ಸಂತೋಷ್ ರಾವ್ ಪೆರ್ಮುಡ (ವ್ಯಕ್ತಿತ್ವ ವಿಕಸನ ತರಬೇತುದಾರರು)ಪೆರ್ಮುಡ ಮನೆ, ಪಟ್ರಮೆ ಗ್ರಾಮ ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦
ಇಡೀ ವಿಶ್ವವೇ ಕೊರೋನಾ ಮಹಾಮಾರಿಗೆ ತತ್ತರಿಸಿ ಈಗಷ್ಟೇ ಈ ಜಾಡ್ಯದಿಂದ ನಿಧಾನವಾಗಿ ಹೊರಗೆ ಬರುತ್ತಿದೆ. ಇಂದು ಜನರ ಜೀವನ ಶೈಲಿಯಲ್ಲಿ ಬಹಳಷ್ಟು ಕೊರೋನಾ ಕಾರಣದಿಂದ ಬದಲಾವಣೆಗಳಾಗಿದ್ದು, ಇದುವರೆಗೂ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ರಾಜಾರೋಷವಾಗಿ ಅಲೆದಾಡುತ್ತಿದ್ದ ಮಂದಿ ಇಂದು ಮನೆಯಿಂದ ಹೊರಗೆ ಕಾಲಿಡುವ ಮೊದಲು ಹಲವು ಬಾರಿ ಯೋಚಿಸುವಂತೆ ಆಗಿದೆ. ಮನೆಯೊಳಗೆ ಕುಳಿತು ಉಂಟಾಗುವ ಏಕತಾನತೆಯನ್ನು ಕಳೆಯಲು ಈ ಎಲ್ಲಾ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬಹುದು.
ವಿವಿಧ ಜರ್ನಲ್ ಹಾಗೂ ಬ್ಲಾಗ್‌ಗಳನ್ನು ಪ್ರಾರಂಭಿಸಬಹುದು:
ನಿಮಗೆ ಬರವಣಿಗೆಯ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ನಿಮ್ಮ ಜೀವನದ ಸವಿನೆನಪುಗಳು, ಅಜ್ಜಿ ಹೇಳಿದ ಹಳೆಯ ಕಥೆಗಳು ಮತ್ತು ವಿಶೇಷ ಸನ್ನಿವೇಶಗಳು, ವಿಶೇಷ ಸಾಧನೆಗಳು, ಬಾಲ್ಯದ ಅನುಭವಗಳು ಮತ್ತು ರೋಚಕ ಸಂದರ್ಭಗಳನ್ನು ಬರೆದು ಅವುಗಳನ್ನು ನಿಮ್ಮದೇ ಆದ ಜರ್ನಲ್ ಯಾ ಬ್ಲಾಗ್‌ಗಳಲ್ಲಿ ಆನ್‌ಲೈನ್ ಮೂಲಕ ಮತ್ತು ಕೂ ಅಪ್ಲಿಕೇಶನ್ ಮೂಲಕ ಸಂಚಿಕೆಗಳಂತೆ ಗೆಳೆಯರೊಂದಿಗೆ ಹಂಚಿಕೊಳ್ಳಬಹುದು.
ಗೊತ್ತಿರುವ ವಿಚಾರಧಾರೆಗಳನ್ನು ಹಂಚಿಕೊಳ್ಳಿ:
ಜೀವನದ ವಿವಿಧ ಹಂತಗಳಲ್ಲಿ ನೀವು ಕಲಿತಿರುವ, ಅನುಭವಿಸಿರುವ ಯಾ ತಿಳಿದುಕೊಂಡಿರುವ ಕೆಲವೊಂದು ಧನಾತ್ಮಕ, ಋಣಾತ್ಮಕ ಯಾ ಅಧ್ಯಯನಾತ್ಮಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅವುಗಳ ಕುರಿತು ವಿಮರ್ಷೆಯನ್ನೂ ಮಾಡಬಹುದು.
