ವಿಜಯಪುರದಲ್ಲಿ ಕಾಲ್ನಡಿಗೆ ಜಾಥಾ ಮೂಲಕ ಮತದಾನ ಜಾಗೃತಿ
ವಿಜಯಪುರ: ಈ ಬಾರಿ ಯುವ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಮೊಟ್ಟ ಮೊದಲ ಬಾರಿಗೆ ಮತದಾನ ಮಾಡುವವರು ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸಿ, ಕರ್ತವ್ಯವನ್ನು ನಿಭಾಯಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. ಜವಾಬ್ದಾರಿಯುತವಾಗಿ ಸೂಕ್ತ ಅಭ್ಯರ್ಥಿಯನ್ನು ಆರಿಸಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕಾರಣಿಭೂತರಾಗಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ್ ಹೇಳಿದರು.
ಬುಧವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ್ಲ ಲೋಕಸಭಾ ಚುನಾವಣೆ-೨೦೨೪ರ ಪ್ರಯುಕ್ತ ಮತದಾನ ಜಾಗೃತಿಗಾಗಿ ವಿಜಯಪುರ ಜಿಲ್ಲಾ ಪಂಚಾಯತಿಯ ಆಟದ ಮೈದಾನದಿಂದ ಹಮ್ಮಿಕೊಂಡ ಕಾಲ್ನಡಿಗೆ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಕರು ಒಂದು ದೇಶದ ಶಕ್ತಿಯಾಗಿ ರೂಪುಗೊಂಡಾಗ ಆಡಳಿತ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಚಾಚುತಪ್ಪದೇ ಮತದಾನ ಮಾಡಬೇಕು ಹಾಗೂ ನೆರೆಹೊರೆಯವರಿಗೆ ಮತದಾನದ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾ ಪೋಲಿಸ್ ವರಿಷ್ಠ್ಠಾಧಿಕಾರಿಗಳಾದ ಋಷಿಕೇಶ ಸೊನಾವಣೆ, ವಿಜಯಪುರ ಮೀಸಲು ಮತಕ್ಷೇತ್ರದ ಚುನಾವಣಾ ವೀಕ್ಷಕರಾದ ಡಾ. ರತನ್ ಕನ್ವರ್ ಹೆಚ್. ಗಧವಿಚರಣ, ಇನ್ನೋರ್ವ ವೀಕ್ಷಕರಾದ ಅನೂಪಕುಮಾರ, ಮಹಾನಗರ ಪಾಲಿಕೆ ಆಯುಕ್ತರಾದ ಅಶಾದ ಉರ್ ರೆಹಮಾನ್ ಶರೀಫ ರವರು ಹಸಿರು ನಿಶಾನೆ ತೋರಿಸಿ ಬಲೂನ್ ಗಳನ್ನು ಹಾರಿ ಬಿಡುವುದರ ಮೂಲಕ ಚಾಲನೆ ನೀಡಿದರು.
ಕಾಲ್ನಡಿಗೆ ಜಾಥಾ ಕಾರ್ಯಕ್ರಮವು ವಿಜಯಪುರ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು, ಕಾಲೇಜುಗಳ ವಿದ್ಯಾರ್ಥಿಗಳು, ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು, ಕ್ರೀಡಾ ಇಲಾಖೆಯ ಕ್ರೀಡಾಪಟುಗಳು ಸೇರಿದಂತೆ ಸುಮಾರು ೩೦೦೦ ಕ್ಕಿಂತ ಹೆಚ್ಚು ಜನರಿಂದ ವಿಜಯಪುರ ಜಿಲ್ಲಾ ಪಂಚಾಯತಿಯ ಆಟದ ಮೈದಾನದಿಂದ ಆರಂಭಗೊಂಡು ಗೋಳಗುಮ್ಮಟದವರೆಗೆ ಸಾಗಿತು.
ಗೋಳಗುಮ್ಮಟದ ಆವರಣದಲ್ಲಿ ಮತದಾನ ಜಾಗೃತಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಮತದಾನ ಅಮೂಲ್ಯವಾದದ್ದು ಹಾಗೂ ಪವಿತ್ರವಾದದ್ದು, ಆದ್ದರಿಂದ ಸಮಾಜಕ್ಕಾಗಿ, ದೇಶಕ್ಕಾಗಿ ಕಡ್ಡಾಯವಾಗಿ ಮತ ಚಲಾಯಿಸಿ ದೇಶದ ಅಭಿವೃದ್ಧಿಗೆ ಕಾರಣಿಭೂತರಾಗಿ ಎಂದು ಹೇಳಿದರು.
ಜಿಲ್ಲಾ ಪಂಚಾಯತಿಯ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿಗಳಾದ ಎ. ಬಿ. ಅಲ್ಲಾಪೂರ ರವರು ಮತದಾನ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ನೊಡೆಲ್ ಅಧಿಕಾರಿಗಳಾದ ಸಿ. ಆರ್. ಮುಂಡರಗಿ, ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾದ ಬಿ.ಎಸ್. ಮೂಗನೂರಮಠ, ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿಗಳಾದ ನಿಂಗಪ್ಪ ಗೋಠೆ, ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ರಾಮಣ್ಣ ಅಥಣಿ, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಕೆ. ಕೆ. ಚವ್ಹಾಣ, ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಸಿ. ಬಿ. ಕುಂಬಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ತುಂಬರಮಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪುಂಡಲೀಕ ಮಾನವರ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ರಾಜಶೇಖರ್ ಹೆಚ್. ದೈವಾಡಿ, ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಹೊಂಗಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಎಸ್, ಜಿ ಲೋಣಿ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಪ್ರಶಾಂತ ಪೂಜಾರಿ, ಜಿಲ್ಲಾ ಎನ್.ಎಸ್.ಎಸ್ ಘಟಕದ ನೊಡೆಲ್ ಅಧಿಕಾರಿಗಳಾದ ಪ್ರಕಾಶ ರಾಠೋಡ, ನೆಹರೂ ಯುವ ಕೇಂದ್ರದ ರಾಹುಲ್ ಡೊಂಗ್ರೆ, ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿಗಳಾದ ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ಸಾಕ್ಷಿ ಹಿರೇಮಠ, ರಾಜೇಶ ಪವಾರ, ಸಹನಾ ಕುಡಿಗನೂರ ಹಾಗೂ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಯವರು ಹಾಗೂ ಇತರರು ಉಪಸ್ಥಿತರಿದ್ದರು.

