ಬಸವನಬಾಗೇವಾಡಿ: ಸಮಾಜಕ್ಕೆ ಕೊಡುಗೆ ಕೊಟ್ಟ ಮಹನೀಯರನ್ನು ಎಲ್ಲ ಕಾಲಕ್ಕೂ ಸಮಾಜ ಸ್ಮರಿಸುವ ಮೂಲಕ ಅವರಿಗೆ ಗೌರವ-ನಮನ ಸಲ್ಲಿಸಬೇಕಾದ ಕರ್ತವ್ಯವಾಗಿದೆ ಎಂದರೆ ತಪ್ಪಾಗಲಾರದು ಎಂದು ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದರು.
ಪಟ್ಟಣದ ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯು ಬುಧವಾರ ಹಮ್ಮಿಕೊಂಡಿದ್ದ ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲ ಸಂಸ್ಥಾಪಕ ನಿವೃತ್ತ ಮಾಮಲೇದಾರ ಲಿಂ. ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಸಮಾಜಕ್ಕೆ ಕೊಡುಗೆ ಕೊಟ್ಟವರ ಸಾಲಿನಲ್ಲಿರುವ ಅಮೀನಗಡದ ನಿವೃತ್ತ ಮಾಮಲೇದಾರ ಲಿಂ. ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರು ತಮ್ಮ ನಿವೃತ್ತಿಯ ನಂತರ ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲಸಂಸ್ಥಾಪಕರಾಗಿ ಬಸವೇಶ್ವರ ದೇವಸ್ಥಾನದ ಮೂಲ ಜೀರ್ಣೋದ್ಧಾರಕರಾಗಿ ಧಾರ್ಮಿಕ ಕ್ಷೇತ್ರದ ಕಾರ್ಯ ಮಾಡಿದ್ದಾರೆ. ಇವರು ಆರಂಭದಲ್ಲಿ ತಾವು ದೇಣಿಗೆ ನೀಡಿ ನಂತರ ಸಮಾಜದಲ್ಲಿರುವ ಎಲ್ಲ ಬಾಂಧವರ ದೇಣಿಗೆ ಸಹಾಯದೊಂದಿಗೆ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯ ಬಸವೇಶ್ವರ ದೇವಾಲಯದ ಜೀರ್ಣೋದ್ಧಾರ, ದೇವಾಲಯದ ಸುತ್ತಲೂ ಕಲ್ಲು ನಿರ್ಮಿತ ಅತ್ಯಾಕರ್ಷಕ ಆವರಣಗೋಡೆ ನಿರ್ಮಾಣ ಸೇರಿದಂತೆ ಇತರೇ ಕಟ್ಟಡಗಳ ನಿರ್ಮಾಣ ಕಾರ್ಯ ಮಾಡಿದ್ದಾರೆ. ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಅಂದಿನ ಬ್ರಿಟಿಷ್ ಸರ್ಕಾರ ಇವರಿಗೆ ರಾವ್ಸಾಹೇಬ ಎಂಬ ಬಿರುದು ನೀಡಿತ್ತು. ಇಂತಹ ಮಹನೀಯರ ತತ್ವದಾರ್ಶಗಳನ್ನು ಇಂದಿನ ಪೀಳಿಗೆ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದ ಅವರು ಲಿಂ. ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಜೀವನದಲ್ಲಿ ನಡೆದ ಕೆಲ ಘಟನೆಗಳನ್ನು ಸ್ಮರಿಸಿಕೊಂಡರು.