ಸ್ನೇಹಿತರೊಂದಿಗೆ ವೀಡಿಯೋ ಸಲ್ಲಾಪಗಳು:
ಇಂದಿನ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಪ್ರತಿಲಿಪಿ, ವಾಟ್ಸಾಪ್, ಟೆಲಿಗ್ರಾಮ್ ಮತ್ತು ಇನ್ಸ್ಟಾಗ್ರಾಮ್‌ಗಳಲ್ಲಿ ವೀಡಿಯೋ ಕರೆಯ ಆಯ್ಕೆಗಳು ಅತ್ಯಂತ ಜನಪ್ರಿಯವಾಗಿದ್ದು, ಗೆಳೆಯ ಗೆಳತಿಯರೊಂದಿಗೆ ವೀಡಿಯೋ ಮೂಲಕ ಸಚಿತ್ರ ಚರ್ಚೆಗಳು, ಸ್ಥಳ ಮತ್ತು ವಸ್ತುಗಳ ಪರಿಚಯ ಮತ್ತು ಸಲ್ಲಾಪಗಳನ್ನು ನಡೆಸುವ ಮೂಲಕ ಹೊಸ ವಿಚಾರಗಳನ್ನು ಕಲಿಯುವ ಯಾ ತೀಳಿಸುವ ಕೆಲಸವನ್ನು ಮಾಡಬಹುದು.
ಝೂಮ್ ಅಪ್ಲಿಕೇಷನ್ ಮೂಲಕ ಆನ್‌ಲೈನ್ ತರಬೇತಿಗಳಲ್ಲಿ ಭಾಗವಹಿಸಿ:
ಇಂದಿನ ಆರೋಗ್ರ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ಎಲ್ಲಾ ಸಣ್ಣ, ಮಧ್ಯಮ ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿವೆ. ಎಲ್ಲರೂ ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಇರುವುದರಿಂದ ಕೆಲವೊಂದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ತರಬೇತುದಾರರು ಝೂಮ್ ಅಪ್ಲಿಕೇಶನ್ ಮೂಲಕ ಆನ್‌ಲೈನ್ ತರಬೇತಿಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ತರಬೇತಿ ಐಡಿ ಮತ್ತು ಪಾಸ್‌ವರ್ಡ್ಗಳನ್ನು ತರಬೇತಿ ಆಯೋಜಕರಿಂದ ಪಡೆದುಕೊಂಡು ಮನೆಯಲ್ಲೇ ಕುಳಿತು ತರಬೇತಿಗಳನ್ನು ಪಡೆದುಕೊಳ್ಳಬಹುದು ಹಾಗೂ ನೀವೊಬ್ಬ ಉತ್ತಮ ತರಬೇತುದಾರರಾಗಿದ್ದಲ್ಲಿ ವಿವಿಧ ತರಬೇತಿಗಳನ್ನೂ ನೀವು ಹಮ್ಮಿಕೊಳ್ಳಬಹುದು.
ಕೊಠಡಿಗಳ ಅಲಂಕಾರದಲ್ಲಿ ತೊಡಗಿಸಿಕೊಳ್ಳಿ:
ದಿನನಿತ್ಯದ ಕೆಲಸದ ಒತ್ತಡದಲ್ಲಿ ಮನೆಯನ್ನು ಅಲಂಕರಿಸುವುದನ್ನೇ ನೀವು ಮರೆತಿರಬಹುದು. ನಿಮಗೆ ಲಭ್ಯವಿರುವ ಅಲ್ಪ ಸಮಯವನ್ನು ಬಳಸಿಕೊಂಡು ಮನೆಯ ಮತ್ತು ಕೊಠಡಿಗಳ ಅಲಂಕಾರವನ್ನು ವಿನೂತನವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ಸಮಯ ಸದುಪಯೋಗವಾಗುವುದಲ್ಲದೇ ಕೊಠಡಿಗೊಂದು ಹೊಸತಾದ ಸೌಂದರ್ಯವೂ ಬರುತ್ತದೆ.
