ಕೆಪಿಸಿಸಿ ಮೀನುಗಾರರ ವಿಭಾಗದ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ಅಭಿಮತ
ವಿಜಯಪುರ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಅಲಗೂರ ಅವರು ಒಬ್ಬ ವಿದ್ಯಾವಂತ ಉತ್ತಮ ಅಭ್ಯರ್ಥಿಯಾಗಿದ್ದು
ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲ ಗಂಗಾಮತಸ್ಥ ಸಮುದಾಯ, ಬೆಸ್ತ ಜನಾಂಗ, ಸಾಂಪ್ರದಾಯಿಕ ಮೀನುಗಾರರು ಸೇರಿದಂತೆ ಎಲ್ಲ ವರ್ಗಗಳೂ ಅವರನ್ನು ಬೆಂಬಲಿಸಬೇಕೆಂದು ಕೆಪಿಸಿಸಿ ಮೀನುಗಾರರ ವಿಭಾಗದ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ಕರೆ ನೀಡಿದರು.
ಶನಿವಾರ ನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ ಸ್ವಾತಂತ್ರ‍್ಯ ಪೂರ‍್ವದಲ್ಲಿ ಹಾಗೂ ಸ್ವಾತಂತ್ರ‍್ಯ ನಂತರದ ಅಭಿವೃದ್ಧಿಯ ಪಥದಲ್ಲಿ ತನ್ನದೇ ಆದ ಚಾಪನ್ನು ಮೂಡಿಸುತ್ತಾ ಬಂದಿದೆ ಎಂದರು.
ಜಗತ್ತಿನಲ್ಲಿ ಸುಳ್ಳಿಗೆ ಆಸ್ಕರ್ ಪ್ರಶಸ್ತಿ ಏನಾದರೂ ಇದ್ದರೆ ಅದು ನಮ್ಮ ನರೇಂದ್ರ ಮೋದಿ ಅವರಿಗೆ ಸಿಗುತ್ತದೆ. ಯಾಕೆಂದರೆ ಪ್ರತಿಯೊಬ್ಬ ನಾಗರಿಕನ ಖಾತೆಗೆ ರೂ.೧೫ ಲಕ್ಷ ಹಣ ಹಾಕುವ ಭರವಸೆ ನೀಡಿ ಹತ್ತು ವರ್ಷಗಳೇ ಕಳೆದರೂ ಸಹ ದೇಶದ ಯಾವೊಬ್ಬ ನಾಗರೀಕನಿಗೂ ಹತ್ತು ರೂಪಾಯಿ ಸಹ ಖಾತೆಗೆ ಬಂದಿಲ್ಲ. ವರ್ಷಕ್ಕೆ ೨ ಲಕ್ಷ ಉದ್ಯೋಗ ನೀಡುವ ಭರವಸೆ ನೀಡಿ, ದೇಶದಲ್ಲಿ ಇರುವ ಅನೇಕ ಸರ‍್ಕಾರ ಸ್ವಾಮ್ಯದ ಸಂಸ್ಥೆಗಳ ಸಮಸ್ಯೆ ಬಗೆಹರಿಸೋ ಬದಲಾಗಿ ಅಲ್ಲಿ ಇರುವ ಉದ್ಯೋಗಿಗಳನ್ನು ಹೊರಹಾಕಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ನಿರುದ್ಯೋಗಿಗಳನ್ನಾಗಿ ಮಾಡುವುದರ ಜೊತೆಗೆ ಅವರ ಇಡೀ ಕುಟುಂಬ ಬೀದಿಗೆ ಬರುವ ಕೆಲಸವನ್ನು ಮೋದಿಯವರು ಮಾಡಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಹಾಳುಮಾಡಿ, ಬಡಜನರ ಖಾತೆಗಳನ್ನು ಬರಿದಾಗಿಸಿ, ಖಾಸಗಿ ಬ್ಯಾಂಕುಗಳು ಹಾಗೂ ಬಂಡವಾಳ ಶಾಹಿಗಳಿಗೆ ದೇಶವನ್ನು ದಿವಾಳಿ ಮಾಡಲು ಗುತ್ತಿಗೆ ನೀಡುತ್ತಿದ್ದಾರೆ. ಇಂತಹ ಮೋದಿಯವರಿಗೆ ದೇಶದ ಜನ ಸರಿಯಾದ ಪಾಠ ಕಲಿಸಿ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿ ಇಲ್ಲಿಯ ಅಭ್ಯರ್ಥಿ ರಾಜು ಅಲಗೂರ ಅವರನ್ನು ಗೆಲ್ಲಿಸಬೇಕೆಂದು ಮಂಜುನಾಥ ಸುಣಗಾರ ಮನವಿ ಮಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜೇಶ ಕುಂದೂರ ಮಾತನಾಡಿ,
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಅಷ್ಟೂ ಭರವಸೆಗಳನ್ನು ಅನುಷ್ಠಾನಕ್ಕೆ ತಂದು ದೇಶವನ್ನು ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತದೆ. ಜನತೆಯ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಅಂತ ನಂಬಿರುವ ಪಕ್ಷ ಕಾಂಗ್ರೆಸ್ ಪಕ್ಷ. ಹಾಗಾಗಿ ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಕಾರಣರಾಗಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಜಿಲ್ಲಾ ಮೀನುಗಾರ ವಿಭಾಗದ ಅಧ್ಯಕ್ಷ ಕೃಷ್ಣಾ ಕಾಮಟೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಜಿಲ್ಲಾ ವೈದ್ಯಕೀಯ ವಿಭಾಗದ ಉಪಾಧ್ಯಕ್ಷ ಪ್ರವೀಣ ಚೌರ ಹಾಗೂ ಮಹಾದೇವಿ ಗೋಕಾಕ, ವಸಂತ ಹೊನಮೊಡೆ ಮುಂತಾದವರು ಉಪಸ್ಥಿತರಿದ್ದರು.

