ಅನಧಿಕೃತ ಮನೆ ನಿರ್ಮಾಣ ತಡೆಗೆ ರೈತ ಸಂಘ ಮನವಿ
ದೇವರಹಿಪ್ಪರಗಿ: ಗ್ರಾಮದಲ್ಲಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಮನೆಯ ನಿರ್ಮಾಣ ತಡೆದು ರೈತರಿಗೆ ಅನುಕೂಲ ಮಾಡಿಕೊಡುವಂತೆ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ದೇವೂರ ಗ್ರಾಮದ ರೈತಸಂಘದ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ ಕಚೇರಿಗೆ ಆಗಮಿಸಿ ರಸ್ತೆಯಲ್ಲಿ ಮನೆ ನಿರ್ಮಾಣ ಮಾಡುತ್ತಿರುವ ಕುರಿತು ಗಮನ ಸೆಳೆದರು. ಈ ಸಂದರ್ಭದಲ್ಲಿ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕಾ ಪಾಟೀಲ ಮಾತನಾಡಿ, ದೇವೂರ ಗ್ರಾಮದಲ್ಲಿ ಜಟ್ಟಿಂಗರಾಯ ಮತ್ತು ಯಲ್ಲಮ್ಮನ ದೇವಸ್ಥಾನಗಳ ಮೂಲಕ ಸರ್ಕಾರಿ ನಕಾಶೆಯಲ್ಲಿರುವಂತೆ ರಿ.ಸ.ನಂ ೧ ರಿಂದ ೨೬ ರವರೆಗಿನ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಬೂಮಾ ಗುಲಾಬ್ ನಧಾಫ್ ಎಂಬುವವರು ಸಾರ್ವಜನಿಕ ಕೈಪಂಪು ಮುಚ್ಚಿ ಅದರ ಮೇಲೆ ಅನಧಿಕೃತ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ಎರಡು ವರ್ಷಗಳ ಹಿಂದೆಯೇ ತಹಶೀಲ್ದಾರರಿಗೆ ಮನವಿ ಮಾಡಿ ಮನೆ ನಿರ್ಮಾಣ ತಡೆಯಲಾಗಿತ್ತು. ಈಗ ಪುನಃ ಮನೆ ನಿರ್ಮಾಣ ಆರಂಭಿಸಿದ್ದಾರೆ. ಈ ಬಗ್ಗೆ ಗ್ರಾಮದ ರೈತರು ಪ್ರಶ್ನೇ ಮಾಡಲಾಗಿ ಜಗಳಕ್ಕೆ ಬರುತ್ತಿದ್ದಾರೆ. ಆದ್ದರಿಂದ ತಹಶೀಲ್ದಾರ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ಈ ಬಗ್ಗೆ ಕ್ರಮ ಕೈಗೊಂಡು ಗ್ರಾಮಸ್ಥರ ರಸ್ತೆ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು. ನಂತರ ತಹಶೀಲ್ದಾರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರರು ಈ ವಿಷಯದ ಕುರಿತು ಅಗತ್ಯ ಕ್ರಮ ವಹಿಸುವಂತೆ ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಆದೇಶಿಸಿದರು.
ಹಣಮಂತ್ರಾಯ ಪಾಟೀಲ, ಸೋಮು ಸಜ್ಜನ, ಸುರೇಶ ಪವಾರ, ಅಮೀನಗೌಡ ಬಿರಾದಾರ, ದೇವಿಂದ್ರ ಮಾದರ, ಹುಸೇನಸಾ ಮುಲ್ಲಾ, ಶ್ರೀಮಂತ ರಾಠೋಡ, ತುಕಾರಾಮ ರಾಠೋಡ, ಸಾಹೇಬಗೌಡ ಬಿರಾದಾರ ಇದ್ದರು.