ಹೊಸ ಹೊಸ ಭಾಷೆಗಳನ್ನು ಕಲಿಯಿರಿ:
ಎಲ್ಲರಿಗೂ ಹೊಸ ಹೊಸ ಭಾಷೆಯನ್ನು ಕಲಿಯಬೇಕು, ಬೇರೆ ಬೇರೆ ಭಾಷೆಯಲ್ಲಿ ಪಾಂಡಿತ್ಯವನ್ನು ಪಡೆದುಕೊಂಡು ವಿಭಿನ್ನ ಭಾಷೆಯಲ್ಲಿ ಮಾತನಾಡಬೇಕೆಂಬ ಆಸೆಯಿರುವುದು ಸಹಜ. ಹಾಗಾಗಿ ಇಂದು ಗೂಗಲ್ ಮೂಲಕವೇ ಹಲವು ಭಾಷೆಗಳನ್ನು ಕಲಿಯಲು ಸಾಧ್ಯವಿದೆ ಮತ್ತು ಗೂಗಲ್ ಪ್ಲೇಯಲ್ಲಿ ಇದಕ್ಕೆ ಸಬಂಧಿಸಿದ ಹಲವಾರು ಅಪ್ಲಿಕೇಶನ್‌ಗಳು ಲಭ್ಯವಿದ್ದು, ಅದರ ಮೂಲಕ ದೇಶ ವಿದೇಶಗಳ ವಿವಿಧ ಭಾಷೆಗಳನ್ನು ಕಲಿಯಬಹುದು.
ಚಿತ್ರಕಲೆಗಳಲ್ಲಿ ತೊಡಗಬಹುದು:
ಸಮಯದ ಸದುಪಯೋಗಕ್ಕಾಗಿ ಚಿತ್ರಕಲೆಯೂ ಒಂದು ಬಹು ಮುಖ್ಯವಾದ ಹಾಗೂ ವ್ಯಕ್ತಿಯಲ್ಲಿರುವ ಸೃಜನಾತ್ಮಕತೆಯನ್ನು ಹೊರತರುವ ಹವ್ಯಾಸವಾಗಿದೆ. ಪೆನ್ಸಿಲ್ ಶೆಡಿಂಗ್, ವಾಟರ್ ಪೈಂಟಿಂಗ್, ಆಯಿಲ್ ಪೈಂಟಿಂಗ್, ಲ್ಯಾಂಡ್‌ಸ್ಕೇಪಿಂಗ್‌ಗಳನ್ನು ಮನೆಯಲ್ಲಿಯೇ ಕುಳಿತು ಕಲಿಯಬಹುದಾಗಿದೆ. ಈ ಪೈಂಟಿಂಗ್‌ಗಳು ನಮ್ಮ ಅಭಿರುಚಿಯನ್ನು ಬಿಂಬಿಸಬಲ್ಲವು ಮಾತ್ರವಲ್ಲ ಆದಾಯವನ್ನೂ ತರಬಲ್ಲವು.
ಹಸ್ತಾಕ್ಷರವನ್ನು ಸುಂದರಗೊಳಿಸುವ ಅಭ್ಯಾಸ ಮಾಡಿರಿ:
ಎಲ್ಲರಿಗೂ ತಮ್ಮ ತಮ್ಮ ಹಸ್ತಾಕ್ಷರವು ಅತ್ಯಂತ ಸುಂದರವಾಗಿರಬೇಕೆಂಬ ಆಸೆಯಿರುತ್ತದೆ. ಅದಕ್ಕಾಗಿ ಮನೆಯಲ್ಲಿ ಖಾಲಿ ಕುಳಿತಿರುವ ಸಮಯದಲ್ಲಿ ತಮ್ಮ ಹಸ್ತಾಕ್ಷರವನ್ನು (ಊಚಿಟಿಜತಿಡಿiಣiಟಿg) ಸುಂದರಗೊಳಿಸುವ ಸಲುವಾಗಿ ಅಭ್ಯಾಸವನ್ನು ಮಾಡಬಹುದು. ಇದರಿಂದ ಅಕ್ಷರವು ಸುಂದರವಾಗುವುದಲ್ಲದೇ ಬರವಣಿಗೆಯ ಕಲೆಯೂ ಸಿದ್ಧಿಸಿದಂತಾಗುತ್ತದೆ.
