ರಿಯಾಗಿ, ಎರಡು ಬಾರಿ ಪ್ರಧಾನಿಯಾಗಿ ಕೇವಲ ೨ ಕೋಟಿ ಆಸ್ತಿ ಹೊಂದಿದ್ದಾರೆ. ಇದರಿಂದಲೇ ನಮ್ಮ ಮೋದಿ ಅವರ ವ್ಯಕ್ತಿತ್ವ ಅರ್ಥವಾಗುತ್ತದೆ. ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಗಾಗಿ ರಮೇಶ ಜಿಗಜಿಣಗಿ ಅವರನ್ನು ಬೆಂಬಲಿಸುವ ಮೂಲಕ ಮೋದಿ ಅವರ ಕೈಬಲಪಡಿಸಬೇಕು. ಬಲಿಷ್ಠ ಭಾರತ ನಿರ್ಮಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಮೋರಟಗಿ ವ್ಯಾಪ್ತಿಯ ಬಗಲೂರ, ಶಿರಸಗಿ, ಹಾವಳಗಿ, ಯರಗಲ್ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.
ಬಹಿರಂಗ ಸಭೆಯಲ್ಲಿ ಮಲ್ಲಿಕಾರ್ಜುನ ಜೋಗೂರ, ಗುರು ತಳವಾರ, ಸಿದ್ದು ಅನಗೊಂಡ, ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಶ್ರೀಶೈಲಗೌಡ ಬಿರಾದಾರ, ಸಿದ್ದನಗೌಡ ಗುತ್ತರಗಿ ಸೇರಿದಂತೆ ಅನೇಕರು ಇದ್ದರು.

