ಮಂಗಲ ಮಂಟಪ ಲೋಕಾರ್ಪಣೆ | ಅಮೃತಶಿಲಾಮೂರ್ತಿ ಪ್ರತಿಷ್ಠಾಪನೆ | ಶ್ರೀ ಗುರುಮರುಳಾರಾಧ್ಯ ಸಿರಿ ಪ್ರಶಸ್ತಿ ಪ್ರದಾನ
ಕಲಕೇರಿ: ಭಾರತೀಯ ಸನಾತನ ಧರ್ಮದಲ್ಲಿ ಪುರಾತನವಾದದ್ದು ವೀರಶೈವ ಪರಂಪರೆಯಾಗಿದ್ದು, ಹಿಂದಿನ ಅನೇಕ ನಾಗರೀಕತೆಗಳನ್ನು ಅಧ್ಯಯನ ಮಾಡಿದಾಗ ವೀರಶೈವ ಧರ್ಮ ಅಸ್ಥಿತ್ವದಲ್ಲಿರುವುದು ಕಂಡು ಬರುತ್ತದೆ ಈ ಹಿನ್ನೆಲೆಯಲ್ಲಿ ಜಾನ್ ಮಾರ್ಷಲ್ ಅಧ್ಯಯನದ ಪ್ರಕಾರ ಹರಪ್ಪ ಮತ್ತು ಮೆಹೆಂಜೋದಾರೋ ನಾಗರೀಕತೆಯ ಉತ್ಖನನದ ವೇಳೆ ಲಿಂಗಾಯತರು ಧರಿಸುವ ಲಿಂಗಗಳು ಸಿಕ್ಕಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಗ್ರಾಮದ ಗುರುಮರುಳಾರಾಧ್ಯರ ಹಿರೇಮಠದಲ್ಲಿ ಗುರುವಾರ ಸಂಜೆ ನಡೆದ ಮಹಾಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿಯ ಪುರಾಣ ಮುಕ್ತಾಯ ಮತ್ತು ಧರ್ಮಸಭೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವೀರಶೈವ ಪರಂಪರೆಯಲ್ಲಿ ಪಂಚಪೀಠಗಳ ಮೂಲಕ ಶತಶತಮಾನಗಳಿಂದಲೂ ನಾಡಿನಾದ್ಯಂತ ಶಾಖಾ ಮಠಗಳನ್ನು ಸ್ಥಾಪಿಸಿ, ಅಲ್ಲಿ ಮಠಾಧೀಶರನ್ನು ನೇಮಿಸಿ ಅವರ ಮೂಲಕ ಭಕ್ತರಿಗೆ ಅನ್ನ, ಅರಿವೆ, ಶಿಕ್ಷಣ ಸಂಸ್ಕಾರ ನೀಡಿ ಸಮಾಜದಲ್ಲಿ ಪ್ರಬುದ್ಧ ನಾಗರೀಕರಾಗುವಂತೆ ಮಾಡಿದ ಕೀರ್ತಿ ವೀರಶೈವ ಧರ್ಮಕ್ಕೆ ಸಲ್ಲುತ್ತದೆ ಎಂದರು.
ಪ್ರಸವಪೂರ್ವದಲ್ಲಿಯೇ ಅಂದರೆ ತಾಯಿ ಗರ್ಭವತಿ ಇರುವಾಗಲೇ ಸಂಸ್ಕಾರ ನೀಡುವ ಏಕೈಕ ಧರ್ಮ ಯಾವುದಾದರೂ ಇದ್ದರೆ ಅದು ವೀರಶೈವ ಧರ್ಮವಾಗಿದ್ದು, ಜಗತ್ತಿಗೆ ಒಳಿತಾಗುವ ನಿಟ್ಟಿನಲ್ಲಿ ಮಾನವ ಕಲ್ಯಾಣದ ಗುರಿಯನ್ನು ಹೊಂದಿದ ಮತ್ತು ಹೆಣ್ಣು-ಗಂಡು, ಜಾತಿ-ಮತ ಭೇದಭಾವವನ್ನು ಎಣಿಸದ ಸರ್ವರಲ್ಲೂ ಸಮಾನತೆಯನ್ನು ಕಾಣುವ, ಕಿಂಕರನನ್ನು ಶಂಕರನನ್ನಾಗಿಸುವ ಶಕ್ತಿ ವೀರಶೈವ ಧರ್ಮದಲ್ಲಿದೆ ಎಂದರು.