ವಿವಿಧ ಅಪ್ಲಿಕೇಷನ್ ಮೂಲಕ ಸಂಗೀತಾಭ್ಯಾಸ ಮಾಡಿರಿ:
ಸಂಗೀತದಲ್ಲಿ ಆಸಕ್ತಿಯಿರುವವರಿಗೆ ಇಂದು ಪ್ಲೇಸ್ಟೋರ್‌ನಲ್ಲಿ ಹಲವಾರು ಅಪ್ಲಿಕೇಶನ್‌ಗಳು ಲಭ್ಯವಿದ್ದು, (ಸ್ಟಾರ್‌ಮೇಕರ್, ಸ್ಮೂö್ಯಲ್) ಅವುಗಳ ಮೂಲಕ ಅಲ್ಲಿ ಲಭ್ಯವಿರುವ ಟ್ರ‍್ಯಾಕ್‌ಗಳಿಗೆ ಸೋಲೋ, ಡ್ಯುಯೆಟ್ ಹಾಡುಗಳನ್ನು ಮತ್ತು ಇತರ ಉತ್ತಮ ಹಾಡುಗಾರರ ಜತೆಗೂ ಹಾಡಿ ಅಭ್ಯಾಸ ಮಾಡಲು ಅವಕಾಶಗಳಿವೆ.
ಉತ್ತಮ ಸಂದೇಶವಿರುವ ಚಲನಚಿತ್ರಗಳನ್ನು ನೋಡಿರಿ:
ಚಲನಚಿತ್ರಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಚಲನಚಿತ್ರಗಳನ್ನು ನೋಡುವುದೇನೋ ಸರಿ ಆದರೆ ಉತ್ತಮ ಸಂದೇಶವಿರುವ ಹಾಗೂ ಸಾಮಾಜಿಕ ಕಳಕಳಿಯಿರುವ ಚಲನಚಿತ್ರಗಳನ್ನು ಬಿಡುವಿನ ಅವಧಿಯಲ್ಲಿ ನೋಡಿ ಅವುಗಳನ್ನು ಮನನ ಮಾಡುವುದರೊಂದಿಗೆ ವಿಮರ್ಷಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಸರಳವಾದ ವೈಜ್ಞಾನಿಕ ಪ್ರಯೋಗಗಳನ್ನು ಮಾಡಿರಿ:
ಶಾಲಾ ದಿನಗಳಲ್ಲಿ ಕಲಿತಿರುವ ಕೆಲವೊಂದು ಸರಳವಾದ ಮತ್ತು ಸುಲಭವಾದ ವೈಜ್ಞಾನಿಕ ಪ್ರಯೋಗಗಳನ್ನು (ಸೂರ್ಯ, ಚಂದ್ರ ಗ್ರಹಣ, ಹಸಿರು ಮನೆ ಪರಿಣಾಮ, ದೂರದರ್ಶಕ ತಯಾರಿ, ಬೀಜ ಮೊಳಕೆಯೊಡೆಯುವ ಹಂತಗಳು, ಸಸ್ಯಗಳ ಉಸಿರಾಟ ಪ್ರಕ್ರಿಯೆ, ಸೌರಫಲಕದಿಂದ ಬೆಂಕಿಯುರಿಸುವಿಕೆ ಇತ್ಯಾದಿ) ಮನೆಯಲ್ಲಿಯೇ ಮಾಡಿ ಅದರ ಪರಿಣಾಮಗಳನ್ನು ಅಭ್ಯಸಿಸಬಹುದು.
