ಬಸವನಬಾಗೇವಾಡಿ: ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ನಂದಿಮಠದ ಗುರುವೀರಸಿದ್ದ ಶಿವಯೋಗಿಗಳ ೭೪ ನೇ ಜಾತ್ರಾಮಹೋತ್ಸವ ಹಾಗೂ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಗಳ ದ್ವಿತೀಯ ಪುಣ್ಯಾರಾಧನೆಯಂಗವಾಗಿ ಏ. ೨೭ ರಿಂದ ೩೦ ರವರೆಗೆ ನಾಲ್ಕು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನಂದಿಮಠದ ವೀರಸಿದ್ದ ಸ್ವಾಮೀಜಿ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಏ.೨೭ ರಂದು ಬೆಳಗ್ಗೆ ೮ ಗಂಟೆಗೆ ಬೃಂಗೀಶ್ವರಲಿಂಗ ಶಿವಾಚಾರ್ಯ ಸ್ವಾಮೀಜಿಯವರಿಂದ ಷಟ್ಸ್ಥಲ ಧ್ವಜಾರೋಹಣದೊಂದಿಗೆ ಜಾತ್ರಾಮಹೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಬೆಳಗ್ಗೆ ೧೦ ಗಂಟೆಗೆ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ, ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಸಂಗಮೇಶ್ವರ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕೆಂದರು.
ಏ. ೨೮ ರಂದು ಸಂಜೆ ೭ ಗಂಟೆಗೆ ಜಾತ್ರಾಮಹೋತ್ಸವದಂಗವಾಗಿ ಹಮ್ಮಿಕೊಂಡಿದ್ದ ಪುರಾಣ ಮಹಾಮಂಗಲ ಕಾರ್ಯಕ್ರಮ ದೇವರಹಿಪ್ಪರಗಿಯ ಮಡಿವಾಳೇಶ್ವರ ಸ್ವಾಮೀಜಿ, ಸುರಪುರದ ಪ್ರಭುಲಿಂಗ ಸ್ವಾಮೀಜಿ, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಕುಂಟೋಜಿಯ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ವಿವಿಧ ಶ್ರೀಗಳ ಸಾನಿಧ್ಯದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಮಹಾದೇವಯ್ಯ ಹಿರೇಮಠ ಅವರಿಂದ ಉಪನ್ಯಾಸ, ಸೇವೆ ಸಲ್ಲಿಸಿದ ಸದ್ಭಕ್ತರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ರಾತ್ರಿ ೧೦ ಗಂಟೆಗೆ ವಿಜಯಪುರದ ಗುರು ಪುಟ್ಟರಾಜ ನಾಟ್ಯ ಸಂಘದಿಂದ ಮಿಸ್ಟರ್ ಗುಂಡುರಾವ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ ಎಂದರು.