ಅಂಗದ ಮೇಲೆ ಲಿಂಗಧಾರಣೆ, ಹಣೆಯ ಮೇಲೆ ವಿಭೂತಿ ಧಾರಣೆ ಮಾಡಿದವರೆಲ್ಲ ಲಿಂಗಾಯತರು ಎನಿಸಿಕೊಳ್ಳಲು ಸಾಧ್ಯವಿಲ್ಲ ಅವರು ಲಿಂಗಪೂಜಾನಿಷ್ಟರಾಗಿ, ಷಟ್‌ಸ್ಥಲಗಳನ್ನು ಅರಿತು ಅಷ್ಟಾವರಣಗಳನ್ನು ಪಾಲಿಸಿ ಕಾಯಾ, ವಾಚಾ, ಮನಸಾ ಧರ್ಮಾಚರಣೆ ಮಾಡಿದಾಗ ಮಾತ್ರ ನಿಜವಾದ ವೀರಶೈವ ಲಿಂಗಾಯತ ಧರ್ಮವಂತರು ಎನಿಸಿಕೊಳ್ಳಲು ಸಾಧ್ಯ ಎಂದು ಹೇಳಿದ ಅವರು ಕಲಕೇರಿಯ ಗುರುಮರುಳಾರಾಧ್ಯರ ಹಿರೇಮಠಕ್ಕೆ ಶತಶತಮಾನಗಳ ಇತಿಹಾಸವಿದ್ದು ಮಹಾದಾಸೋಹಿ ಕಲಬುರ್ಗಿಯ ಶರಣಬಸಪ್ಪನಿಗೆ, ಕಡಕೋಳದ ಮಡಿವಾಳಪ್ಪನಿಗೆ ದೀಕ್ಷೆ ಕೊಟ್ಟು ಸಮಾನತೆ ಸಾರಿದ, ಮಾನವ ಕಲ್ಯಾಣಗೈದ ಕೀರ್ತಿ ಕಲಕೇರಿ ಹಿರೇಮಠದ ಗುರುಪರಂಪರೆಗೆ ಸಲ್ಲುತ್ತದೆ ಎಂದರು.
ಕಲಕೇರಿ ಹಿರೇಮಠದ ಸಿದ್ದರಾಮ ಶಿವಾಚಾರ್ಯರು, ವೀರಗೋಟದ ಅಡವಿಲಿಂಗ ಮಹಾರಾಜರು, ಗುಳಬಾಳ ರಾಮಲಿಂಗೇಶ್ವರಮಠದ ಮರಿಹುಚ್ಚೇಶ್ವರ ಶ್ರೀಗಳು, ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಾಮನಗೌಡ ವಣಕ್ಯಾಳ, ಶಾಂತಗೌಡ ಬಿ. ಪಾಟೀಲ ಮಾತನಾಡಿದರು.