ಆನ್‌ಲೈನ್ ಪದಬಂಧ, ಸುಡೊಕುಗಳನ್ನು ಬಿಡಿಸಿರಿ:
ಮೆದುಳಿಗೆ ಕೆಲಸವನ್ನು ನೀಡುವಂತಹ ಹಲವಾರು ಚಟುವಟಿಕೆಗಳಾದ ಪದಬಂಧ, ಸುಡೊಕು, ಗಾದೆ ಬಿಡಿಸುವಿಕೆ ಇತ್ಯಾದಿಗಳು ಇಂದು ಆನ್‌ಲೈನ್‌ನಲ್ಲೇ (ಜಿಲೇಬಿ ಅಪ್ಲಿಕೇಶನ್) ಲಭ್ಯವಿದ್ದು ಅವುಗಳನ್ನು ಬಿಡಿಸುವ ಮೂಲಕ ನಮ್ಮ ಜ್ಞಾನವನ್ನು ಮತ್ತು ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು,
ಅಧ್ಯಯನಾತ್ಮಕ ಪುಸ್ತಕಗಳನ್ನು ಓದಿರಿ:
ಮನೆಯಲ್ಲಿಯೇ ಕುಳಿತು ಉಂಟಾಗುವ ಬೋರ್ ಕಳೆಯಲು ಪುಸ್ತಕಗಳು ಅತ್ಯುತ್ತಮ ಗೆಳೆಯರಾಗಬಲ್ಲವು. ಇಂದು ಲಕ್ಷಗಟ್ಟಲೆ ಪುಸ್ತಕಗಳು ಆನ್‌ಲೈನ್ ಮೂಲಕವೇ ಲಭ್ಯವಿದ್ದು, ಉಚಿತವಾಗಿಯೂ ಓದಬಹುದು. ಹಲವು ಭಾಷೆಯ ಕಥೆ, ಕಾದಂಬರಿ ಮತ್ತು ಧಾರಾವಾಹಿಗಳನ್ನು ಓದಿ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದಂತೆ ನಮ್ಮ ಯೋಚನಾ ಲಹರಿಯೂ ಧನಾತ್ಮಕವಾಗಿ ಬದಲಾಗುತ್ತಾ ಹೋಗುತ್ತದೆ.
ಛಾಯಾಗ್ರಹಣದ ಕೈಚಳಕವನ್ನು ಕಲಿಯಿರಿ:
ಛಾಯಾಚಿತ್ರಗ್ರಹಣವು ಒಂದು ರೀತಿಯಲ್ಲಿ ವಿಭಿನ್ನ ಕಲೆಯಾಗಿದ್ದು, ಇದನ್ನು ಎಲ್ಲರೂ ಪ್ರೀತಿಸುತ್ತಾರೆ. ಉತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು ತೆಗೆಯಲು ತಕ್ಕಮಟ್ಟಿನ ಜ್ಞಾನ, ಕೌಶಲ ಮತ್ತು ಅನುಭವವೂ ಬೇಕಾಗುತ್ತದೆ. ಛಾಯಾಚಿತ್ರಗ್ರಹಣವು ವಸ್ತು ಮತ್ತು ಬೆಳಕಿನ ನಡುವಿನ ಹೊಂದಾಣಿಕೆಯಾಗಿದೆ. ಮನೆಯೊಳಗಡೆಯೇ ಇರುವ ಕೆಲವೊಂದು ವಸ್ತುಗಳನ್ನು ವಿಭಿನ್ನ ಕೋನಗಳಲ್ಲಿ ಮತ್ತು ವಿಭಿನ್ನ ಬೆಳಕಿನ ಪರಿಣಾಮದಲ್ಲಿ ಕ್ಲಿಕ್ಕಿಸಿ ಅವುಗಳ ಪರಿಣಾಮವನ್ನು ಪರೀಕ್ಷಿಸಿ ಅಭ್ಯಾಸ ಮಾಡಬಹುದು.
