ವಿಜಯಪುರ: ನಗರದಲ್ಲಿ ಮಂಗಳವಾರ ಮಾದಿಗ ಸಮುದಾಯದ ಬೃಹತ್ ಸಭೆ ನಡೆಸಿ, ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಪರ ಮತ ಯಾಚಿಸಲಾಯಿತು.
ಈ ವೇಳೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ನಿಮಗೆಲ್ಲ ಅನುಕೂಲವಾಗಿದೆ. ನಿಮ್ಮ ಮಕ್ಕಳು ಸುಶಿಕ್ಷಿತರಾಗಲು ಸರಕಾರ ಶ್ರಮಿಸಿದೆ. ದಮನಿತರ ಏಳಿಗೆಗಾಗಿ ಕಾಂಗ್ರೆಸ್ ಯಾವತ್ತೂ ಮಿಡಿದಿದೆ. ಬಿಜೆಪಿ ಅಭ್ಯರ್ಥಿ ಮತ್ತು ಆ ಪಕ್ಷದಿಂದ ನಿಮಗೆ ಇಲ್ಲಿಯವರೆಗೆ ಯಾವುದೇ ಲಾಭವಾಗಿಲ್ಲ ಎಂದರು.
ಹಿಂದುತ್ವ ಬಿಜೆಪಿಯವರ ಮನೆ ಆಸ್ತಿ ಅಲ್ಲ. ಹಿಂದುಳಿತ ಜಾತಿಯವರ ಮತ ಕೇಳಲು ಸಂವಿಧಾನ ವಿರೋಧಿ ಜನಕ್ಕೆ ನೈತಿಕತೆ ಇಲ್ಲ. ವಿಶ್ವದಲ್ಲಿ ಗೋಮಾಂಸ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಮೊದಲು ಕಸಾಯಿಖಾನೆ ಬಂದ್ ಮಾಡಿ ಗೋಮಾತೆ ಬಗ್ಗೆ ನಿಜವಾದ ಪ್ರೀತಿ ತೋರಿಸಿ. ಚೀನಾ ಭೂಮಿ ಅತಿಕ್ರಮಿಸಿದೆ. ನಮ್ಮ ಪ್ರಧಾನಿ ದುರ್ಬಲ, ಅವರು ಯುವಕರ ತಲೆಕೆಡಿಸುತ್ತಾರೆ. ಇದೆಲ್ಲಕ್ಕೂ ಭಿನ್ನವಾಗಿರುವ ದಲಿತಪರ, ಜೀವಪರ ವ್ಯಕ್ತಿಯಾದ ಆಲಗೂರಗೆ ಮತ ಹಾಕಿ ಎಂದು ಕೋರಿದರು.
ಜಿಲ್ಲಾ ಉಸ್ತುವಾರಿ, ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ ಮಾತನಾಡಿ, ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಭಾರತವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಿದೆ. ಈ ದೇಶವನ್ನು ಸೂಜಿಯಿಂದ ವಿಮಾನಯಾನ, ಶಾಲೆಯಿಂದ ವಿಶ್ವವಿದ್ಯಾಲಯಗಳವರೆಗೆ ಕಟ್ಟಲಾಗಿದೆ. ರಾಜ್ಯದಲ್ಲೂ ನಮ್ಮ ಸರಕಾರ ನಿಮ್ಮ ಪ್ರಗತಿಪರವಾಗಿದೆ. ಇಲ್ಲಿ ಆಲಗೂರರು ತಮ್ಮೆಲ್ಲರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.
ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ಕನಸಲ್ಲೂ ನಾನು ಎಡ-ಬಲ ಸಮಾಜ ಎಂದು ಬೇರೆ ಮಾಡಿಲ್ಲ. ನಾನು ಒಂದು ಪಂಗಡಕ್ಕೆ ಮಾತ್ರ ಸೀಮಿತವಾಗಲು ಇಚ್ಛಿಸುವುದಿಲ್ಲ. ಇದು ರಾಜಕಾರಣಕ್ಕಾಗಿ ನಾನು ಹೇಳುತ್ತಿಲ್ಲ. ನಿಮ್ಮ ಜೊತೆ ನಾನು ಯಾವತ್ತೂ ಇರುವೆ ಎಂದರು.
ಹಿರಿಯ ಮುಖಂಡ ಚಂದ್ರಶೇಖರ ಕೊಡಬಾಗಿ, ನಿವೃತ್ತ ಐಅರ್‌ಎಸ್ ಅಧಿಕಾರಿ ಎಚ್.ಆರ್. ಭೀಮಾಶಂಕರ ವೇದಿಕೆಯಲ್ಲಿ ಇದ್ದರು.
ಪಕ್ಷದ ಎಸ್‌ಸಿ ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ ಪ್ರಾಸ್ತಾವಿಕ ಮಾತನಾಡಿದರು.
ಸುಭಾಶ ಕಾಲೇಬಾಗ, ಕೆ.ಕೆ.ಕಳಸದ ಸೇರಿದಂತೆ ಹಲವಾರು ಮುಖಂಡರು, ಸಮುದಾಯದ ಪ್ರಮುಖರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

