ಬಸವನಬಾಗೇವಾಡಿ: ಪ್ರತಿಯೊಬ್ಬರೂ ತಮ್ಮ ಬದುಕನ್ನು ಹೇಗೆ ಸಾಗಿಸುತ್ತಾರೋ ಹಾಗೇ ಅವರ ಬದುಕು ಸಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಬದುಕನ್ನು ಉತ್ಸಾಹ,ಸಂತೋಷದಿಂದ ಸಾಗಿಸಬೇಕೆಂದು ತಾಳಿಕೋಟಿಯ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಹೇಳಿದರು.
ತಾಲೂಕಿನ ಅವಿಮುಕ್ತ ಸುಕ್ಷೇತ್ರ ಯರನಾಳ ವಿರಕ್ತಮಠದ ಕರ್ತೃ ಜಗದ್ಗುರು ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ ಹಾಗೂ ಗುರುಸಂಗನಬಸವ ಸ್ವಾಮೀಜಿಗಳ ಜನ್ಮಸುವರ್ಣ ಮಹೋತ್ಸವದಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ತಾಯಂದಿರ ಉಡಿತುಂಬುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭಗವಂತನು ನಮಗೆ ಒಳ್ಳೆಯ ಜೀವನವನ್ನು ಕೊಟ್ಟಿದ್ದಾನೆ. ಈ ಜೀವನದಲ್ಲಿ ಪ್ರತಿಯೊಬ್ಬರೂ ಎಲ್ಲರೊಂದಿಗೆ ಪ್ರೀತಿಯಿಂದ ಇರುವ ಮೂಲಕ ಸುಂದರವಾದ ಜೀವನ ಕಳೆಯಬೇಕು. ರಾಧಾಕೃಷ್ಣನ್ ಅವರು ಹೇಳುವಂತೆ ಜೀವನ ಒಂದು ಹಾಡು, ಆಟ, ಉತ್ಸವ. ಈ ಜೀವನವನ್ನು ಹಾಡುತ್ತಾ, ಆಡುತ್ತಾ, ಉತ್ಸಾಹದಿಂದ ಸಾಗಿಸಬೇಕೆಂದರು.
ಜೀವನದಲ್ಲಿ ಯಾವುದು ಅಸಾಧ್ಯವೆಂಬುವದು ಇಲ್ಲ. ಜೀವನದಲ್ಲಿ ಸಾಧ್ಯವಾಗಿಸುವ ಶಕ್ತಿ ಗುರುವಿಗಿದೆ. ಪ್ರತಿಯೊಬ್ಬರೂ ಗುರುವಿನ ಕೃಪೆಗೆ ಸದಾ ಪಾತ್ರರಾಗಬೇಕು. ಶ್ರೀಮಠದ ಸಂಗನಬಸವ ಸ್ವಾಮೀಜಿಯವರು ತಮ್ಮ ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ, ಶೈಕ್ಷಣಿಕ ಕಾರ್ಯ ಮಾಡುವ ಮೂಲಕ ಭಕ್ತರ ಉದ್ಧಾರಕ್ಕೆ ಸದಾ ನಿಂತಿದ್ದಾರೆ ಎಂದರು.
ತಮದಡ್ಡಿಯ ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಲ್ಲಿನ ಶ್ರೀಗಳು ಜಾತ್ರಾಮಹೋತ್ಸವದಂಗವಾಗಿ ವೈಚಾರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ವೈಚಾರಿಕತೆಯನ್ನು ಮುಟ್ಟಿಸುತ್ತಿದ್ದಾರೆ. ಎಲ್ಲೆಡೆ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯ ಹಮ್ಮಿಕೊಂಡರೆ ಇವರು ತಾಯಂದಿರಿಗೆ ಉಡಿತುಂಬುವ ಕಾರ್ಯ ಹಮ್ಮಿಕೊಳ್ಳುವ ಮೂಲಕ ಎಲ್ಲ ತಾಯಂದಿರಿಗೆ ಉಡಿತುಂಬುತ್ತಿರುವುದು ವೈಚಾರಿಕತೆ. ಶ್ರೀಗಳು ಇದೀಗ ಜನ್ಮಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಇವರು ೧೨೧ ವರ್ಷ ಕಾಲ ಬದುಕಿಗೆ ಭಕ್ತರಿಗೆ ಸದಾ ಆಶೀರ್ವಾದ ಕರುಣಿಸುವಂತಾಗಲಿ ಎಂದರು.
ಬುರಣಾಪೂರದ ಯೋಗೇಶ್ವರಿ, ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ಯರನಾಳದ ಶಿವಪ್ರಸಾದದೇವರು ಮಾತನಾಡಿದರು.
ಸಾನಿಧ್ಯ ಗುರುಸಂಗನಬಸವ ಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ರಮೇಶ ಸೂಳಿಬಾವಿ, ಡಾ.ಅಮರೇಶ ಮಿಣಜಗಿ, ಸೌಮ್ಯ ಕಲ್ಲೂರ, ಶ್ರೀದೇವಿ ಉತ್ಲಾಸಕರ, ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಶ್ವಿನಿ ರೆಡ್ಡಿ ಅವರಿಗೆ ಸುವರ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಧ್ಯಮ ಕ್ಷೇತ್ರದಲ್ಲಿ ಬಂಗಾರ ಪದಕ ವಿಜೇತೆ ಲಕ್ಷ್ಮೀ ಬಾಗಲಕೋಟ ಅವರನ್ನು ಸನ್ಮಾನಿಸಲಾಯಿತು. ಸುರೇಶ ಲಲಿತಾ ಜೀವನ್ಮುಖಿ ದಂಪತಿಗಳನ್ನು ಆದರ್ಶ ದಂಪತಿಯೆಂದು ಗೌರವಿಸಲಾಯಿತು. ರೇವಣಸಿದ್ದ ಪೂಜಾರಿ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ರಾಜನಾಳ ಸ್ವಾಗತಿಸಿದರು. ಗಿರಿಜಾ ಪಾಟೀಲ, ಪುಷ್ಪಾ ಗುಳೇದ, ಶರಣಬಸು ಹಳಮನಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಂಗನಬಸವ ಸ್ವಾಮೀಜಿ ಅವರ ಪಾದಪೂಜೆ,ಪೀಠಾರೋಹಣ ನೆರವೇರಿತು.
Subscribe to Updates
Get the latest creative news from FooBar about art, design and business.
Related Posts
Add A Comment

