ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಪರ ಪ್ರಚಾರ ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ
ವಿಜಯಪುರ: ಚುನಾವಣೆಯಲ್ಲಿ ಪ್ರಸ್ತಾಪಿಸಲು ಅಭಿವೃದ್ಧಿ ವಿಚಾರಗಳಿಲ್ಲದ ಕಾರಣ ಪ್ರಧಾನಿ ನರೇಂದ್ರ ಮೋದಿ ಗಾಬರಿಯಾಗಿದ್ದು, ಮಾತಿನಲ್ಲಿಯೇ ಮೋಡಿ ಮಾಡುವ ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಕೈಗಾರಿಕೆ, ಮೂಲಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಸೋಮವಾರ ತಿಕೋಟಾ ತಾಲೂಕಿನ ಬರಟಗಿ ಮತ್ತು ಹಂಚನಾಳ ಪಿ. ಎಚ್. ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ದೊಡ್ಡ ಇತಿಹಾಸ ಹೊಂದಿರುವ ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ತ್ಯ ತಂದು ಕೊಟ್ಟಿದೆ. ಸ್ವಾತಂತ್ರ್ಯ ನಂತರದಲ್ಲಿ ಹಸಿರು, ಕೈಗಾರಿಕೆ, ಕ್ಷೀರ, ಶಿಕ್ಷಣ, ಔದ್ಯೋಗಿಕ ಕ್ರಾಂತಿ ಮೂಲಕ ಭಾರತೀಯರು ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಿದೆ. ಆದರೆ, ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳುವ ಬಿಜೆಪಿಯವರು ತಾವು ಏನು ಮಾಡಿದ್ದಾರೆ ಎಂಬುದನ್ನು ಹೇಳಲಿ. ಸ್ವಾತಂತ್ರ್ಯ ಸಂದರ್ಭದಲ್ಲಿ ನಾವು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವು. ಆದರೆ, ಅಂದಿನ ಪ್ರಧಾನಿ ಜವಾಹರಲಾಲ ನೆಹರು ಮತ್ತು ಲಾಲಬಹಾದ್ದೂರ ಶಾಸ್ತ್ರಿ ಅವರು ಹಸಿರು ಕ್ರಾಂತಿಯ ಮೂಲಕ ಹಸಿವು ನೀಗಿಸಿ ಆಮದಿಗಿಂತ ಎರಡು ಪಟ್ಟು ಹೆಚ್ಚು ಆಹಾರ ಧಾನ್ಯಗಳನ್ನು ರಫ್ತು ಮಾಡಲು ಕ್ರಮ ಕೈಗೊಂಡರು. ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ ಅವರು ನೀರಾವರಿ, ಶಿಕ್ಷಣ, ಸಂವಹನ, ಸಂಪರ್ಕ ಕ್ರಾಂತಿ ಮಾಡಿದರು. ಈ ಮೂಲಕ ಬಡಜನರ ಬದುಕನ್ನು ಹಸನು ಮಾಡಿ ಸ್ವಾವಲಂಬಿಯಾಗಿ ಬದುಕಲು ನೆರವಾದರು ಎಂದು ಅವರು ಹೇಳಿದರು.
ಆದರೆ, ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಲೆ ಏರಿಕೆ, ಉದ್ಯೋಗ ಕಡಿತ, ಜಿ.ಎಸ್.ಟಿ ಹೆಸರಿನಲ್ಲಿ ರೈತರು, ಜನಸಾಮಾನ್ಯರಿಗೆ ಹೊರೆಯಾಗುವಂಥ ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಅಲ್ಲದೇ, ವಿಜಯಪುರ ಸಂಸದ ರಮೇಶ ಜಿಗಜಿಣಗಿ ಕಳೆದ 15 ವರ್ಷಗಳಿಂದ ಜಿಲ್ಲೆಯ ಸಂಸದರಾಗಿದ್ದರೂ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜನರಿಗೆ ಹೊರೆಯಾಗಿರುವ ಕೇಂದ್ರ ಸರಕಾರ ಮತ್ತು ಸಂಸದರಿಗೆ ತಕ್ಕ ಉತ್ತರ ನೀಡಲು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಿ ಗೆಲ್ಲಿಸುವ ಮೂಲಕ ನಮ್ಮೆಲ್ಲರ ಕೈ ಬಲಪಡಿಸಬೇಕು ಎಂದು ಅವರು ಮನವಿ ಮಾಡಿದರು.
