ವಿಜಯಪುರ: ಬೇಸಿಗೆಯ ಈ ಸಂದರ್ಭದಲ್ಲಿ ನೀರು ಆಹಾರ ಇಲ್ಲದೆ ನರಳುತ್ತಿದ್ದ ಪ್ರಾಣಿ ಪಕ್ಷಿಗಳಿಗೆ ಮಾನವೀಯ ದೃಷ್ಟಿಯಿಂದ ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಮಕ್ಕಳಾದ ಮಲ್ಲಿಕಾರ್ಜುನ ಕತ್ನಳ್ಳಿ, ಅನುಶ್ರೀ-ಶ್ರೀನಿಧಿ ಬಂಡೆ, ಅನಿತಾ ಸಮಗೊಂಡ, ಮಲ್ಲು ಗೋರನಾಳ, ರಾಕೇಶ, ರವಿ,
ಸೃಷ್ಟಿ ಸಮಗೊಂಡ, ಶಬರೀಶ ಸಮಗೊಂಡ ಅವರು ನೀರು ಮತ್ತು ಆಹಾರ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಬೇಸಿಗೆಯಲ್ಲಿ ಜನರೇ ನೀರಿಗಾಗಿ ಪರದಾಡುತ್ತಾರೆ. ಅದರಲ್ಲೂ ಪ್ರಾಣಿ ಪಕ್ಷಿಗಳ ಸ್ಥಿತಿ ಹೇಳತೀರದು. ಎಲ್ಲರೂ ಪಕ್ಷಿಗಳ ರಕ್ಷಣೆಗೆ ಮುಂದಾಗಬೇಕೆಂದು ಮಕ್ಕಳು ಮನವಿ ಮಾಡಿದರು.
‘ಬೇಸಿಗೆ ಬಂದಿದೆ. ಪಕ್ಷಿಗಳು ಬಾಯಾರುತ್ತಿವೆ. ನಿಮ್ಮನೆ ಸುತ್ತಮುತ್ತ, ಟೆರೇಸಿನ ಮೇಲೆ ತೆರೆದ ಮಡಿಕೆ, ಹೂಜಿಯಲ್ಲಿ ನೀರಿಡಿ. ಪ್ರಾಣಿ, ಪಕ್ಷಿಗಳ ದಾಹ ನೀಗಿಸಿ’-ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದರ್ಭದಲ್ಲಿ ವ್ಯರ್ಥವಾಗಿ ಉಳಿದಿದ್ದ ಮಿನರಲ್ ವಾಟರ್ ಪ್ಲಾಸ್ಟಿಕ್ ಬಾಟಲುಗಳಿಂದ ನಾಗಠಾಣದ
ಮಕ್ಕಳು ಸ್ವತಃ ಈ ಪರಿಕರಗಳನ್ನು ತಯಾರಿಸಿ, ಗಿಡಗಳಿಗೆ ತೂಗು ಹಾಕಿದ್ದು, ವಿಶೇಷವಾಗಿತ್ತು.
ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲಾ ಆವರಣದಲ್ಲಿ ಇರುವ ಗಿಡಮರಗಳಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ, ಪ್ರತಿದಿನ ಸಂಜೆಯ ಸಮಯದಲ್ಲಿ ತೂಗು ಹಾಕಿದ ಪ್ರತಿ ಬಾಟಲುಗಳಿಗೆ ನೀರನ್ನು ತುಂಬಿಸಿ ಇಡುವ ರೂಢಿಯನ್ನು ಶಿಕ್ಷಕ ಸಂತೋಷ ಬಂಡೆ ಅವರ ಮಾರ್ಗದರ್ಶನದಲ್ಲಿ ಬೆಳೆಸಿಕೊಂಡಿದ್ದಾರೆ.
ಈ ಪರಿಸರವನ್ನು ಹಚ್ಚ ಹಸಿರಿನಿಂದ ಶೋಭಿಸುವಂತೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ‘ಎಲ್ಲರೂ ಪೀಳಿಗೆಯಿಂದ ಪೀಳಿಗೆಗೆ ಪರಿಸರ ಪ್ರೇಮತ್ವವನ್ನು ಮುಂದುವರೆಸಿಕೊಂಡು ಹೋಗಬೇಕು’ಎಂದು ಶಿಕ್ಷಕ ಸಂತೋಷ ಬಂಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

