ಬಸವನಬಾಗೇವಾಡಿ: ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿರುವ ನಾಗಾವಿ ಯಲ್ಲಮ್ಮದೇವಿ ಜಾತ್ರಾಮಹೋತ್ಸವ ಮಂಗಳವಾರ ಸಂಭ್ರಮ, ಸಡಗರದಿಂದ ಜರುಗಿತು. ಜಾತ್ರೆಯಂಗವಾಗಿ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ತಾಯಿಜೋಗಮ್ಮರ ಕುಣಿತ, ವಿವಿಧ ವಾದ್ಯ ಮೇಳದೊಂದಿಗೆ ಸಂಭ್ರಮದಿಂದ ಜರುಗಿತು.
ನಾಗಾವಿ ಯಲ್ಲಮ್ಮ ದೇವಸ್ಥಾನದಿಂದ ಐದು ಕಳಸ ಹಾಗೂ ಪಲ್ಲಕ್ಕಿ ಉತ್ಸವವು ಪಟ್ಟಣದ ಬಸವೇಶ್ವರ ವೃತ್ತ, ಅಗಸಿ, ಮಹಾರಾಜರ ಮಠದ ಮಾರ್ಗ, ಬಸವಜನ್ಮ ಸ್ಮಾರಕ ಮಾರ್ಗ, ವಿಜಯಪುರ ಮಾರ್ಗವಾಗಿ ಪುನಃ ಬಸವೇಶ್ವರ ವೃತ್ತಕ್ಕೆ ಬಂದು ಬಸವೇಶ್ವರ ದೇವಸ್ಥಾನದ ಬಸವತೀರ್ಥ ಭಾವಿಗೆ ಆಗಮಿಸಿದ ನಂತರ ಗಂಗಾಸ್ಥಳ ಮಾಡಿಕೊಂಡ ನಂತರ ಡೊಳ್ಳು, ಚೌಡಕಿ ಸೇರಿದಂತೆ ಸುಮಂಗಲೆಯರ ಆರತಿಯೊಂದಿಗೆ ಬಸವೇಶ್ವರ ವೃತ್ತದ ಮಾರ್ಗವಾಗಿ ಇಂಗಳೇಶ್ವರ ರಸ್ತೆಯಲ್ಲಿರುವ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಕಳಸಗಳು, ನಾಗಾವಿ ಯಲ್ಲಮ್ಮದೇವಿ ಪಲ್ಲಕ್ಕಿ ಉತ್ಸವ ತಲುಪಿತು. ಕಳಸಗಳಿಗೆ ಪೂಜೆ ನೆರವೇರಿಸಿದ ನಂತರ ದೇವಸ್ಥಾನಕ್ಕೆ ಕಳಸಗಳನ್ನು ಏರಿಸಲಾಯಿತು. ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪಲ್ಲಕ್ಕಿ ಉತ್ಸವದಲ್ಲಿ ಬಿರುಬಿಸಿಲನ್ನು ಲೆಕ್ಕಿಸದೇ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಇಂಗಳೇಶ್ವರದ ಜೋಗಮ್ಮ ತಾಯಿ ಶರಣಮ್ಮ ಅಂಬಿಗೇರ ಹಾಗೂ ಇವರ ಸಂಗಡಿಗರ ಜೋಗಮ್ಮ ನೃತ್ಯ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಅಕ್ಕಮ್ಮ ನಾಯ್ಕೋಡಿ, ನೀಲಮ್ಮ ಕಾಳಿಂಗ, ಶಾಂತವ್ವ ರಾಠೋಡ, ಆರತಿ ನಾಯ್ಕೋಡಿ, ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣ ದೇಸಾಯಿ, ಹಣಮಂತ ನಾಯ್ಕೋಡಿ, ಮಲ್ಲೇಶಿ ಚಿಕ್ಕೂರ, ಚಂದ್ರಶೇಖರ ಕಲ್ಲೂರ, ರಾಮು ಕಟ್ಟಿಮನಿ, ಅಪ್ಪಾಸಾಹೇಬ ಕಲ್ಲೂರ, ಮಲ್ಲು ಜೈನಾಪುರ, ರಮೇಶ ನಾಯ್ಕೋಡಿ, ಅಣ್ಣು ಕುಂಬಾರ, ಬಸವರಾಜ ಸಂಗಮ, ಬಸವರಾಜ ಬನಾಸಿ, ಮಹಾಂತೇಶ ಮಿಣಜಗಿ ಸೇರಿದಂತೆ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

