ದೇಶದಲ್ಲಿ ಅವೈಜ್ಞಾನಿಕ ಜಿಎಸ್‌ಟಿ ಜಾರಿ | ಕೇಂದ್ರ ಸರ್ಕಾರದಿಂದ ಬಡವರಿಗೆ ಏನೂ ದೊರಕಿಲ್ಲ | ರಾಹುಲ್ ಗಾಂಧಿ ವಾಗ್ದಾಳಿ
ವಿಜಯಪುರ: ಜಿಎಸ್‌ಟಿ ಮರುಪಾವತಿ ವಿಷಯವಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಅಸಮಾಧಾನ ಹೊರಹಾಕಿದ ಎಐಸಿಸಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಇಂಡಿಯಾ ಒಕ್ಕೂಟದ ಅಧಿಕಾರಕ್ಕೆ ಬಂದರೆ ಈ ಅನ್ಯಾಯ ಸರಿಪಡಿಸುವುದಾಗಿ ಅಭಯ ನೀಡಿದರು.
ನಗರದ ಸೊಲ್ಲಾಪೂರ ರಸ್ತೆಯಲ್ಲಿರುವ ಎಎಸ್‌ಪಿ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಅವೈಜ್ಞಾನಿಕ ಜಿಎಸ್‌ಟಿ ಜಾರಿಗೊಳಿಸಲಾಗಿದೆ, ಕರ್ನಾಟಕ ಸರ್ಕಾರ ಜಿಎಸ್‌ಟಿ ರೂಪದಲ್ಲಿ ೧೦೦ ರೂ. ಕೊಟ್ಟರೆ ನಿಮಗೆ ೧೩ ರೂ. ಮಾತ್ರ ಕೇಂದ್ರ ಸರ್ಕಾರ ವಾಪಸ್ಸು ನೀಡುತ್ತಿದೆ, ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ, ಈ ಅನ್ಯಾಯವನ್ನು ಸರಿಪಡಿಸಲು ನಾವು ಬದ್ಧ ಎಂದು ರಾಹುಲ್ ಗಾಂಧಿ ಘೋಷಿಸಿದರು.
ಭಾರತ ಇತಿಹಾಸದಲ್ಲಿ ಈಗ ನಡೆಯುತ್ತಿರುವ ಚುನಾವಣೆ ಸಾಮಾನ್ಯವಾದ ಚುನಾವಣೆಯಲ್ಲ, ಒಂದು ಪಕ್ಷ, ಒಂದು ವ್ಯಕ್ತಿ ಹಿಂದೂಸ್ತಾನದ ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ನಿರ್ನಾಮಗೊಳಿಸುವ ಪ್ರಯತ್ನದಲ್ಲಿ ತೊಡಗಿದೆ, ಸಂವಿಧಾನದಿಂದ ಭಾರತೀಯ ನಾಗರಿಕರಿಗೆ, ಧ್ವನಿ, ಅಧಿಕಾರ, ಮೀಸಲಾತಿ ದೊರಕಿದೆ, ಸಂವಿಧಾನ ಪೂವದಲ್ಲಿ ರಾಜ-ಮಹಾರಾಜರ ಆಳ್ವಿಕೆ ಇತ್ತು, ಆದರೆ ಬಡವರ, ದಲಿತ, ಆದಿವಾಸಿಗಳ ಬಳಿ ಅಧಿಕಾರ, ಹಕ್ಕು ಹಾಗೂ ಧ್ವನಿ ಇದ್ದರೆ ಅದಕ್ಕೆ ಸಂವಿಧಾನವೇ ಕಾರಣ. ಸಂವಿಧಾನದ ರಕ್ಷಣೆಯೇ ನಮ್ಮ ಆದ್ಯತೆ ಎಂದರು.
ಒಂದೆಡೆ ನರೇಂದ್ರ ಮೋದಿ ಅವರು ಸಂವಿಧಾನವನ್ನು ನಿರ್ನಾಮಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ, ಅವರ ಪಕ್ಷದ ಸಂಸದರೇ ಸಂವಿಧಾನವನ್ನು ಬದಲಿಸುವ ಹೇಳಿಕೆಗಳನ್ನು ಹಲವಾರು ಬಾರಿ ಹೇಳಿದ್ದಾರೆ, ಇನ್ನೊಂದೆಡೆ ಇಂಡಿಯಾ ಒಕ್ಕೂಟದ ಪಕ್ಷಗಳು ಭಾರತೀಯ ಸಂವಿಧಾನ ಹಾಗೂ ಅಣ್ಣ ಬಸವಣ್ಣನ ಆಶಯ ಹಾಗೂ ವಿಚಾರಧಾರೆಯನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಮೋದಿಜಿ ಅವರು ಕಳೆದ ೧೦ ವರ್ಷಗಳಲ್ಲಿ ೨೫ ಜನರನ್ನು ಅರಬ್ ಪತಿಗಳನ್ನಾಗಿ ಮಾಡಿದ್ದಾರೆ, ಭಾರತದ ಸಂಪತ್ತು, ಭಾರತದ ಎಲ್ಲ ಲಾಭವನ್ನು ಅದಾನಿದಂತಹ ಜನರಿಗೆ ನೀಡಿದ್ದಾರೆ, ಭಾರತ ಸೌರಶಕ್ತಿ, ಪವನಶಕ್ತಿ, ವಿಮಾನ ನಿಲ್ದಾಣ ಮೊದಲಾದವುಗಳೆಲ್ಲವೂ ಅದಾನಿಯಂತಹ ಉದ್ಯಮಪತಿಗಳ ಹಿಡಿತಕ್ಕೆ ನೀಡಿರುವುದು ದುರ್ದೈವ ಎಂದು ರಾಹುಲ್ ಗಾಂಧೀ ಉಲ್ಲೇಖಿಸಿದರು.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಬಡವರಿಗೆ ಏನೂ ದೊರಕಿಲ್ಲ, ನಾವು ಪಂಚ ಗ್ಯಾರಂಟಿಗಳನ್ನು ನೀಡಿದ ಫಲವಾಗಿ ಬಡವರಿಗೆ ದೊಡ್ಡ ವರವಾಗಿ ಪರಿಗಣಿತವಾಗಿದೆ ಎಂದರು.