ನಿವೃತ್ತ ಶಿಕ್ಷಕ ಎಫ್.ಡಿ.ಮೇಟಿ ಮಾತನಾಡಿ, ನಾವು ನಮ್ಮ ಶರೀರದಿಂದ ಸಮಾಜದಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ನಮ್ಮ ಕರ್ತವ್ಯದಿಂದ ಸಮಾಜವನ್ನು ಗೆಲ್ಲಬಹುದು. ಅನೇಕ ಮಹನೀಯರು ತಮ್ಮ ಪ್ರಾಮಾಣಿಕ ಕರ್ತವ್ಯ, ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ಸದಾ ಸ್ಮರಣೀಯರಾಗಿದ್ದಾರೆ. ಸಮಾಜವು ಎಲ್ಲ ದಾರ್ಶನಿಕರನ್ನು, ಮಹಾನ್ ವ್ಯಕ್ತಿಗಳನ್ನು ಸ್ಮರಿಸುತ್ತದೆ ಎಂದ ಅವರು ನಾನು ಈ ಊರಿಗೆ ಶಿಕ್ಷಕನಾಗಿ ಬಂದ ಆರಂಭದ ದಿನಗಳಲ್ಲಿ ಲಿಂ.ಮಲ್ಲಪ್ಪ ಸಿಂಹಾಸನ ಅವರು ದೇವಾಲಯದ ಸಂಬಂಧಿಸಿದಂತೆ ಮಾಡುತ್ತಿದ್ದ ಕಾರ್ಯಗಳನ್ನು ನಾನು ನೋಡಿದ್ದು, ಅವರ ಕಾರ್ಯ ವೈಖರಿಯ ಕುರಿತು ಸ್ಮರಿಸಿಕೊಂಡರು.
ಸಿಂಹಾಸನರ ವಂಶಸ್ಥ, ನಿವೃತ್ತ ಕೃಷಿ ಅಧಿಕಾರಿ ಎಂ.ಎಸ್.ಸಿಂಹಾಸನ ಮಾತನಾಡಿ, ನಮ್ಮ ಮುತ್ತಜ್ಜನವರು ಮಾಡಿದ ಕಾರ್ಯ ಸ್ಮರಣೀಯವಾಗಿದೆ. ಇಂದು ಡಾ.ಎಸ್.ಎಂ. ಜಾಮದಾರ ಅವರು ಸಹ ಈ ದೇವಾಲಯ ಪುನರ್ ಜೀರ್ಣೋದ್ಧಾರ ಮಾಡಿದ್ದಾರೆ. ಇವರ ಕಾರ್ಯವನ್ನು ಇಲ್ಲಿ ಸ್ಮರಿಸಬೇಕಿದೆ ಎಂದರು.
ಸಾಹಿತಿ ಮಹಾಂತೇಶ ಸಂಗಮ ಪ್ರಾಸ್ತವಿಕವಾಗಿ ಮಾತನಾಡಿ, ೨೦೧೧ ರಲ್ಲಿ ನಂದಿ ಸಾಹಿತ್ಯ ವೇದಿಕೆ ಈ ಪುಣ್ಯ ಸ್ಮರಣೆ ಕಾರ್ಯಕ್ರಮ ಸಾರ್ವಜನಿಕ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಈಗ ಮಂಡಳಿಯು ಮುನ್ನೆಡೆಸಿಕೊಂಡು ಹೋಗುತ್ತಿದೆ. ಲಿಂ. ಮಲ್ಲಪ್ಪ ಸಿಂಹಾಸನ ಅವರ ಪ್ರತಿಮೆ ಸುತ್ತ ಸಣ್ಣ ಉದ್ಯಾನವನ ನಿರ್ಮಾಣವಾಗಬೇಕು ಸೇರಿದಂತೆ ವಿವಿಧ ಯೋಜನೆಗಳ ಕುರಿತು ಮಂಡಳಿಗೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಮಂಡಳಿಯು ಗಮನ ಹರಿಸಬೇಕಿದೆ ಎಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಅನೇಕ ಮಹನೀಯರು ವಿದ್ಯಾಸಂಸ್ಥೆ, ಮಠ-ಮಂದಿರಗಳನ್ನು ಕಟ್ಟಿದ ಫಲವಾಗಿ ಸಮಾಜಕ್ಕೆ ಸಾಕಷ್ಟು