ಎಲೆಕ್ಟ್ರಾಲ್ ಬಾಂಡ್ ಪ್ರಕರಣದಲ್ಲಿ ಮೋದಿ ಪ್ರಾಮಾಣಿಕತೆ ಬಯಲಾಗಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸೂಚನೆ ಹಿನ್ನೆಲೆ ಎಲೆಕ್ಟ್ರಾಲ್ ಬಾಂಡ್ ಪ್ರಕರಣದಲ್ಲಿ ಪ್ರದಾನಿ ಮುಖವಾಡ ಕಳಚಿ ಬಿದ್ದಿದೆ. ಅವರ ನಿಜಬಣ್ಣ ಬಯಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕಿದೆ. ಅಭಿವೃದ್ಧಿ ಮಾಡದ ಬಿಜೆಪಿ ಮತ ಗಿಟ್ಟಿಸಲು ಕೋಮುಭಾವನೆ ಕೆರಳಿಸುವುದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ ಎಂದು ಅವರು ಹೇಳಿದರು.
ಬರಟಗಿ ಮುಖಂಡ ಸಂಗಮೇಶ ದಾಶ್ಯಾಳ ಮತ್ತು ಪೋಮಸಿಂಗ್ ರಾಠೋಡ ಮಾತನಾಡಿ, ಎಂ. ಬಿ. ಪಾಟೀಲರು ಬರಪೀಡಿತ ವಿಜಯಪುರ ಜಿಲ್ಲೆಯನ್ನು ಮಲೆನಾಡನ್ನಾಗಿ ಮಾಡುತ್ತಿದ್ದಾರೆ. ಬರಟಗಿ ಗ್ರಾಮದ ಇಂಚಿಂಚೂ ಕಬ್ಬು ಬೆಳೆಯಲಾಗುತ್ತಿದ್ದು, ನಮ್ಮೆಲ್ಲರ ಮುಖಗಳಲ್ಲಿ ಮಂದಹಾಸ ಮೂಡಲು ಕಾರಣರಾಗಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸ ಮಾಡದ ಬಿಜೆಪಿಗೆ ತಕ್ಕ ಪಾಠ ಕಲಿಸಲು ಮತ್ತು ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಿ ಎಂ. ಬಿ. ಪಾಟೀಲ ಅವರ ಕೈ ಬಲಪಡಿಸಲು ಎಲ್ಲರೂ ಕಾಂಗ್ರೆಸ್ಸಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಹೇಳಿದರು.
ಹಂಚನಾಳ ಪಿ. ಎಚ್. ಗ್ರಾಮದ ಮುಖಂಡರಾದ ಶ್ರೀಕಾಂತ ಬಿರಾದಾರ, ಸೋಮು ಚವ್ಹಾಣ ಮತ್ತು ರೇವಣಸಿದ್ಧ ತಮಗೊಂಡ ಮಾತನಾಡಿ, ನಾವೆಲ್ಲರೂ ಸಚಿವ ಎಂ. ಬಿ. ಪಾಟೀಲ ಅಭಿಮಾನಿಯಾಗಿದ್ದೇವೆ. ಮನೆ ನಡೆಸುವುದೂ ಕಷ್ಟವಾಗಿದ್ದ ಸಮಯದಲ್ಲಿ ಬಡವರ ಪಾಲಿಗೆ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ವರದಾನವಾಗಿದ್ದು, ಜೀವನ ಸಾಗಿಸಲು ಅನುಕೂಲ ಕಲ್ಪಿಸಿವೆ. ನಾವೆಲ್ಲ ಕಾಂಗ್ರೆಸ್ ಪರವಾಗಿದ್ದೇವೆ. ಲೀಡ್ ಕೊಡಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕವಿತಾ ರಜಪೂತ, ಬಾಳುಗೌಡ ಪಾಟೀಲ, ಬಸುಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಪದ್ದು ಚವ್ಹಾಣ, ಸಿದ್ದು ಸಜ್ಜನ, ಕಲ್ಲಪ್ಪ ಪವಾರ, ಮೋತಿಲಾಲ ನಾಯಕ, ರಾಜು ರಾಠೋಡ, ವಿಜಯ ರಜಪೂತ, ಗೋವಿಂದ ಶಿಂಧೆ, ಸತೀಶ ನಾಯಕ, ಅಶೋಕ ಪಾಟೀಲ, ಬಾಳಪ್ಪ ಹಚಡದ, ಸುಭಾಷ ರಜಪೂತ, ಶ್ರೀಶೈಲ ಪಾಟೀಲ, ಸದಾಶಿವ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