ಏ. ೨೯ ರಂದು ಬೆಳಗ್ಗೆ ೮ ಗಂಟೆಗೆ ವಿದ್ಯಾಸಾಗರ ಹಿರೇಮಠ, ಆನಂದಯ್ಯ ಸ್ಥಾವರಮಠ ಅವರ ವೈದಿಕತ್ವದಲ್ಲಿ ಮೃತ್ಯುಂಜಯ ಹೋಮದ ಪೂರ್ಣಾಹುತಿ ನಡೆಯಲಿದೆ. ಸಂಜೆ ೭ ಗಂಟೆಗೆ ಶಿರಹಟ್ಟಿಯ ಜಗದ್ಗುರು ಫಕೀರ ಸಿದ್ದರಾಮ ಸ್ವಾಮೀಜಿ, ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ನಂದಗಾಂವದ ರಾಜಶೇಖರ ಸ್ವಾಮೀಜಿ, ಪಡೇಕನೂರಿನ ಮಲ್ಲಿಕಾರ್ಜುನ ಸ್ವಾಮೀಜಿ, ಕಲಕೇರಿಯ ಮಡಿವಾಳೇಶ್ವರ ಶಿವಾಚಾರ್ಯ ಸ್ವಾಮೀಜಿ, ಚಡಚಣದ ಷಡಕ್ಷರ ಸ್ವಾಮೀಜಿ, ಹಳೆಕೋಟೆಯ ಸಿದ್ದಬಸವ ಸ್ವಾಮೀಜಿ, ಕೊಣ್ಣೂರಿನ ಡಾ.ವಿಶ್ವಪ್ರಭು ಶಿವಾಚಾರ್ಯ ಸ್ವಾಮೀಜಿ, ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಶಿವಾನುಭವ ಚಿಂತನ ನಡೆಯಲಿದೆ. ಈ ಕಾರ್ಯಕ್ರಮವನ್ನು ಸಚಿವ ಶಿವಾನಂದ ಪಾಟೀಲ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಮಹನೀಯರಿಗೆ ನಂದಿ ಸಿರಿ ರಾಜ್ಯ ಪುರಸ್ಕಾರ ನೀಡಿ ಗೌರವಿಸಲಾಗುವದು. ರಾತ್ರಿ ೧೦.೩೦ ಗಂಟೆಗೆ ಸಿದ್ದು ನಾಲತವಾಡ ಅವರಿಂದ ಹಾಸ್ಯ ಹಬ್ಬ ಜರುಗಲಿದೆ ಎಂದರು.
ಏ.೩೦ ರಂದು ಬೆಳಗ್ಗೆ ೬ ಗಂಟೆಗೆ ಕರ್ತೃ ಗದ್ದುಗೆಗೆ ಪೂಜೆ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಜಂಗಮ ವಟುಗಳಿಗೆ ಅಯ್ಯಾಚಾರ ಸಂಸ್ಕಾರ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ಜರುಗಲಿದೆ. ನಂತರ ೯ ಗಂಟೆಗೆ ವಿವಿಧ ಕಲಾ ತಂಡದ ಮೇಳ, ವಿವಿಧ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಸಿದ್ದ ಶಿವಯೋಗಿಗಳವರ ಪಲ್ಲಕ್ಕಿ ಉತ್ಸವ ಹಾಗೂ ಶಿರಹಟ್ಟಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ. ಮಧ್ಯಾನ್ಹ ೧ ಗಂಟೆಗೆ ಶ್ರೀಮಠದ ಶ್ರೀಗಳಿಂದ, ಪುರವಂತರಿಂದ ಅಗ್ನಿಶಮನ ಜರುಗಿದ ನಂತರ ಮಹಾಪ್ರಸಾದ ವಿತರಣೆ ನಡೆಯಲಿದೆ. ಸಂಜೆ ೪ ಗಂಟೆಗೆ ಉತ್ಸವ ಮೂರ್ತಿ ಹಾಗೂ ಕೊಡೆ ಕಳಸ ಬರಮಾಡಿಕೊಂಡ ನಂತರ ೫ ಗಂಟೆಗೆ ರಥೋತ್ಸವ ಜರುಗಲಿದೆ. ರಾತ್ರಿ ಆಕರ್ಷಕ ಮದ್ದು ಸುಡುವ ಕಾರ್ಯಕ್ರಮ ಜರುಗಿದ ನಂತರ ರಾತ್ರಿ ೧೦ ಗಂಟೆಗೆ ಬಸವನಬಾಗೇವಾಡಿಯ ಬಸವೇಶ್ವರ ಬಯಲಾಟ ಸಂಘದಿಂದ ರೇಣುಕಾ ಯಲ್ಲಮ್ಮ ಬಯಲಾಟ ಪ್ರದರ್ಶನವಾಗಲಿದೆ. ನಾಲ್ಕು ದಿನಗಳ ನಡೆಯಲಿರುವ ವಿವಿಧ ಕಾರ್ಯಕ್ರಮಗಳಿಗೆ ಸದ್ಭಕ್ತರು ಆಗಮಿಸಿ ಗುರುಕೃಪೆಗೆ ಪಾತ್ರರಾಗಬೇಕೆಂದರು.
Subscribe to Updates
Get the latest creative news from FooBar about art, design and business.
Related Posts
Add A Comment