ತೋಟಗಾರಿಕೆ ಮತ್ತು ತಾರಸಿ ಕೃಷಿಯಲ್ಲಿ ತೊಡಗಿರಿ:
ಪ್ರಕೃತಿಯನ್ನು ಪ್ರೀತಿಸುವವರಿಗೆ ತೋಟಗಾರಿಕೆಯು ಹೆಚ್ಚು ಖುಷಿಯನ್ನು ನೀಡಬಲ್ಲುದು. ಜಮೀನು ಇರುವವರು ಮನೆಯ ಸುತ್ತ ಮುತ್ತ ಹೂವಿನ ಗಿಡಗಳು ಮತ್ತು ತರಕಾರಿ ಕೃಷಿಯನ್ನು ಮಾಡಿ ಗಿಡಗಳೊಂದಿಗಿನ ಒಡನಾಟದಿಂದ ಖುಷಿಯನ್ನು ಪಡಬಹುದು. ಜಮೀನಿಲ್ಲದವರು ತಮ್ಮ ತಾರಸಿಯಲ್ಲಿ ಅಥವಾ ಕಂಪೌಂಡ್‌ಗಳಲ್ಲಿ, ವರ್ಟಿಕಲ್ ಗಾರ್ಡನ್, ಕುಂಡಗಳಲ್ಲಿ ಹೂವು ಮತ್ತು ತರಕಾರಿಯನ್ನು ಬೆಳೆಸಿ ಮನೆಯ ಖರ್ಚನ್ನು ಕಡಿಮೆ ಮಾಡಿಕೊಳ್ಳುವುದರೊಂದಿಗೆ ಆತ್ಮಸಂತೃಪ್ತಿಯನ್ನು ಪಡೆಯಬಹುದು.
ಆತ್ಮರಕ್ಷಣೆಯ ಕಲೆಗಳನ್ನು ಅಭ್ಯಾಸ ಮಾಡಿರಿ:
ಜೀವನದಲ್ಲಿ ಸ್ವಯಂ ಆತ್ಮರಕ್ಷಣೆಯು ಅತ್ಯಂತ ಪ್ರಮುಖ ವಿಚಾರವಾಗಿದೆ. ಜೀವಕ್ಕೆ ಅಪಾಯ ಬರುವ ಸಂದರ್ಭದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಕೆಲವೊಂದು ಕಲೆಗಳನ್ನು ಕಲಿತಿರಬೇಕಾದ್ದು ಅನಿವಾರ್ಯವಾಗಿದೆ. ಅಂತಹ ಕಲೆಗಳಾದ ಕರಾಟೆ, ಜುಡೋ, ಕಳರಿಪಯಟ್ಟ್, ಮಾರ್ಷಲ್ ಆರ್ಟ್ ಇತ್ಯಾದಿಗಳನ್ನು ಮನೆಯಲ್ಲಿಯೇ ಇಂಟರ್‌ನೆಟ್, ಆನ್‌ಲೈನ್, ಝೂಮ್ ಆ್ಯಪ್ ಮೂಲಕವೂ ಕಲಿಯಲು ಇದು ಸಕಾಲ.
ಹೊಲಿಗೆ ಮತ್ತು ಕಸೂತಿಯನ್ನು ಅಭ್ಯಾಸ ಮಾಡಿರಿ:
ಬಟ್ಟೆಗಳ ಮೌಲ್ಯವರ್ಧನೆಗೆ ಇಂದು ಹೆಚ್ಚಿನ ಅವಕಾಶವಿದ್ದು, ಹೆಚ್ಚಿನ ಆದಾಯವನ್ನೂ ಕೊಡಬಲ್ಲುದು. ಮನೆಯಲ್ಲೇ ಕುಳಿತು ಹೊಸ ಹೊಸ ಶೈಲಿಯ ಹೊಲಿಗೆ ಮತ್ತು ಬಟ್ಟೆಯ ಮೌಲ್ಯವನ್ನು ಹೆಚ್ಚಿಸುವ ಕಸೂತಿಯನ್ನು ಮನೆಯಲ್ಲೇ ಕುಳಿತು ಅಭ್ಯಾಸ ಮಾಡಿದಲ್ಲಿ ಮುಂದಕ್ಕೆ ಆದಾಯವನ್ನೂ ಗಳಿಸುವಲ್ಲಿ ಸಹಾಯಕವಾಗಬಹುದು.
