ಸಾಲಮನ್ನಾ-ವಿಮೆ-ಕೆರೆಗೆ ನೀರು-ಕಬ್ಬಿನ ಬಿಲ್-ಜಾನುವಾರಗಳಿಗೆ ಮೇವು ಒದಗಿಸಲು ಆಗ್ರಹ
ವಿಜಯಪುರ: ಮುಂಗಾರು, ಹಿಂಗಾರು ಸಂಪೂರ್ಣ ಕೈಕೊಟ್ಟಿರುವುದರಿಂದ ನಾಡಿನ ರೈತಕುಲ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಈ ವರ್ಷದ ಅತೀ ಹೆಚ್ಚು ಬಿಸಿಲಿನ ಕಾರಣದಿಂದ ಜನ ಜಾನುವಾರುಗಳು ಹನಿ ನೀರಿಗಾಗಿ ಪರದಾಡುವಂತಾಗಿದೆ. ಆದ್ದರಿಂದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರ ಬರ ಪರಿಹಾರ ಕೊಡಬೇಕು, ಕುಡಿಯಲು ನೀರು ಹಾಗೂ ಮೇವಿನ ವ್ಯವಸ್ಥೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನಪ್ಪಾ ಪೂಜಾರಿ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮಂಗಳವಾರ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲೆಯ ಎಲ್ಲಾ ೧೩ ತಾಲೂಕುಗಳಿಂದ ಆಗಮಿಸಿದ ರೈತರು ನಗರದ ಗಾಂಧಿ ವೃತ್ತದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ, ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಸವೇಶ್ವರ ವೃತ್ತದ ಮಾರ್ಗವಾಗಿ ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿ ಹೋರಾಟ ಮಾಡಿದರು, ನಂತರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಮನವಿ ಸ್ವೀಕರಿಸಿ ನಮ್ಮ ವ್ಯಾಪ್ತಿಯಲ್ಲಿ ಬಗೆಹರಿಸಬಹುದಾದ ಎಲ್ಲಾ ಬೇಡಿಕೆಗಳನ್ನು ಬಗೆಹರಿಸುವುದಾಗಿ ಹೇಳಿ ಭರವಸೆ ಕೊಟ್ಟ ನಂತರ ಹೋರಾಟ ಮುಕ್ತಾಯಗೊಳಿಸಲಾಯಿತು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಚುನಪ್ಪಾ ಪೂಜಾರಿ,
ಜಿಲ್ಲೆಯಲ್ಲಿ ಕುಡಿಯಲು ನೀರು ಹಾಗೂ ಮೇವಿನ ಸಮಸ್ಯೆ ತುಂಬಾ ಇದೆ, ಫಸಲ್ ಭೀಮಾ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆದು ಮಧ್ಯವರ್ತಿಗಳಿಗೆ ಹೊರಗಿಟ್ಟು ಸರಕಾರವೇ ವಿಮೆಯನ್ನು ತುಂಬಿಸಿಕೊಳ್ಳುವಂತಹ ವ್ಯವಸ್ಥೆ ಮಾಡಿದಾಗ ನಿಜವಾಗಿ ನಷ್ಟಗೊಂಡ ರೈತರಿಗೆ ಪರಿಹಾರ ಸಿಗುವುದು, ವಿದ್ಯುತ್ ಸಮಸ್ಯೆ ಬಗೆಹರಿಸಬೇಕು. ಜೊತೆಗೆ ರಾತ್ರಿ ಸಿಂಗಲ್ ಫೇಸ್ ಕೊಡಬೇಕು, ಇತ್ತಿಚಿಗೆ ಅಕಾಲಿಕ ಗಾಳಿ ಹಾಗೂ ಮಳೆಯಿಂದಾಗಿ ನಷ್ಟಗೊಂಡ ರೈತರಿಗೆ ಸರಿಯಾಗಿ ಪರಿಹಾರ ನೀಡಬೇಕು ಎಂದುಆಗ್ರಹಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಮಾತನಾಡಿ, ಜಿಲ್ಲೆಯ ಎಲ್ಲಾ ೯ ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಬಾಕಿ ಬಿಲ್ಲು ಬರಬೇಕು, ಆಲಮಟ್ಟಿ ಜಲಾಶಯ ಎತ್ತರಗೊಳ್ಳಬೇಕು. ಇದರಿಂದ ಹೆಚ್ಚುವರಿ ೧೩೦ ಟಿ.ಎಂ.ಸಿ ನೀರು ಉಳಿಯುವುದು. ಇದರಿಂದ ಜಿಲ್ಲೆಯ ಎಲ್ಲಾ ಕೆರೆ ತುಂಬಿ ಅಂರ್ತಜಲ ಹೆಚ್ಚಾಗುವುದು ಎಂದು ವಿವಿಧ ಸಮಸ್ಯೆಗಳ ಕುರಿತು ಮಾತನಾಡಿದರು.
ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು ೨೪ ಏತನೀರಾವರಿ ಯೋಜನೆಗಳು ನಡೆಯುತ್ತಿದ್ದು ಎಲ್ಲವೂ ಕಳಪೆ ಮಟ್ಟದಿಂದ ಕೂಡಿದ್ದು, ಯಾವ ಕಾಮಗಾರಿಯೂ ಸಂಪೂರ್ಣ ಮುಗಿದಿಲ್ಲ. ರೈತರಿಗೆ ಬರಬೇಕಾಗಿರುವ ಭೂಸ್ವಾಧೀನದ ಹಣ ಹತ್ತು ವರ್ಷಗಳಾದರೂ ಇನ್ನು ಬಂದಿಲ್ಲ, ಬೂದಿಹಾಳ-ಪೀರಾಪುರ, ಚಿಮ್ಮಲಗಿ, ತುಬಚಿ ಬಬಲೇಶ್ವರ, ಮುಳವಾಡ, ರೇವಣ ಸಿದ್ದೇಶ್ವರ ಏತನೀರಾವರಿ ಯೋಜನೆಯಡಿ ರೈತರಿಗೆ ಭೂ ಪರಿಹಾರದ ಹಣ ಇನ್ನುವರೆಗೂ ಬಂದಿಲ್ಲ, ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಹಣ ಕೊಡದೇ ಯಾರಿಗೂ ಕಾಮಗಾರಿ ಮಾಡದಂತೆ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಕೋಲಾರ ಅಧ್ಯಕ್ಷ ಸೋಮು ಬಿರಾದಾರ, ಮಹಿಳಾ ಜಿಲ್ಲಾಧ್ಯಕ್ಷೆ ರೇಖಾ ಪಾಟೀಲ, ದೇವರ ಹಿಪ್ಪರಗಿ ತಾಲೂಕಾ ಅಧ್ಯಕ್ಷ ಈರಪ್ಪ ಕುಳೆಕುಮಟಗಿ, ಸಿ.ಎಸ್.ಪ್ಯಾಠಿ, ಶಾನೂರ ನಂದರಗಿ, ಸಂಪತ್ತ ಜಮಾದಾರ ಮಾತನಾಡಿದರು.
ಈ ವೇಳೆ ರಾಜ್ಯ ಕಾರ್ಯಾಧ್ಯಕ್ಷ ರಾಜು ಪವಾರ, ಬಬಲೇಶ್ವರ ತಾಲೂಕಾ ಆದ್ಯಕ್ಷ ಮಕಬುಲ ಕಿಜಿ, ಇಂಡಿ ಅಧ್ಯಕ್ಷ ಹೆಚ್ ಎಮ್ ಪೂಜಾರಿ, ತಾಳಿಕೋಟಿ ಅಧ್ಯಕ್ಷ ಶ್ರೀಶೈಲ ವಾಲಿಕಾರ, ವಿಜಯಪುರ ತಾಲೂಕಾ ಅಧ್ಯಕ್ಷ ಅರುಣಗೌಡ ತೇರದಾಳ, ಶಿವಾನಂದಯ್ಯ ಹಿರೇಮಠ, ಹಣಮಂತ ಬ್ಯಾಡಗಿ, ರಾಜುಗೌಡ ಬಿರಾದಾರ, ಸಂಗಪ್ಪ ಟಕ್ಕೆ, ಅಲೋಕ ಬೈರಾಮಡಿ, ರಾಮನಗೌಡ ಪಾಟೀಲ, ಪ್ರಕಾಶ ತೇಲಿ, ಸಂಗಪ್ಪ ಚಲವಾದಿ, ಸಂಗಮೇಶ ಹುಣಸಗಿ, ನಜೀರ ನಂದರಗಿ, ಮಹದೇವ ಕದಮ್, ಮಹಾದೇವಪ್ಪ ತೇಲಿ, ಮಲ್ಲಿಕಾರ್ಜುನ ಗೋಡೆಕರ, ಮಹಾತೇಂಶ ಮಮದಾಪುರ, ಕಲ್ಲಪ್ಪ ಪಾರಶೆಟ್ಟಿ, ಪ್ರಭು ಕಾರಜೋಳ, ಸುಭಾಸ ಸಜ್ಜನ, ಶಶಿಕಾಂತ ಬಿರಾದಾರ, ಸತೀಶ ಕುಲ್ಲೊಳ್ಳಿ, ಮಹಿಬೂಬ ಬಾಷಾ ಮನಗೂಳಿ, ಸೇರಿದಂತೆ ನೂರಾರು ಜನ ಇದ್ದರು

