ಮುಗಿಲುಮುಟ್ಟಿದ ಹರ್ಷೋದ್ಗಾರ | ಭಕ್ತರಿಂದ ದೀಡ ನಮಸ್ಕಾರ
– ಮಲ್ಲು ಎನ್. ಕೆಂಭಾವಿ
ಬ್ರಹ್ಮದೇವನಮಡು: ಮುಗಿಲು ಮುಟ್ಟಿದ ಹರ್ಷೋದ್ಗಾರ, ಎಲ್ಲಿ ನೋಡಿದರೂ ಜನಸಾಗರ, ಗೋಧೂಳಿ ಮುಹೂರ್ತದಲ್ಲಿ ವೈಭವದ ರಥೋತ್ಸವ, ಹಣ್ಣು ಸಮರ್ಪಿಸಿ ಧನ್ಯತೆ ಮೆರೆದ ಭಕ್ತರು..
ಸಿಂದಗಿ ತಾಲೂಕಿನ ಸುಕ್ಷೇತ್ರ ಗೋಲಗೇರಿಯ ಗೊಲ್ಲಾಳೇಶ್ವರದಲ್ಲಿ ಮಂಗಳವಾರ ಸಂಜೆ ಕಂಡುಬಂದ ದೃಶ್ಯಗಳಿವು.
ಚೈತ್ರ ಪೌರ್ಣಿಮೆ ನಿಮಿತ್ತ ಪ್ರತಿ ವರ್ಷದಂತೆ ಅದ್ಧೂರಿ ರಥೋತ್ಸವ ನಡೆಯಿತು. ಲಕ್ಷಾಂತರ ಭಕ್ತರು ಬೆಳಗ್ಗೆಯಿಂದ ಕ್ಷೇತ್ರಕ್ಕೆ ಆಗಮಿಸಿ ದರ್ಶನ ಪಡೆದರು.
ಸುತ್ತಲಿನ ೨೦ಕ್ಕೂ ಹೆಚ್ಚು ಹಳ್ಳಿಗಳ ಭಕ್ತರು ಪಾದಯಾತ್ರೆ ಮೂಲಕ ನಸುಕಿನಲ್ಲೇ ಕ್ಷೇತ್ರಕ್ಕೆ ಆಗಮಿಸಿದರು. ಸೂರ್ಯೋದಯ ಸಂದರ್ಭದಲ್ಲಿ ಸಾವಿರಾರು ಭಕ್ತರು ದೀಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದರು. ಧರ್ಮದರ್ಶಿ ವರಪುತ್ರ ಹೊಳೆಪ್ಪ ಶರಣರು ದೇವರಮನಿ ಹಾಗೂ ಸಿದ್ದರಾಮ ದೇವರಮನಿ ಅವರ ನೇತೃತ್ವದಲ್ಲಿ ಬೆಳಗ್ಗೆ ರುದ್ರಾಭಿಷೇಕ ಹಾಗೂ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು. ಭಕ್ತರು ಸಂಜೆವರೆಗೆ ಸರದಿಯಲ್ಲಿ ನಿಂತು ಗೊಲ್ಲಾಳೇಶ್ವರನ ದರ್ಶನ ಪಡೆದರು. ಸಂಜೆ ಪಂಚಲೋಹದ ಕಲಶಾರೋಹಣ, ಭೂಚಕ್ರ ಕೊಡೆ ಏರಿಸಿದ ನಂತರ ಸಕಲ ವಾದ್ಯ ವೈಭವಗಳೊಂದಿಗೆ ಗೊಲ್ಲಾಳೇಶ್ವರನ ಭವ್ಯ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದಿಂದ ಪಾದಗಟ್ಟೆವರೆಗೆ ರಥ ಸಾಗುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಭಕ್ತರು ಉತ್ತತ್ತಿ, ಹಣ್ಣು, ಕಾಯಿ ಕರ್ಪೂರ ಸಮರ್ಪಿಸಿದರು. ಆಂಧ್ರ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿಜಯಪುರ, ಯಾದಗಿರಿ, ಕಲಬುರಗಿ ಜಿಲ್ಲೆಯಿಂದ ಉತ್ಸವಕ್ಕೆ ಭಕ್ತಸಾಗರವೇ ಹರಿದುಬಂದಿತ್ತು. ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಸಿಂದಗಿ ಸಿಪಿಐ ನಾನಾಗೌಡ ಪೋಲಿಸ್ ಪಾಟೀಲ, ಕಲಕೇರಿ ಠಾಣೆ ಪಿಎಸೈ ರೋಹಿಣಿ ಪಾಟೀಲ, ಸಿಂದಗಿ ಪಿಎಸೈ ಭೀಮಪ್ಪ ರಬಕವಿ, ಸಿಂದಗಿ, ಕಲಕೇರಿ ಠಾಣೆ ಸಿಬ್ಬಂದಿ ಸೂಕ್ತ ಬಂದೋ ಬಸ್ತ್ ಒದಗಿಸಿದ್ದರು.

