ಬಾಗಲಕೋಟೆ ಪ್ರಚಾರಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ
ಬಾಗಲಕೋಟೆ: ಕರ್ನಾಟಕ ಸರ್ಕಾರವನ್ನು ವಸೂಲಿ ಗ್ಯಾಂಗ್ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಸೋಮವಾರ ಬಾಗಲಕೋಟೆಯ ನವನಗರದ ತೋಟಗಾರಿಕೆ ವಿವಿ ಆವರಣದ ಬಳಿ ಬಿಜೆಪಿ ಆಯೋಜಿಸಿದ್ದ ಚುನಾವಣಾ ಪ್ರಚಾರಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಇದೊಂದು ಲೂಟಿಕೋರ ಸರ್ಕಾರ ಎಂದು ಆರೋಪಿಸಿದರು.
ಕರ್ನಾಟಕ ಲೂಟಿ ಮಾಡುತ್ತಿರುವವರಿಗೆ ಶಿಕ್ಷೆ ಆಗಬೇಕೋ ಬೇಡವೋ ಎಂದು ಪ್ರಶ್ನಿಸಿದ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾ ನಡೆಯುತ್ತಿದೆ ಎಂದು ದೂರಿದ ಅವರು, ಅದರಲ್ಲಿಯೂ ಕಮೀಷನ್ ವ್ಯವಹಾರ ನಡೆಯುತ್ತಿದೆ. ಅಷ್ಟಾದರೂ ಅವರಿಗೆ ತೃಪ್ತಿ ಇಲ್ಲ ಎಂದರು.
ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣ ಪ್ರಸ್ತಾಪಿಸಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ ರಾಜಕಾರಣ ಮಾಡುತ್ತಿದೆ. ಯುವತಿಯ ವ್ಯಕ್ತಿತ್ವದ ಮೇಲೆ ಕಾಂಗ್ರೆಸಿಗರು ದಾಳಿ ಮಾಡಿದ್ದರು. ಹನಮಾನ್ ಚಾಲೀಸ್ ಹೇಳುವವರ ಮೇಲೆ ದಾಳಿ ಆಗುತ್ತೆ. ಅದರಲ್ಲಿಯೂ ಕಾಂಗ್ರೆಸ್ ಸರ್ಕಾರ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸಿದರು.
ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣದಿಂದ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸುರಕ್ಷಿತ ಇಲ್ಲದಂತಾಗಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಬದಲಿಸುವ ಹುನ್ನಾರ ನಡೆಸಿದ್ದಾರೆ. ರಾಜ್ಯ ಸರ್ಕಾರದಿಂದ ಓಬಿಸಿಗೆ ಸಿಗಬೇಕಾದ ಮೀಸಲಾತಿಯನ್ನು ಮುಸ್ಲಿಂಗೆ ನೀಡಿದೆ. ಅಂಬೇಡ್ಕರ ಸಂವಿಧಾನದಲ್ಲಿ ಎಸ್‌ಸಿ, ಎಸ್‌ಟಿಗೆ ನೀಡಿದ ಅಧಿಕಾರವನ್ನು ವೋಟ್ ಬ್ಯಾಂಕ ರಾಜಕಾರಣಕ್ಕಾಗಿ ಲೂಟಿ ಮಾಡುತ್ತಿದೆ. ಎಸ್‌ಸಿ, ಎಸ್‌ಟಿ, ಓಬಿಸಿ ಸಮುದಾಯಗಳ ಮೀಸಲಾತಿಯನ್ನು ಲೂಟಿ ಮಾಡಿ ಅಲ್ಪಸಂಖ್ಯಾತರಿಗೆ ಕೊಡುವುದು ಕಾಂಗ್ರೆಸ್ ಕೆಲಸವಾಗಿದೆ. ಮೋದಿ ಇರುವವರೆಗೂ ಕಾಂಗ್ರೆಸ್‌ನ ಈ ಕಾರ್ಯ ನಡೆಯದು. ಇದಕ್ಕಾಗಿ ಮೋದಿ ಎಲ್ಲಿಗೂ ಹೋಗಲು ಸಿದ್ದ ಎಂದರು.
ಜಗತ್ತಿನ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಇರೋದು ಮೋದಿ ಅವರಿಗೆ. ಈ ಶಕ್ತಿಯನ್ನು ನಾನು ದೇಶ ಕಟ್ಟಲು ಬೆಳೆಸುತ್ತೇನೆ. ಆದರೆ ಕಾಂಗ್ರೆಸ್ ಫೇಕ್ ವಿಡಿಯೋ ಹಾಕಲು ಬಳಿಸಿಕೊಳ್ಳುತ್ತದೆ. ನಿಮಗೆ ಒಂದೊಮ್ಮೆ ಫೇಕ್ ವಿಡಿಯೋ ಬಂದರೆ ಪೊಲೀಸರಿಗೆ ದೂರು ನೀಡಿ ಎಂದು ಅವರು ಹೇಳಿದರು.
ಬಾಗಲಕೋಟೆ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳು ತಮ್ಮ ಕ್ಷೇತ್ರದ ಅಭಿವೃದ್ದಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆ ಅನುಷ್ಠಾನದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇದರಿಂದ ಇಲ್ಲಿನ ಐಹೊಳಿ, ಪಟ್ಟದಕಲ್ಲು, ಬದಾಮಿ ಪ್ರವಾಸಿ ತಾಣಗಳ ಪ್ರಗತಿ ಸಾಧ್ಯವಾಗಿದೆ. ಅದಕ್ಕಾಗಿ ಪಿ.ಸಿ.ಗದ್ದಿಗೌಡರ್ ಹಾಗೂ ರಮೇಶ ಜಿಗಜಿಣಗಿ ಅವರನ್ನು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದರಾದ ಪಿ.ಸಿ.ಗದ್ದಿಗೌಡರ, ರಮೇಶ ಜಿಗಜಿಣಗಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಸಚಿವ ಸಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಸಂಗಣ್ಣ ಬೆಳ್ಳುಬ್ಬಿ, ಮುರುಗೇಶ ನಿರಾಣಿ, ಶಾಸಕರಾದ ಸಿದ್ದು ಸವದಿ, ಜಗದೀಶ ಗುಡಗುಂಟಿ, ಮಾಜಿ ಶಾಸಕ ವೀರಣ್ಣ ಚರಂತಿಮಠ, ರಾಜಶೇಖರ ಶೀಲವಂತ, ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶಾಂತಗೌಡ ಪಾಟೀಲ, ಆರ್.ಎಸ್.ಪಾಟೀಲ ಕುಚಬಾಳ, ಜಗದೀಶ ಹಿರೇಮನಿ ಸೇರಿದಂತೆ ಅನೇಕರು ವೇದಿಕೆ ಮೇಲೆ ಇದ್ದರು.