ಹೊಸ ರುಚಿಯನ್ನು ಕಲಿಯಿರಿ:
ಮನೆಯೊಳಗಡೆಯೇ ಕುಳಿತು ವಿವಿಧ ಶೈಲಿಯ ಅಡುಗೆಯನ್ನು ಯುಟ್ಯೂಬ್ ಮತ್ತು ವಿವಿಧ ಚಾನೆಲ್‌ಗಳಲ್ಲಿ ನೋಡಿಕೊಂಡು ಅಭ್ಯಾಸವನ್ನು ಮಾಡಬಹುದು. ಇದರಿಂದಾಗಿ ನಮ್ಮ ಇಷ್ಟದ ಸಾಂಪ್ರದಾಯಿಕ, ಹಳ್ಳಿಯ ಶೈಲಿಯ ಮತ್ತು ಆರೋಗ್ಯವರ್ಧಕ ಅಡುಗೆಯನ್ನು ಮಾಡಿ ಅವುಗಳ ಸವಿಯನ್ನು ಸವಿಯಬಹುದು ಮತ್ತು ಇತರರಿಗೆ ಕಲಿಸಿ ಅವುಗಳನ್ನು ಯುಟ್ಯೂಬ್ ಚಾನೆಲ್ ಮತ್ತು ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು.
ಆರೋಗ್ಯ ವೃದ್ಧಿಸುವ ಧ್ಯಾನ ಮತ್ತು ವ್ಯಾಯಾಮಗಳನ್ನು ಮಾಡಿರಿ:
ನಮ್ಮ ಆರೋಗ್ಯವನ್ನು ಹೆಚ್ಚಿಸುವಲ್ಲಿ ಕಠಿಣ ಪರಿಶ್ರಮದ ಕೆಲಸವೂ ಬಹಳ ಮುಖ್ಯ. ಮನೆಯಲ್ಲಿಯೇ ಇರಬೇಕಾದ ಈ ಸಂದರ್ಭದಲ್ಲಿ ಧ್ಯಾನ, ಸೂರ್ಯನಮಸ್ಕಾರ ಮತ್ತು ವಿವಿಧ ವ್ಯಾಯಾಮಗಳಲ್ಲಿ ತೊಡಗಿಕೊಂಡು ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು.
ಲೂಡೋ ಮತ್ತು ಕೇರಂ ಆಟಗಳಲ್ಲಿ ತೊಡಗಿಸಿಕೊಳ್ಳಿ:
ಮನೆಯೊಳಗಡೆಯೇ ಕುಳಿತು ಆಡಬಹುದಾದ ಸಾಂಪ್ರದಾಯಿಕ ಹಾಗೂ ಆಧುನಿಕ ಆಟಗಳಾದ ಚೆನ್ನೆಮಣೆ, ಕಲ್ಲಾಟ, ಚುಕ್ಕಿ ಆಟ, ಕಳ್ಳ-ಪೋಲೀಸ್, ಲೂಡೋ, ಚೆಸ್, ಹಾವು-ಏಣಿ ಮತ್ತು ಕೇರಂ ಆಟಗಳನ್ನು ಆಡುತ್ತಾ ಮತ್ತು ಕಲಿಯುತ್ತಾ ಸಮಯವನ್ನು ಸದುಪಯೋಗ ಮಾಡಿಕೊಳ್ಳಬಹುದು.
ಮನೆಯ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳಿ:
ಮನೆಯಲ್ಲಿಯೇ ಇರುವ ಈ ಸಂದರ್ಭದಲ್ಲಿ ಮನೆಯನ್ನು, ಬೀರುಗಳನ್ನು. ಬಟ್ಟೆಗಳನ್ನು ಮತ್ತು ವಿದ್ಯುನ್ಮಾನ ಉಪಕರಣಗಳನ್ನು (ಲೈಟು, ಟಿ.ವಿ, ಫ್ಯಾನ್, ಫ್ರಿಜ್, ವಾಶಿಂಗ್ ಮೆಶಿನ್) ಸ್ವಚ್ಛಗೊಳಿಸಬಹುದು. ಇದರಿಂದ ಮನಗೆ ಅಂದವೂ ದೊರೆಯುವುದಲ್ಲದೇ ಸ್ವಚ್ಛವಾಗಿಯೂ ಕಾಣಿಸುವುದು.
