– ಇಲಾಹಿ ಇ. ಜಮಖಂಡಿ
ಚಿಮ್ಮಡ: ಚುನಾವಣಾ ಕಾವು ಒಂದೆಡೆ ಏರುತಿದ್ದರೆ ಈ ಭಾಗದ ತಾಪಮಾನ ಅಪಾಯ ಮಟ್ಟದಲ್ಲಿ ಹೆಚ್ಚುತ್ತಿರುವುದರಿಂದ ಮಕ್ಕಳು, ವಯೋವ್ರದ್ದರು, ಅನಾರೋಗ್ಯ ಪೀಡಿತರು ಈ ಬಿಸಿಲ ತಾಪದಿಂದ ಬಳಲುತಿದ್ದಾರೆ.
ಗ್ರಾಮದ ಮುಖ್ಯ ರಸ್ತೆಗಳಂತೂ ಜನರಿಲ್ಲದೇ ಬಿಕೋ ಎನ್ನುತ್ತಿವೆ.
ಬೆಳಿಗ್ಗೆ ಎಂಟು ಘಂಟೆಯಿಂದಲೇ ಏರಿಕೆಯಾಗುತ್ತಿರುವ ಬಿಸಿಲಿನ ಪ್ರಖರತೆ ಮದ್ಯಾಹ್ನ ೧ ಘಂಟೆ ಎನ್ನುವಷ್ಟರಲ್ಲಿ ಅಪಾಯಮಟ್ಟ ತಲುಪುತ್ತಿದೆ. ಮದ್ಯರಾತ್ರಿಯಲ್ಲೂ ತೀವ್ರ ಧಗೆಯಿಂದ ನಿದ್ರೆಯಿಲ್ಲದೆ ಜನರು ಬಳಲುವಂತಾಗಿದ್ದು, ಜಾನುವಾರುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.
ಈ ಮೊದಲು ನಗರ ಪ್ರದೇಶಗಳಿಗೆ ಮಾತ್ರ ಸಿಮಿತವಾಗಿರುತಿದ್ದ ತಾಪಮಾನ ಏರಿಕೆ ಇದೀಗ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದೆ, ಇದಕ್ಕೆ ಗ್ರಾಮಗಳಲ್ಲಿ ಕಾಡಿನಂತೆ ಬೆಳೆದ ಮರಗಳಿಗೆ ಕೊಡಲಿ ಏಟು ಬಿದ್ದಿರುವುದು, ಗ್ರಾಮದ ಗಲ್ಲಿ ಗಲ್ಲಿಗಳು ಕಾಂಕ್ರೀಟ್ ಕಾಡಿನಂತಾಗಿರುವುದು ಕಾರಣ. ಹಳೆಯ ಕಾಲದ ಮನೆಗಳ ಛಾವಣಿಗೆ ತಾಪಮಾನ ಹೀರಿಕೊಳ್ಳುವ ಶಕ್ತಿಯುಳ್ಳ ಮಣ್ಣಿನ ಮೇಲಮುದ್ದಿ, ಕಟ್ಟಿಗೆಯಿಂದ ಖಡೇಪಾಟ, ಪ್ರತೀ ಬಚ್ಚಲುಗಳಿಗೆ ಇಂಗುಗುಂಡಿ ನಿರ್ಮಾಣ ಮಾಡಲಾಗುತಿತ್ತು. ಆದರೆ ಈಗಿನ ಮನೆಗಳಿಗೆ ತಾಪಮಾನ ಹೆಚ್ಚಿಸುವ ಪತ್ರಾಸ ಮೇಲ್ಛಾವಣಿ, ಕಾಂಕ್ರೀಟ್ ಸ್ಲ್ಯಾಬ್ ಹಾಕಿಸುತ್ತಿರುವುದರಿಂದ ತಾಪಮಾನ ಅತಿಯಾಗಿ ಏರಿಕೆಯಾಗುತ್ತಿದೆ. ಈಗ ಬೀಸಿಗೆಯಿಂದಾಗಿ ವಿದ್ಯುತ್ ಕೂಡ ಕಣ್ಣಾ ಮುಚ್ಚಾಲೆ ಆಡುತ್ತಿರುವುದರಿಂದ ವಯೋವೃದ್ದರ ಪಾಡು ಹೇಳತೀರದು,
ಇದುವರೆಗೆ ಈ ಭಾಗದ ತಾಪಮಾನ ೩೬ ಡಿಗ್ರಿ ಸೆಲ್ಚಿಯಸ್‌ಗಿಂತಲೂ ಹೆಚ್ಚಿದ ಉಧಾಹರಣೆಯಿಲ್ಲ ಆದರೆ ಈ ಬಾರಿ ೪೦ ರಿಂದ ೪೩ ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ಏರಿಕೆಯಾಗಿದ್ದರಿಂದ ಆಮ್ಲಜನಕ ಕೊರತೆಯಿಂದ ಸಾರ್ವಜನಿಕರು ಬಳಲುತಿದ್ದಾರೆ.
ಪುಣ್ಯಕ್ಕೆ ಇಲ್ಲಿನ ಜಿಎಲ್ಬಿಸಿ ಕಾಲುವೆಗೆ ಇತ್ತೀಚೆಗೆ ನೀರು ಹರಿಸಿರುವುದರಿಂದ ಕೆರೆ, ಬಾವಿ, ಬೋರ‍್ವೆಲ್‌ಗಳ ಅಂತರ್‌ಜಲಮಟ್ಟ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು ಬೇಸಿಗೆ ರಜೆಯಲ್ಲಿರುವ ಮಕ್ಕಳು ತಮ್ಮ ಪಾಲಕರೊಂದಿಗೆ ಬಾವಿಗಳಲ್ಲಿ ಈಜುತ್ತ, ಊರ ಹೊರಗಿನ ಮರಗಳಲ್ಲಿ ಮರ ಕೋತಿಯಾಟ ಆಡುತ್ತ ಕಾಲ ಕಳೆಯುತಿದ್ದರೆ, ನಿರ್ಣಾಯಕ ಘಟ್ಟದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಸಂಜೆವರೆಗೂ ಟ್ಯೂಷನ್ ಮೊರೆ ಹೋಗುತಿದ್ದಾರೆ, ಯುವಕರಂತೂ ಎಳೆನೀರು, ತಂಪು ಪಾನೀಯ ಸೇವಿಸುತ್ತ ಬೇಸಿಗೆಯನ್ನು ತಳ್ಳುತಿದ್ದಾರೆ.
ಈ ನಡುವೆ ಒಂದೆರಡು ದೊಡ್ಡ ಮಳೆಗಳು ಭೂವಿಗಿಳಿದಲ್ಲಿ ವಾತಾವರಣ ತಂಪಾಗುವುದಲ್ಲದೇ ಬಿತ್ತನೆ ಕಾರ್ಯಕ್ಕೆ ಅಣಿಯಾಗಲೂ ಸಹಕಾರಿಯಾಗಲಿದೆ ಎಂಬುದು ಗ್ರಾಮದ ರೈತರ ಆಶಯವಾಗಿದೆ.


