ಬಸವನಬಾಗೇವಾಡಿ: ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡಜನತೆ ಆರೋಗ್ಯ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಭಾಗವಹಿಸಿ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ವಿಜಯಪುರ ಸಂಗಮೇಶ್ವರ ಆಸ್ಪತ್ರೆಯ ಡಾ.ಎಸ್.ಎಸ್.ಪಾಟೀಲ ಹೇಳಿದರು.
ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ನಂದಿ ಮಠದ ಗುರುವೀರಸಿದ್ಧ ಶಿವಯೋಗಿಗಳ ೭೪ ನೇ ಜಾತ್ರಾಮಹೋತ್ಸವ ಹಾಗೂ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಯವರ ದ್ವಿತೀಯ ಪುಣ್ಯಾರಾಧನೆಯಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ನಮ್ಮಲ್ಲಿ ವಾಂತಿ, ಬೇಧಿ, ಟೈಪಾಯಿಡ್, ಕ್ಷಯ, ಕಾಲಾರದಂತಹ ರೋಗಗಳು ಸಾಮಾನ್ಯವಾಗಿದ್ದವು. ಈಚೆಗ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ, ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ.ಇವು ಶ್ರೀಮಂತ ಕಾಯಿಲೆಗಳಾಗಿದ್ದು. ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ತಪಾಸಣೆಯನ್ನು ವರ್ಷದಲ್ಲಿ ಒಂದು ಸಲವಾದರೂ ಮಾಡಿಕೊಳ್ಳುವ ರೂಢಿ ಇಟ್ಟುಕೊಳ್ಳಬೇಕು. ಪ್ರತಿನಿತ್ಯ ಯೋಗ, ಧ್ಯಾನ, ವಾಯುವಿಹಾರ, ಪೌಷ್ಠಿಕಯುಕ್ತ ಮಿತಾಹಾರ ಸೇವನೆಯಂತಹ ಆರೋಗ್ಯ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯಕರ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಎಲ್ಲರೂ ಆರೋಗ್ಯಕರ ಜೀವನ ತಮ್ಮದಾಗಿಸಿಕೊಳ್ಳುವ ಕಡೆಗೆ ಗಮನಹರಿಸಬೇಕೆಂದರು.
ಅನುಗ್ರಹ ಕಣ್ಣಿನ ಆಸ್ಪತ್ರೆಯ ದತ್ತಾತ್ರೇಯ ಹೊಸಮಠ ಮಾತನಾಡಿ, ಭಗವಂತ ನೀಡಿದ ಕಣ್ಣನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡುವುದು ಕರ್ತವ್ಯ. ಕಣ್ಣು ಇದ್ದರೇ ಮಾತ್ರ ಇಡೀ ಜಗತ್ತನ್ನು ನಾವು ನೋಡಲು ಸಾಧ್ಯವಿದೆ. ಪ್ರತಿಯೊಬ್ಬರೂ ತಮ್ಮ ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸಿದೇ ಗಮನ ಹರಿಸಬೇಕು. ೪೦ ವರ್ಷ ಮೀರಿದ ಪ್ರತಿಯೊಬ್ಬರೂ ತಪ್ಪದೇ ಕಣ್ಣಿನ ಪರೀಕ್ಷೆ ಮಾಡಿಕೊಳ್ಳಬೇಕು. ಮನುಷ್ಯನ ಜೀವನದಲ್ಲಿ ಕಣ್ಣುಗಳ ಪಾತ್ರ ಮಹತ್ವದಾಗಿದೆ. ಕಣ್ಣುಗಳ ರಕ್ಷಣೆ ಮೂಲಕ ನಮ್ಮ ಜೀವ ಮತ್ತು ಜೀವನವನ್ನು ಭದ್ರವಾಗಿಸಿಕೊಳ್ಳಲು ಸಾಧ್ಯವಿದೆ ಎಂದರು.
ಸಾನಿಧ್ಯ ವಹಿಸಿದ್ದ ನಂದಿಮಠದ ವೀರಸಿದ್ದ ಸ್ವಾಮೀಜಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಂಜುನಾಥ ಬಶೆಟ್ಟಿ, ಸಂಗಣ್ಣ ಸಜ್ಜನ, ವೀರಣ್ಣ ರಕ್ಕಸಗಿ,ರವಿ ಗಂಗಶೆಟ್ಟಿ, ರಾಜು ಹುಲಸೂರ, ಶರಣಗೌಡ ನಾಡಗೌಡ, ಮಹಾನಂದ ಬ್ಯಾಕೋಡ ಇತರರು ಭಾಗವಹಿಸಿದ್ದರು. ಶೇಖು ಉದಾನಗೌಡರ ಸ್ವಾಗತಿಸಿ, ನಿರೂಪಿಸಿದರು.
ಶಿಬಿರದಲ್ಲಿ ವಿಜಯಪುರದ ಸಂಗಮೇಶ್ವರ ಆಸ್ಪತ್ರೆ, ಅನುಗ್ರಹ ಕಣ್ಣಿನ ಆಸ್ಪತ್ರೆ, ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ತಜ್ಞ ವೈದ್ಯರಿಂದ ನೂರಾರು ಜನರ ಆರೋಗ್ಯ ತಪಾಸಣೆ ಮಾಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