ಸದುಪಯೋಗವಾಗಿದೆ. ನಾಡಿನಲ್ಲಿ ಕೆಎಲ್ಇ ಸಂಸ್ಥೆಯ ಕಟ್ಟಲು ಲಿಂಗರಾಜ ದೇಸಾಯಿ, ಬಿಎಲ್ಡಿಇ ಸಂಸ್ಥೆಯ ಕಟ್ಟಲು ಬಂಥನಾಳದ ಶ್ರೀಗಳು, ಬಾಗಲಕೋಟದ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕಟ್ಟಲು ಬೀಳೂರಿನ ಶ್ರೀಗಳ ಕೊಡುಗೆ ಮರೆಯುವಂತಿಲ್ಲ. ಇಂತಹ ಮಹಾತ್ಮರು ಸಮಾಜಕ್ಕೆ ಸದಾ ಪ್ರೇರಣಾದಾಯಕ ಶಕ್ತಿಯಾಗಿದ್ದಾರೆ. ಮನುಷ್ಯನಿಗೆ ಮರೆಯುವ ಸ್ವಭಾವ ಸಹಜ. ಸಮಾಜಕ್ಕೆ ಕೊಡುಗೆ ನೀಡಿದ ಮಹಾತ್ಮರನ್ನು ಸಮಾಜ ಎಂದಿಗೂ ಮರೆಯಬಾರದು. ಲಿಂ. ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರು ಬಸವನಬಾಗೇವಾಡಿಗೆ ಕೊಟ್ಟ ಕೊಡುಗೆಯನ್ನು ಎಂದಿಗೂ ಮರೆಯಬಾರದು ಎಂದರು.
ಈಚೆಗೆ ಸರ್ಕಾರ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ಘೋಷಣೆ ಮಾಡಿದೆ. ಅದು ಅನುಷ್ಠಾನವಾಗಿ ಕೂಡಲೇ ಅಭಿವೃದ್ಧಿ ಕಾರ್ಯಗಳಾಗಬೇಕು. ಪ್ರತಿವರ್ಷ ಬಸವ ಜಯಂತಿಯಂದು ಈ ನೆಲದಲ್ಲಿ ರಾಷ್ಟ್ರೀಯ ಬಸವಜಯಂತಿ ಆಚರಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ಜನರು ಇಚ್ಛಾಶಕ್ತಿಯನ್ನು ತೋರಿಸಿ ರಾಷ್ಟ್ರೀಯ ಬಸವ ಜಯಂತಿ ಆಚರಣೆಗೆ ಉತ್ಸಾಹ ತೋರಿಸಬೇಕೆಂದರು.
ಅಧ್ಯಕ್ಷತೆಯನ್ನು ಮಂಡಳಿಯ ಅಭಿಯಂತರ ಡಿ.ಎಸ್.ಹಿರೇಮಠ ವಹಿಸಿದ್ದರು.
ಶರಣು ಬಸ್ತಾಳ ಪ್ರಾರ್ಥಿಸಿದರು. ಎಸ್.ಕೆ.ಸೋಮನಕಟ್ಟಿ ಸ್ವಾಗತಿಸಿದರು. ಬಸವರಾಜ ನಂದಿಹಾಳ ನಿರೂಪಿಸಿದರು. ಪಿ.ಎಲ್.ಹಿರೇಮಠ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ದೇವಾಲಯದ ಹೊರಆವರಣದಲ್ಲಿರುವ ಲಿಂ.ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.
Subscribe to Updates
Get the latest creative news from FooBar about art, design and business.
ಸಮಾಜಕ್ಕೆ ಕೊಡುಗೆ ಕೊಟ್ಟವರನ್ನು ಸ್ಮರಿಸಬೇಕು :ಕಲ್ಯಾಣಶೆಟ್ಟಿ
Related Posts
Add A Comment

