ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ | ತುಘಲಕ್ ದರ್ಬಾರ | ಮಾಜಿ ಸಿಎಂ ಯಡಿಯೂರಪ್ಪ ವಾಗ್ದಾಳಿ
ಮುದ್ದೇಬಿಹಾಳ: ಹಣ-ಹೆಂಡದ, ಅಧಿಕಾರದ ತೋಳ್ಬಲದಿಂದ ಜಾತಿಯ ವಿಷಬೀಜವನ್ನು ಬಿತ್ತಿ ಚುನಾವಣೆಯನ್ನು ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷದವರಿದ್ದರು. ಆದರೆ ಕಾಲ ಬದಲಾಗಿದೆ. ಜನತೆ ಜಾಗ್ರತರಾಗಿದ್ದಾರೆ. ಯಾವುದು ಸರಿ ಯಾವುದು ತಪ್ಪು ಎಂದು ತಿಳಿದುಕೊಳ್ಳುವ ಶಕ್ತಿ ಅವರಲ್ಲಿದೆ. ಹಾಗಾಗಿ ಮತ್ತೊಮ್ಮೆ ಮೋದಿಜೀ ಅವರನ್ನು ಬೆಂಬಲಿಸಲು ರಾಜ್ಯದ ೨೮ ಕ್ಷೇತ್ರಗಳಲ್ಲಿ ಭಾಜಪಾ ಅಭ್ಯರ್ಥಿಗಳಿಗೆ ಮತ ನೀಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೇಳಿದರು.
ಪಟ್ಟಣದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಚುನಾವಣಾ ಪ್ರಚಾರಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಪಾಪರ ಆಗಿದೆ. ಸಂಪೂರ್ಣ ತುಘಲಕ್ ದರ್ಬಾರ ನಡೆಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ನಂತರ ಕಣ್ಣಿಗೆ ಕಾಣುವ ಯಾವ ಕಾಮಗಾರಿಗೂ ಚಾಲನೆ ಕೊಟ್ಟಿಲ್ಲ. ಜನ ಕೊಟ್ಟ ತೆರಿಗೆ ಹಣ ಎಲ್ಲಿ ಹೋಗಿದೆ? ರಾಜ್ಯದಲ್ಲಿ ದರೋಡೆ ನಡೀತಾ ಇದೆ. ನಮ್ಮ ಅವಧಿಯ ಪ್ರಮುಖ ಯೋಜನೆಗಳನ್ನು ನಿಲ್ಲಿಸಲಾಗಿದೆ. ಕೇವಲ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಹರಿಹಾಯ್ದರು.
ಕಳೆದ ಹತ್ತು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎನ್.ಡಿ.ಎ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ನರೇಂದ್ರ ಮೋದಿಜೀ ಅವರು ಪ್ರಧಾನಿಯಾದಾಗಿನಿಂದ ಒಂದು ದಿನ ವಿಶ್ರಾಂತಿ ಪಡೆದಿಲ್ಲ. ದೇಶ ವಿದೇಶಗಳಿಗೆ ಹೋಗಿ ಬಂದರೂ ವಿಶ್ರಾಂತಿ ಪಡೆಯದೇ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಲೋಕ ಸಭೆಯಲ್ಲಿ ೪೦೦ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಪ್ರಧಾನಿಯಾಗುವ ವಿಶ್ವಾಸ ಇದೆ ಎಂದರು.
ಭಾಜಪಾ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಮೋದೀಜಿ ಅವರು ಪ್ರಧಾನಿಯಾದ ನಂತರ ಕೇವಲ ಹತ್ತು ವರ್ಷದಲ್ಲಿ ಜಗತ್ತಿನಲ್ಲಿ ೧೨ ನೇ ಸ್ಥಾನದಲ್ಲಿರುವ ಭಾರತವನ್ನು ೫ ನೇ ಆರ್ಥಿಕ ಶಕ್ತಿಯನ್ನಾಗಿ ಮಾಡಿದ್ದಾರೆ. ಈ ಬಾರಿಯೂ ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದು ಇಡೀ ಪ್ರಪಂಪಕ್ಕೆ ವಿಶ್ವ ಗುರು ಭಾರತವನ್ನಾಗಿ ಮಾಡಬೇಕು ಎಂಬ ಸಂಕಲ್ಪವನ್ನಿಟ್ಟುಕೊಂಡಿದ್ದಾರೆ ಎಂದರು.
ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಕಳೆದ ೨೫ ವರ್ಷದ ಕಾಂಗ್ರೇಸ್ ಅವಧಿಯಲ್ಲಿ ಒಂದಿಂಚೂ ಸಿಸಿ ರಸ್ತೆಗಳಾಗಿರಲಿಲ್ಲ. ಈ ಭಾಗದ ಪ್ರಮುಖ ಪಟ್ಟಣಗಳಲ್ಲಿ ಹಳ್ಳಿಗಳಲ್ಲಿ ಈ ಮೊದಲು ಬರೀ ಧೂಳು ತುಂಬಿತ್ತು. ಕಾಲಿಟ್ಟರೆ ಬರೀ ಧೂಳಲ್ಲೇ ಓಡಾಡಬೇಕಿತ್ತು. ಜನತೆ ಅಸ್ತಮಾದಂತಹ ರೋಗಗಳಿಗೆ ತುತ್ತಾಗಿದ್ದರು. ೩೦ ವರ್ಷಗಳಿಂದ ಆಗದೇ ಇರುವ ಕೆಲಸಗಳನ್ನು ನಮ್ಮ ಸರ್ಕಾರ ಮಾಡಿದೆ. ಸಧ್ಯ ಲೋಕಸಭಾ ಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಎರಡು ಭಾಗಗಳಾಗಿ ವಿಂಗಡಣೆಗೊಂಡು ಸರಕಾರ ಪತನವಾಗಲಿದೆ ಎಂದರು.
ಈ ವೇಳೆ ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಅಪ್ಪು ಪಟ್ಟಣಶೆಟ್ಟಿ, ಮಾಜಿ ಎಂಎಲ್‌ಸಿ ಅರುಣ ಶಹಾಪೂರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಗದೀಶ ಪಂಪಣ್ಣವರ, ವಿಜುಗೌಡ ಪಾಟೀಲ, ಮಲಕೇಂದ್ರಗೌಡ ಪಾಟೀಲ, ಎಂ.ಎಸ್ ಪಾಟೀಲ, ಸುರೇಶ ಬಿರಾದಾರ, ಸಿದ್ದರಾಜ ಹೊಳಿ, ಡಾ,ವಿರೇಶ ಪಾಟೀಲ ಸೇರಿದಂತೆ ಮತ್ತೀತರರು ಇದ್ದರು.