ಇದೇ ವೇಳೆ ಉಜ್ಜಯಿನಿ ಪೀಠದ ಜಾತ್ರಾ ಮಹೋತ್ಸವದ ವಾಲ್‌ಪೋಸ್ಟರ್‌ನ್ನು ಪೂಜ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಸುಮಾರು ೨೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕಲಕೇರಿ ಶ್ರೀಮಠದೆ ಪರವಾಗಿ “ಶ್ರೀ ಗುರುಮರುಳಾರಾಧ್ಯ ಸಿರಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಾನಪದ ಲೋಕದ ಹಿರಿಯ ಕಲಾವಿದ ಗುರುರಾಜ ಹೊಸಕೋಟಿ ಮತ್ತು ಅವರ ತಂಡದವರಿಂದ ಜಾನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಶುಕ್ರವಾರ ಉಜ್ಜಯಿನಿ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರಿಂದ ಶ್ರೀಮಠದ ನೂತನ ಮಂಗಲ ಮಂಟಪ ಲೋಕಾರ್ಪಣೆ ಮತ್ತು ಗುರುಮರುಳಾರಾಧ್ಯರ ಅಮೃತಶಿಲಾಮೂರ್ತಿ ಪ್ರತಿಷ್ಠಾಪನೆ ನೆರವೇರಿತು ನಂತರ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯ ಚೇರಪರ್ಸನ್ ಆಗಿರುವ ಡಾ.ದಾಕ್ಷಾಯಿಣಿ ಎಸ್.ಅಪ್ಪ ಅವರ ನೇತೃತ್ವದಲ್ಲಿ ೧೦೦೮ ಮುತೈದೆಯರಿಗೆ ಉಡಿತುಂಬುವ ಕಾರ್ಯ ನಡೆಯಿತು ಮತ್ತು ಶ್ರೀಮಠದಲ್ಲಿ ಭಕ್ತರಿಗೆ ಏರ್ಪಡಿಸಿರುವ ಅನ್ನದಾಸೋಹದಲ್ಲಿ ಪ್ರಸಾದ ಸೇವಿಸಿ ಭಕ್ತರು ಪುನೀತಭಾವ ವ್ಯಕ್ತಪಡಿಸಿದರು.
ಜಳಕೋಟದ ಶಿವಾನಂದ ಶ್ರೀಗಳು, ಗದ್ದುಗೆಮಠದ ಗುರುಮಡಿವಾಳೆಶ್ವರ ಶ್ರೀಗಳು, ಹಲಕರ್ಟಿ ಹಿರೇಮಠದ ಅಭಿನವ ಮುನೀಂದ್ರ ಶ್ರೀಗಳು, ನಾವದಗಿ ಬೃಹನ್ಮಠದ ರಾಜಗುರು ರಾಜೇಂದ್ರ ಒಡೆಯರ್ ಶ್ರೀಗಳು, ವಿಹೆಚ್‌ಪಿ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ, ಸಜ್ಜಲಗುಡ್ಡ ಕಂಬಳಿಹಾಳದ ದೊಡ್ಡಬಸವಾಚಾರ್ಯ ತಾತನವರು, ರಾಷ್ಟ್ರೀಯ ಬೇಡಜಂಗಮ ಸಮಾಜದ ಗೌರವಾಧ್ಯಕ್ಷ ಚಬನೂರ ಹಿರೇಮಠದ ರಾಮಲಿಂಗಯ್ಯ ಸ್ವಾಮಿಗಳು, ನೀಲೂರ ಹಿರೇಮಠದ ಶರಣಯ್ಯ ಸ್ವಾಮಿಗಳು, ಬಳೂಟಗಿ ಹಿರೇಮಠದ ಸಿದ್ಧೇಶ್ವರ ಶಾಸ್ತ್ರಿಗಳು, ಗವಾಯಿಗಳಾದ ಸಂಗಮೇಶ ನೀಲಾ ಮತ್ತು ಮಹಾಂತೇಶ ಕಾಳಗಿ ಸೇರಿದಂತೆ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೊಡಗಿ, ಸಂಗನಗೌಡ ಬಿರಾದಾರ, ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಚೇರಮನ್ ಶಿವಶರಣ ಎಮ್.ಸಜ್ಜನ, ಎಬಿಡಿ ಫೌಂಡೇಶನ್‌ನ ಸಂತೋಷ ದೊಡಮನಿ, ಪ್ರಭುಗೌಡ ಬಿರಾದಾರ ಅಸ್ಕಿ, ಸಿದ್ದು ಬುಳ್ಳಾ, ವೀರೇಶ ನಾಡಗೌಡ್ರು, ಜಯಶ್ರೀ ಬೆಣ್ಣಿ, ಸಾವಿತ್ರಿ ಡೋಣಿಯವರ ಸೇರಿದಂತೆ ಇತರರು ಇದ್ದರು.

