ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಜಿತೇಂದ್ರ ಕಾಂಬಳೆ ಘೋಷಣೆ
ಇಂಡಿ: ಸಧ್ಯ ಆಲಮಟ್ಟಿ ಆಣೆಕಟ್ಟಿನ ಎತ್ತರ ೫೧೯ ಮೀ. ಇದ್ದು ನಾನು ಸಂಸದನಾಗಿ ಆಯ್ಕೆ ಯಾದರೆ ೫೨೪ ಮೀ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಜಿತೇಂದ್ರ ಕಾಂಬಳೆ ಹೇಳಿದರು.
ಅವರು ಮಂಗಳವಾರ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇಂಡಿ ತಾಲೂಕು ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತಿದ್ದು ಈ ಭಾಗದ ಕೆಲವು ಪ್ರದೇಶ ನೀರಾವರಿಯಿಂದ ವಂಚಿತವಾಗಿದೆ. ಈ ಭಾಗದ ರೈತರ ಜೀವನ ಹಸನಾಗಿಸಲು ಆಲಮಟ್ಟಿ ಆಣೆಕಟ್ಟಿನ ಎತ್ತರ ೫೨೪ ಮೀ ಆಗಲು ಪ್ರಯತ್ನಿಸುವೆ ಎಂದರು.
ಆಲಮಟ್ಟಿ ಆಣೆಕಟ್ಟು ಎತ್ತರ ೫೨೪ ಮೀ ಆದರೆ ವಿಜಯಪುರ ಭಾಗದ ಗುತ್ತಿ ಬಸವಣ್ಣ, ಮುಳವಾಡ, ರೇವಣಸಿದ್ದೇಶ್ವರ, ಇಂಡಿ ಶಾಖಾ ಕಾಲುವೆ,ಚಿಮ್ಮಲಗಿ ಯೋಜನೆ ಎಲ್ಲ ಕಾಲುವೆಗಳಲ್ಲಿ ಮತ್ತು ಇಂಡಿ ತಾಲೂಕಿನ ಕಾಲುವೆಯ ಕೊನೆಯ ಭಾಗದವರಿಗೂ ನೀರು ಬರುತ್ತದೆ ಎಂದರು.
ನಮ್ಮ ದೇಶವು ಪ್ರಜಾ ಸತ್ತಾತ್ಮಕ ಮತ್ತು ಜಾತ್ಯಾತೀತ ರಾಷ್ಟ್ರವಾಗಿದೆ. ನಮ್ಮ ಸಂವಿಧಾನವನ್ನು ಬದಲಾಯಿಸುವ ಸಂಚು ನಡೆದಿದ್ದು ಹಾಗಾದರೆ ನಾವು ರಕ್ತ ಹರಿಸಲು ಸಿದ್ಧ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆರ್.ಪಿ.ಐ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ಚಲವಾದಿ, ಜಿಲ್ಲಾ ಕಾರ್ಯದರ್ಶಿ ಸುಖದೇವ ಮೇಲಿನಕೇರಿ, ತಾಲೂಕಾ ಅಧ್ಯಕ್ಷ ಚಂದ್ರು ಮೇಲಿನಮನಿ, ತಾಲೂಕಾ ಕಾರ್ಯದರ್ಶಿ ಪರಶುರಾಮ ಉಕ್ಕಲಿ ಮತ್ತಿತರಿದ್ದರು.

