ವಿಜಯಪುರ: ಇಲ್ಲಿಯ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ಆಲಗೂರ ಗೆಲುವು ಸೂರ್ಯ ಚಂದ್ರ ಉದಯಿಸುವಷ್ಟೇ ಸತ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಭವಿಷ್ಯ ನುಡಿದರು.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿಗಳ ಯಶಸ್ಸು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಶ್ರೀ ರಕ್ಷೆಯಾಗಲಿವೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನುಡಿದಂತೆ ನಡೆದಿದೆ, ಈ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ದೊಡ್ಡ ಸಂಕಲ್ಪ ಮಾಡಿದ್ದು, ಜನತೆ ಆಶೀರ್ವಾದ ದೊರಕುವುದು ಶತಸಿದ್ದ ಎಂದರು.
ವಿಜಯಪುರ ಜಿಲ್ಲೆಯನ್ನು ಮೂರು ಬಾರಿ ಸಂಸತ್ ನಲ್ಲಿ ಪ್ರತಿನಿಧಿಸಿದ ರಮೇಶ ಜಿಗಜಿಣಗಿ ಅವರ ವಿರುದ್ಧ ಆಡಳಿತ ಅಲೆ ಇದೆ, ಅವರು ಗ್ರಾಮೀಣ ಭಾಗಕ್ಕೆ ಸಂಚರಿಸಿಲ್ಲ, ಜನರ ಸಮಸ್ಯೆಗೆ ಸ್ಪಂದಿಸಿಲ್ಲ, ಹೀಗಾಗಿ ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಾತ್ರಿ ಎಂದರು. ಅಷ್ಟೇ ಅಲ್ಲ 1 ಲಕ್ಷ ಮತಗಳ ಅಂತರದಿಂದ ಪ್ರೊ.ರಾಜು ಆಲಗೂರ ಗೆಲುವು ಸಾಧಿಸುವುದು ನಿಶ್ಚಿತ ಎಂದರು.
ನದಿಗಳ ಜೋಡಣೆ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ದಿವ್ಯ ಕನಸಾಗಿತ್ತು, ಈ ಕನಸನ್ನೇ ತನ್ನ ಅಸ್ತ್ರವಾಗಿ ಬಳಸಿದ ಬಿಜೆಪಿ ಈ ಹಿಂದಿನ ಚುನಾವಣೆಯಲ್ಲಿ ಈ ವಿಷಯವನ್ನು ಪ್ರಬಲವಾಗಿ ಪ್ರತಿಪಾದಿಸಿತು, ಜೊತೆಗೆ ಗುಜರಾತ್ ಮಾಡೆಲ್, ನಮೋ ಬ್ರಿಗೇಡ್ ಮೂಲಕ ತೃತೀಯ ವಲಯದ ಪ್ರಚಾರ, ಸ್ವಿಸ್ ಬ್ಯಾಂಕ್ ಕಪ್ಪು ಹಣ ವಾಪಾಸ್ಸು ತರುವ ಪ್ರಚಾರ, ಈ ಹಣ ತಂದರೆ ಬಂಗಾರದ ರಸ್ತೆಯಾಗಿ ಪರಿವರ್ತಿಸುವ ಸುಳ್ಳು ಭರವಸೆ, ಮೂರು ಕೋಟಿ ಉದ್ಯೋಗ ಸೃಜನೆ, ಬೆಲೆ ಏರಿಕೆ ನಿಯಂತ್ರಣ, ರೈತರ ಆದಾಯ ದ್ವಿಗುಣದ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿತು. ಆದರೆ ಇದನ್ನು ಯಾವುದೇ ರೀತಿಯಲ್ಲೂ ಈಡೇರಿಸದ ಬಿಜೆಪಿ ನೈಜ ಬಣ್ಣ ಬಯಲಾಗಿದೆ, ಬಿಜೆಪಿಯ ಬಗ್ಗೆ ಜನತೆಗೆ ಭ್ರಮನಿರಸನವಾಗಿದೆ, ಆಡಳಿತ ವಿರೋಧಿ ಅಲೆ ಪ್ರಬಲವಾಗಿ ಬೀಸುತ್ತಿದೆ ಎಂದರು.
ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ, ಜಿಎಸ್.ಟಿ ಪರಿಹಾರ ಹಣ, ಮಹದಾಯಿ ಯೋಜನೆ ಬಗ್ಗೆ ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿ ಸಂಸದರು ಒಂದೇ ಒಂದು ಬಾರಿ ಮಾತನಾಡಿಲಿಲ್ಲ ಎಂಬುದು ನೋವಿನ ಸಂಗತಿ ಎಂದರು.
ಮಹಾದಾಯಿ ಯೋಜನೆಗಾಗಿ ಹಸಿರು ಶಾಲು ಹಾಕಿ ಹೋರಾಟ ಮಾಡಿದ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾದರೂ ಸಹ ಈ ಯೋಜನೆ ಈಡೇರಿಸಲಿಲ್ಲ, ಇದು ಒಂದು ರೀತಿ ತಲೆ ತಗ್ಗಿಸುವ ಸನ್ನಿವೇಶ, ಹೀಗಾಗಿ ಬಿಜೆಪಿ ವರ್ತನೆ ಗಮನಿಸಿರುವ ಜನತೆ ಅದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ.ರಾಜು ಆಲಗೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಸುರೇಶ ಗೊಣಸಗಿ, ಮಹಾದೇವಿ ಗೋಕಾಕ, ವಸಂತ ಹೊನಮೋಡೆ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಪಂಚ ಗ್ಯಾರಂಟಿಗಳ ಯಶಸ್ಸು ಕಾಂಗ್ರೆಸ್ ಗೆಲುವಿನ ಶ್ರೀರಕ್ಷೆ :ಸವದಿ
Related Posts
Add A Comment

