– ಇಲಾಹಿ ಇ. ಜಮಖಂಡಿ
ಚಿಮ್ಮಡ: ರಾಜ್ಯ ಸರಕಾರ ಮಹಿಳೆಯರಿಗಾಗಿ ಜಾರಿಗೊಳಿಸಿರುವ ಗ್ರಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತೀ ತಿಂಗಳು ಖಾತೆಗೆ ಬರುತ್ತಿರುವ ಎರಡು ಸಾವಿರ ರೂ.ಗಳನ್ನು ಒಂದು ವರ್ಷಗಳ ಕಾಲ ಕೂಡಿಟ್ಟು ಗ್ರಾಮದ ವಿರಕ್ತಮಠಕ್ಕೆ ಅಕ್ಕಮಹಾದೇವಿಯವರ ಹೆಸರಿನಲ್ಲಿ ಬ್ರಹತ್ ರಥವನ್ನು ನಿರ್ಮಿಸಿ ಕೊಡಲು ಇಲ್ಲಿನ ಮಹಿಳೆಯರು ಮುಂದಾಗಿದ್ದಾರೆ.
ಬಾಗಲಕೋಟ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಕ್ಕ ಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕುಲವಳ್ಳಿ ಸುಕುಮಾರ ಯೋಗಾಶ್ರಮದ ಓಂ ಗುರೂಜಿಯವರು ಗ್ರಾಮದಲ್ಲಿ ಅಕ್ಕ ಮಹಾದೇವಿ ರಥ ನಿರ್ಮಿಸುವಂತೆ ಪ್ರಸ್ಥಾಪಿಸಿದರು, ಇದಕ್ಕೆ ದನಿಗೂಡಿಸಿದ ಶೇಗುಣಶಿ ವಿರಕ್ತಮಠದ ಡಾ.ಮಹಾಂತ ಮಹಾಸ್ವಾಮಿಗಳು ಹಾಗೂ ಕೊಣ್ಣೂರ ಕಲ್ಯಾಣ ಹೊರಗಿನಮಠದ ಡಾ. ವಿಶ್ವಪ್ರಭು ಶಿವಾಚಾರ್ಯರು ಮಹಿಳೆಯರು ಮನಸ್ಸು ಮಾಡಿದರೆ ರಥ ನಿರ್ಮಾಣ ಕಷ್ಟವೇನಲ್ಲ. ಹೇಗೋ ಸರಕಾರ ಮನೆಯೊಡತಿಗೆ ಪ್ರತೀ ತಿಂಗಳು ಎರಡು ಸಾವಿರ ನೀಡುತ್ತಿದೆ. ಕೇವಲ ಒಂದು ವರ್ಷದ ಹಣ ಕೂಡಿಟ್ಟರೆ ಇಪ್ಪತ್ನಾಲ್ಕು ಸಾವಿರ ಆಗುತ್ತದೆ ಇಲ್ಲಿ ನೆರೆದಿರುವ ಮಹಿಳೆಯರಷ್ಟೆ ಮನಸ್ಸು ಮಾಡಿದರೂ ಒಂದೇ ವರ್ಷದಲ್ಲಿ ರಥ ನಿರ್ಮಾಣವಾಗುತ್ತದೆ, ಇದಕ್ಕೆ ಸಮ್ಮತಿಸಿದವರು ಕೈ ಎತ್ತುವ ಮೂಲಕ ಖಚಿತ ಪಡಿಸಬೇಕೆಂದರು. ಬಹುತೇಕ ಮಹಿಳೆಯರು ಕೈ ಎತ್ತುವ ಮೂಲಕ ಸಹಮತ ವ್ಯಕ್ತಪಡಿಸಿದರು.
ಇದರಿಂದ ಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಆಗಮಿಸಿದ್ದ ಜಮಖಂಡಿ ಸರಕಾರಿ ಪದವಿ ಮಹಾವಿದ್ಯಾಲಯದ ಹಿರಿಯ ಪ್ರಾದ್ಯಾಪಕಿ ಡಾ.ಸುನಂದಾ ಶಿರೂರರವರು ರಥ ನಿರ್ಮಾಣಕ್ಕೆ ತಾವೂ ಒಂದು ಲಕ್ಷ ರೂ ನೀಡುವುದಾಗಿ ವಾಗ್ದಾನ ಮಾಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಜಮಖಂಡಿ ಓಲೆಮಠದ ಡಾ; ಚನ್ನಬಸವ ಮಹಾಸ್ವಾಮಿಗಳು ಮಹಿಳೆಯರ ಈ ಮಾದರೀ ಕಾರ್ಯವನ್ನು ಶ್ಲಾಘಿಸಿ ಹರ್ಷವ್ಯಕ್ತಪಡಿಸಿದರು.
ರಾಮದುರ್ಗ ಶಿವಮೂರ್ತೆಶ್ವರ ಮಠದ ಶಾಂತವೀರ ಮಹಾಸ್ವಾಮಿಗಳು, ಮರೇಗುದ್ದಿ ಅಡವಿಶಿದ್ದೇಶ್ವರ ಮಠದ ಗುರುಪಾದ ಮಹಾಸ್ವಾಮಿಗಳು, ಸ್ಥಳಿಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಜನಾರ್ಧನ ಮಹಾರಾಜರು ಉಪಸ್ಥಿತರಿದ್ದರು.

