ಬಸವನಬಾಗೇವಾಡಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ಪ್ರೊ.ರಾಜು ಆಲಗೂರ ಪರ ಪ್ರಚಾರಾರ್ಥವಾಗಿ ಮೇ. ೧ ರಂದು ತಾಲೂಕಿನ ಮುತ್ತಗಿ ಗ್ರಾಮದ ಮಾರುತೇಶ್ವರ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ೯ ಗಂಟೆಗೆ ಹಮ್ಮಿಕೊಂಡಿರುವ ಪ್ರಚಾರ ಸಭೆಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಬಸವನಬಾಗೇವಾಡಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ಕಾರ್ಯಾಲಯದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಚಾರ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಪ್ರೊ.ರಾಜು ಆಲಗೂರ, ಸಚಿವ ಶಿವಾನಂದ ಪಾಟೀಲ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಲಿದ್ದಾರೆ. ಈ ಸಭೆಗೆ ಮತಕ್ಷೇತ್ರದ ರೆಡ್ಡಿ ಸಮುದಾಯ ಸೇರಿದಂತೆ ಬಸವನಬಾಗೇವಾಡಿ ಮತಕ್ಷೇತ್ರದ ಪಕ್ಷದ ಮುಖಂಡರು, ಕಾರ್ಯಕರ್ತರು ಆಗಮಿಸಬೇಕೆಂದು ಮನವಿ ಮಾಡಿಕೊಂಡ ಅವರು, ಈಗಾಗಲೇ ವಿಜಯಪುರ ಲೋಕಸಭಾ ಮತಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಮತದಾರರು ಜಿಲ್ಲೆಯಲ್ಲಿ ಆಗಿರುವ ಮತ್ತು ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಆತ್ಮಾವಲೋಕನ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವ ಭರವಸೆ ಮೂಡಿದೆ. ನಮ್ಮ ಅಭ್ಯರ್ಥಿ ವಿದ್ಯಾವಂತರಾಗಿದ್ದಾರೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತಲಿದ್ದಾರೆ. ಇವರೊಬ್ಬ ಮಾದರಿ ಸಂಸದರಾಗುವ ಅರ್ಹತೆ ಹೊಂದಿದ್ದಾರೆ. ಪ್ರೊ.ರಾಜು ಆಲಗೂರ ಅವರು ೧ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ನಮ್ಮ ಮತಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲರ ಸುಪುತ್ರಿ ಬಾಗಲಕೋಟದಲ್ಲಿ ಸ್ಪರ್ಧೆ ಮಾಡುತ್ತಿರುವದರಿಂದಾಗಿ ಅವರು ಕ್ಷೇತ್ರದ ೮೩ ಗ್ರಾಮಗಳಲ್ಲಿರುವ ಪಕ್ಷದ ಎಲ್ಲ ಮುಖಂಡರ, ಕಾರ್ಯಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಿದ್ದಾರೆ. ಪಕ್ಷವು ಹಿಂದಿನ ಯಾವ ಲೋಕಸಭೆ ಚುನಾವಣೆಗೂ ಆದ್ಯತೆ ನೀಡಿರಲಿಲ್ಲ. ಈ ಸಲ ನಡೆಯುತ್ತಿರುವ ಲೋಕಸಭೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪಕ್ಷದ ಅಭ್ಯರ್ಥಿ ಗೆಲುವಿಗೆ ಜಿಲ್ಲೆಯ ಸಚಿವದ್ವಯರು, ಮುಖಂಡರು, ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಈ ಸಲ ನಮ್ಮ ಗೆಲುವು ಖಚಿತವಾಗಿದೆ ಎಂದರು.
ಕೊಲ್ಹಾರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಫೀಕ ಪಕಾಲಿ ಮಾತನಾಡಿ, ಮೇ. ೧ ರಂದು ನಡೆಯಲಿರುವ ಪ್ರಚಾರ ಸಭೆಗೆ ನಮ್ಮ ಭಾಗದಿಂದ ಹೆಚ್ಚಿನ ಜನತೆಯನ್ನು ಕರೆದುಕೊಂಡು ಬಂದು ಭಾಗವಹಿಸುತ್ತೇವೆ. ಚುನಾವಣೆಯಲ್ಲಿ ನಮ್ಮ ಭಾಗದಿಂದ ಹೆಚ್ಚಿನ ಮತಗಳು ಲಭಿಸುತ್ತವೆ ಎಂದರು.
ಮುತ್ತಗಿ ಗ್ರಾಮದ ಮುಖಂಡ ರಮೇಶ ಸೂಳಿಬಾವಿ ಮಾತನಾಡಿ, ರೆಡ್ಡಿ ಸಮಾಜದ ಎಲ್ಲ ಬಾಂಧವರು ಒಂದೆಡೆ ಸೇರಿಸಿ ನಮ್ಮ ಸಮಾಜದಿಂದ ಹೆಚ್ಚು ಮತಗಳು ಪಕ್ಷಕ್ಕೆ ಲಭಿಸುವಂತೆ ಮಾಡುವ ಜೊತೆಗೆ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಹುಲ ಕುಬಕಡ್ಡಿ, ಕಲ್ಲು ದೇಸಾಯಿ, ಪ್ರೇಮಕುಮಾರ ಮ್ಯಾಗೇರಿ, ತಾನಾಜಿ ನಾಗರಾಳ, ರವಿ ರಾಠೋಡ, ಹನೀಪ ಮಕಾನದಾರ, ಶೇಖರ ಗೊಳಸಂಗಿ, ಮಹಾಂತೇಶ ಸಾಸಾಬಾಳ, ಸಿ.ಪಿ.ಪಾಟೀಲ, ಎಸ್.ಎಸ್.ಗರಸಂಗಿ, ಪುಟ್ಟುಗೌಡ ಪಾಟೀಲ, ಭೀಮಶಿ ಜಗ್ಗಲ್ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