ಗೃಹಲಕ್ಷ್ಮಿ ಜಾರಿಯಾದರೆ ಕರ್ನಾಟಕ ಆರ್ಥಿಕ ದಿವಾಳಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು, ಆದರೆ ಏನೂ ಆಗಲಿಲ್ಲ ಎಂದರು.
ಖಾಸಗಿ ವಲಯದಲ್ಲಿ, ಸಾರ್ವಜನಿಕ ವಲಯದಲ್ಲಿ, ಸರ್ಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರವೇ ಯುವಕರಿಗೆ ಅಪ್ರೆಂಟಿಸ್ ತರಬೇತಿ ನೀಡುವ ದೊಡ್ಡ ಮಹತ್ವಾಕಾಂಕ್ಷೆಯನ್ನು ಇಂಡಿಯಾ ಒಕ್ಕೂಟ ಹೊಂದಿದೆ ಎಂದರು.
ನರೇಗಾ ಮಾದರಿಯಲ್ಲಿ ಡಿಪ್ಲೋಮಾ ಮೊದಲಾದ ವೃತ್ತಿಪರ ಕೋರ್ಸ್ ಪೂರೈಸಿದ ಯುವಕರಿಗೆ ಸರ್ಕಾರದಿಂದ ೧ ವರ್ಷದ ಉದ್ಯೋಗದ ಅಪ್ರೆಂಟಿಸ್‌ನ್ನು ಕೇಳುವ ಹಕ್ಕುಗಳನ್ನು ನೀಡುವ ಮೂಲಕ ಅವರಿಗೆ ಬಲ ತುಂಬಲಾಗುವುದು, ಇದರಿಂದ ಕೌಶಲ್ಯ ಹಾಗೂ ತರಬೇತಿ ಪಡೆದ ಕೋಟಿ ಕೋಟಿ ಯುವಕರ ಶಕ್ತಿ ದೊರಕಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಇಲ್ಲಿಯವರೆಗೆ ಒಂದೇ ಒಂದು ರೂ. ರೈತರ ಸಾಲಮನ್ನಾ ಮಾಡಿಲ್ಲ, ಎಂಎಸ್‌ಪಿ ಆಧರಿಸಿದ ದರ ನೀಡಿಲ್ಲ, ಆದರೆ ಇಂಡಿಯಾ ಒಕ್ಕೂಟ ಅಸ್ತಿತ್ವಕ್ಕೆ ಬಂದ ತಕ್ಷಣವೇ ರೈತರ ಸಾಲಮನ್ನಾ ಮಾಡುವ ಜೊತೆಗೆ ರೈತರು ಬೆಳೆದ ಬೆಳೆಗಳಿಗೆ ಎಂಎಸ್‌ಪಿ ಆಧರಿಸಿದ ದರ ನೀಡುವ ಸಂಕಲ್ಪ ಮಾಡಲಾಗಿದೆ ಎಂದರು.
ಮೋದಿ ಅವರಿಗೆ ಕಣ್ಣೀರು ಬರಬಹುದು.
ಮೋದಿಜಿ ಅವರು ಸಂಪೂರ್ಣ ಭಯಭೀತರಾಗಿದ್ದಾರೆ, ಹೀಗಾಗಿ ಕೆಲವೇ ದಿನಗಳಲ್ಲಿ ಮೋದಿಜಿ ಅವರಿಗೆ ವೇದಿಕೆಯಲ್ಲಿಯೇ ಕಣ್ಣೀರು ಸುರಿಸಿದರೂ ಸುರಿಸಬಹುದು, ಪಾಕಿಸ್ತಾನ, ಚೈನಾ ಮಾತು ಆಡಬಹುದು, ಮೊಬೈಲ್ ಫೋನ್ ಲೈಟ್ ಆನ್ ಮಾಡಿ ಇಲ್ಲವೇ ಚಪ್ಪಾಳೆ ಹೊಡೆಯಿರಿ ಎಂದು ಹೇಳುವ ದಿನ ದೂರವಿಲ್ಲ, ನಿಮ್ಮ ಗಮನವನ್ನು ಬೇರೆಡೆ ಸೆಳೆಯುವ ಕೆಲಸವನ್ನು ಮಾಡಬಹುದು ಎಂದು ರಾಹುಲ್ ಗಾಂಧೀ ಮೋದಿ ಅವರ ಕುರಿತು ಲೇವಡಿ ಮಾಡಿದರು.