ಗೆಳೆಯರೊಂದಿಗೆ ಆನ್‌ಲೈನ್ ಆಟವಾಡಿ:
ಇಂದು ಆನ್‌ಲೈನ್ ಆಟಗಳಿಗಾಗಿ ಹತ್ತು ಹಲವು ಅಪ್ಲಿಕೇಶನ್‌ಗಳು ಪ್ಲೇಸ್ಟೋರಲ್ಲಿ ಲಭ್ಯವಿದ್ದು, ಎಲ್ಲೋ ಮನೆಯಲ್ಲಿ ಕುಳಿತಿರುವ ಗೆಳೆಯರೊಂದಿಗೆ ಆನ್‌ಲೈನ್ ಮೂಲಕವೇ ಆಟಗಳನ್ನು ಆಡಲು ಅವಕಾಶವಿದೆ. ಇದನ್ನು ಸರಿಯಾಗಿ ಬಳಸಿಕೊಂಡಲ್ಲಿ ಗೆಳೆಯರೊಂದಿಗೆ ಜ್ಞಾನ ಮತ್ತು ಕೌಶಲವನ್ನೂ ಹಂಚಿಕೊಳ್ಳಲು ಸಾಧ್ಯವಿದೆ. ಆದರೆ ಹಣಕ್ಕಾಗಿ ಜೂಜಾಡಬಾರದು ಮತ್ತು ಇದೇ ಗೀಳೂ ಆಗಬಾರದು.
ಕ್ರಾಫ್ಟ್:
ಇಂದು ವಿವಿಧ ರೀತಿಯ ಹ್ಯಾಂಡ್ ಎಂಬ್ರಾಯಿಡರಿ, ಪೇಪರ್ ಕಲೆಗಳು, ವಿವಿಧ ರೀತಿಯ ಹೆಣಿಕೆ, ಕಸದಿಂದ ರಸ ಎನ್ನುವ ವಿವಿಧ ಮಾದರಿಗಳನ್ನು ಯು ಟ್ಯೂಬ್ ಮತ್ತು ಹಲವು ಸಾಮಾಜಿಕ ಜಾಲತಾಣಗಳ ಮೂಲಕ ನೋಡಿಯೇ ಕಲಿಯಲು ಅವಕಾಶಗಳಿವೆ. ಇದರಿಂದ ಮನೆಯಲ್ಲಿಯೇ ಕುಳಿತು ಒಂದಷ್ಟು ಹಣವನ್ನು ಗಳಿಸಲೂ ಅವಕಾಶವಿದೆ.
ಈ ರೀತಿಯಾಗಿ ಮನೆಯಲ್ಲಿಯೇ ಇರುವ ಗೃಹಣಿಯರು ಮತ್ತು ಇತರರು ತಮ್ಮ ದಿನದ ಕೆಲಸಗಳನ್ನೆಲ್ಲಾ ಮುಗಿಸಿ ಲಭಿಸುವ ಹೆಚ್ಚುವರಿ ಅವಧಿಯನ್ನು ಈ ಎಲ್ಲಾ ರೀತಿಯಿಂದ ರಚನಾತ್ಮಕವಾಗಿ ಬಳಸಿಕೊಳ್ಳಲು ಅವಕಾಶವಿದೆ. ಈ ಪೈಕಿ ಒಂದಷ್ಟು ನಮಗೆ ಹಣವನ್ನು ಗಳಿಸಲು ಅವಕಾಶವನ್ನು ನೀಡಿದರೆ ಇನ್ನೊಂದಷ್ಟು ಮೆದುಳಿಗೆ ಮೇವನ್ನು ನೀಡುವುದಲ್ಲದೇ, ಜ್ಞಾನ ಹಾಗೂ ಮನೋರಂಜನೆಯನ್ನು ನೀಡುತ್ತದೆ. ಕಲಿಕೆಗೆ ಸಾವಿಲ್ಲ ಎನ್ನುವ ಮಾತಿನಂತೆ ಎಲ್ಲ ವಯಸ್ಸಿನವರೂ ಈ ಕಲೆಗಳನ್ನು ಕಲಿತು ರೂಢಿಸಿಕೊಳ್ಳಬಹುದು.
ಲೇಖನ: ಸಂತೋಷ್ ರಾವ್ ಪೆರ್ಮುಡ
(ವ್ಯಕ್ತಿತ್ವ ವಿಕಸನ ತರಬೇತುದಾರರು)
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮
ದೂ: ೯೭೪೨೮೮೪೧೬೦

