-ದೇವೇಂದ್ರ ಹೆಳವರ
ವಿಜಯಪುರ: ಚೈತ್ರಮಾಸದ ದವನದ ಹುಣ್ಣಿಮೆಯಂದು ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಹನುಮ ಜಯಂತಿಯ ಹಿನ್ನೆಲೆಯಲ್ಲಿ ನಗರದ ಆಯಾ ಬಡಾವಣೆಯಲ್ಲಿರುವ ಎಲ್ಲ ಹನುಮಾನ ದೇವಸ್ಥಾನಗಳಲ್ಲಿ ಬೆಳಿಗ್ಗೆ ಬಾಲ ಹನುಮನ ತೊಟ್ಟಿಲು ಕಾರ್ಯಕ್ರಮ ಹಾಗೂ ನಾಮಕರಣ ಪೂಜಾ ವಿಧಿ ವಿಧಾನದೊಂದಿಗೆ ನಡೆಯಿತು.
ಮುತ್ತೈದೆಯರು ಹನುಮ ದೇವರ ಭಾವಚಿತ್ರವನ್ನು ಹೂಹಾರಗಳಿಂದ ಅಲಂಕರಿಸಿದ್ದ ತೊಟ್ಟಿಲಲ್ಲಿಟ್ಟು ಹಾಡುಗಳನ್ನು ಹಾಡಿ ನಾಮಕರಣ ಮಾಡಿದರು.
ಎಲ್ಲ ಹನುಮಾನ ದೇವಸ್ಥಾನಗಳ ಮುಂದೆ ಆಕರ್ಷಕ ಮಂಟಪ ನಿರ್ಮಿಸಿ ರಂಗೋಲಿ ಬಿಡಿಸಿ ಕಂಬಗಳಿಗೆ ತೆಂಗಿನ ಗರಿ, ಬಾಳೆ ಗಿಡ, ಹೂಮಾಲೆ, ತಳಿರು ತೋರಣ ಕಟ್ಟಿ ವಿಶೇಷ ಅಲಂಕಾರ ಮಾಡಿದ್ದು ಭಕ್ತರ ಮನ ಸೆಳೆಯಿತು.
ಹನುಮ ಜಯಂತಿಯ ವಿಜೃಂಭಣೆಯ ಆಚರಣೆ ಜಾತ್ರೆಯ ವೈಭವದಂತಿತ್ತು.
ಪ್ರತಿ ದೇವಸ್ಥಾನಗಳಲ್ಲಿ ಹನುಮಾನ ದೇವರ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳ್ಳಿಯ ಕವಚ, ಎಲೆ ಪೂಜೆ, ವಿವಿಧ ಬಗೆಯ ಹೂವು- ಹಾರಗಳಿಂದ ಹನುಮಾನ ದೇವರ ಮೂರ್ತಿಗೆ ಅಲಂಕಾರ ಮಾಡಿದ್ದು ಭಕ್ತರನ್ನು ಬಹುವಾಗಿ ಆಕರ್ಷಿಸಿತು. ಎಲ್ಲ ದೇವಸ್ಥಾನಗಳಲ್ಲಿ ಹನುಮ ದೇವರ ಭಕ್ತಿಗೀತೆಗಳ ನಿನಾದ ಅನುರಣಿಸಿತು
ಬೆಳಿಗ್ಗೆಯಿಂದಲೇ ಭಕ್ತರು ದರ್ಶನ ಪಡೆಯಲು ಹನುಮಾನ ದೇವಸ್ಥಾನಗಳಿಗೆ ತೆರಳುತ್ತಿದ್ದುದು ಕಂಡು ಬಂತು. ಇದು ದಿನವಿಡೀ ನಡೆದೇ ಇತ್ತು. ಹನುಮಾನ ದೇವಸ್ಥಾನಗಳಲ್ಲಿ ಈ ದಿನ ಭಕ್ತರಿಗೆ ಪ್ರಸಾದ, ಅನ್ನ ಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನಕ್ಕೆ ಬರುವ ಭಕ್ತರು ತೊಟ್ಟಿಲು ತೂಗುತ್ತ ದೇವರ ದರ್ಶನ ಪಡೆದು ಭಕ್ತಿಭಾವದಲ್ಲಿ ಮಿಂದೆದ್ದರು.
ನಗರದ ಮನಗೂಳಿ ರಸ್ತೆಯ ಗಣೇಶನಗರದ ಶ್ರೀ ಸಾಕ್ಷಿ ಹನುಮಾನ ದೇವಸ್ಥಾನ, ಬಾಗಲಕೋಟ ರಸ್ತೆಯ ವಜ್ರ ಹನುಮಾನ ನಗರದ ಶ್ರೀ ವಜ್ರ ಹನುಮಾನ ದೇವಸ್ಥಾನ, ವೆಂಕಟೇಶನಗರದ ಶ್ರೀ ಹನುಮಾನ ದೇವಸ್ಥಾನ, ಇಬ್ರಾಹಿಂಪುರದ ಶ್ರೀ ಹನುಮಾನ ದೇವಸ್ಥಾನ, ಮನಗೂಳಿ ಅಗಸಿಯ ಶ್ರೀ ಹನುಮಾನ ದೇವಸ್ಥಾನ, ಎಂ.ಜಿ.ರಸ್ತೆಯ ಶ್ರೀ ಮಧಲಾ ಮಾರುತಿ ದೇವಸ್ಥಾನ, ಮಿರ್ದೆ ಗಲ್ಲಿಯ ಶ್ರೀ ತೆಗ್ಗಿನ ಹನುಮಾನ ದೇವಸ್ಥಾನ ಸೇರಿದಂತೆ ನಗರದ ವಿವಿಧ ಬಡಾವಣೆಯ ಹನುಮಾನ ದೇವಸ್ಥಾನಗಳಲ್ಲಿ, ಹಾಗೂ ಜಿಲ್ಲೆಯ ಸುಕ್ಷೇತ್ರ ಯಲಗೂರ, ಹಲಗಣಿ, ಕಂಬಾಗಿ, ಕೋರವಾರ, ದೇವರನಿಂಬರಗಿ, ಸಾರವಾಡದ ಶ್ರೀ ಮಾರುತಿ ದೇವಸ್ಥಾನ ಸೇರಿದಂತ ವಿವಿಧೆಡೆ ಪ್ರತೀ ವರ್ಷದಂತೆ ಈ ವರ್ಷವೂ ಹನುಮ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದ ವರದಿಯಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

