ಮುದ್ದೇಬಿಹಾಳ: ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಮತದಾನ ಬಹುಮುಖ್ಯ ಪಾತ್ರ ವಹಿಸಿದ್ದು, ಮತದಾನದಿಂದ ಯಾರು ವಂಚಿತರಾಗದೆ ಮೇ-೦೭ ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ಎಸ್.ಎಸ್.ಕಲ್ಮನಿ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಸೋಮವಾರ ನಡೆದ “ಮತದಾನ ಜಾಗೃತಿ ತಾಲೂಕು ಮಟ್ಟದ ಕಾಲ್ನಡಿಗೆ ಜಾಥಾ”ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಸ್ವೀಪ್ ಸಮಿತಿಯಿಂದ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ನಗರ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತದಾರರಿಗೆ ಮತದಾನ ಕುರಿತು ಅರಿವು ಮೂಡಿಸುವುದರ ಜೊತೆಗೆ ಅವರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿಹಿಡಯಬೇಕು. ಪ್ರತಿಯೊಬ್ಬ ಪ್ರಜೆಗೂ ತನ್ನ ಹಕ್ಕನ್ನು ಚಲಾಯಿಸಲು ಅವಕಾಶ ನೀಡಲಾಗಿದೆ. ಪ್ರಜೆಗಳ ಆಯ್ಕೆಯಿಂದ ಸದೃಢ ಸರ್ಕಾರಗಳ ರಚನೆಯಾಗುತ್ತದೆ. ಆಸೆ, ಆಮಿಷಗಳಿಗೆ ಒಳಗಾಗದೆ ನಿಮ್ಮ ಹಕ್ಕು ಚಲಾಯಿಸಿ ಎಂದು ಸಲಹೆ ನೀಡಿದರು.
ತಹಶೀಲ್ದಾರ ಬಸವರಾಜ ನಾಗರಾಳ ತಾಲೂಕು ಪಂಚಾಯತಿ ಆವರಣದಲ್ಲಿ ಕಾಲ್ನಡಿಗೆ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಅಲ್ಲಿಂದ ಶುರುವಾದ ಜಾಥಾ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಿ.ಆರ್.ಅಂಬೇಡ್ಕರ್ ವೃತ್ತ, ರಿಲಯನ್ಸ್ ಪೆಟ್ರೋಲ್ ಪಂಪ್, ತಾಳಿಕೋಟೆ ವೃತ್ತ, ಇಂದಿರಾ ವೃತ್ತ, ಬಜಾರ ನಲ್ಲಿರುವ ಗ್ರಾಮ ದೇವತೆ ದೇವಸ್ಥಾನ, ಬಸವೇಶ್ವರ ವೃತ್ತ, ಬಸ್ ನಿಲ್ದಾಣದಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸಲಾಯಿತು.
ಜಾಥಾದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ಮತದಾನ ಜಾಗೃತಿ ಟ್ಯಾಬ್ಲೋ ಪಾಲ್ಗೊಂಡು ಸಾರ್ವಜನಿಕರ ಗಮನ ಸೆಳೆಯಿತು. ಎಲ್ಲ ಗ್ರಾಮ ಪಂಚಾಯತಿಯ ಸ್ವಚ್ಛ ವಾಹಿನಿಗಳು ಅಲಂಕೃತಗೊಡು ಜಿಂಗಲ್ಸ್ ಗಳನ್ನು ಆಳವಡಿಸಿ ಬೀದಿಗಳಲ್ಲಿ ಸಂಚರಿಸಿದವು. ಪಿಎಸ್‌ಐ ಸಂಜೀವ ತಿಪರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಬಿ.ಎಸ್.ಬಳಗನೂರ, ತಾ.ಪಂ. ಸಹಾಯಕ ನಿರ್ದೇಶಕ ಕೆ.ಎಸ್.ಜಾಧವ, ತಾಲೂಕು ಆರೋಗ್ಯ ಅಧಿಕಾರಿ ಸತೀಶ ತಿವಾರಿ, ಸಾಮಾಜಿಕ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಎಸ್.ಜಿ.ಸಂಗಾಲಕ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು-ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

