ಎಸ್.ಬಿ.ವಿಸ್ಡಮ್ ಕರಿಯರ್ ಅಕಾಡೆಮಿಯ ಕಾರ್ಯಕ್ರಮದಲ್ಲಿಡಾ.ಅಮೃತಾನಂದ ಸ್ವಾಮೀಜಿ ಅಭಿಮತ
ವಿಜಯಪುರ: ಒಂದು ರಾಷ್ಟ್ರ ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ ಯುವಕರ ಜ್ಞಾನ ಮತ್ತು ಬಲ, ರೈತರ ಶ್ರಮ, ರಾಜಕಾರಣಿಗಳ ದೇಶಾಭಿಮಾನ ಮಹತ್ವದಾಯಕ ಎಂದು ಬಾಲಗಾಂವ ಗುರುದೇವ ಆಶ್ರಮದ ಡಾ.ಅಮೃತಾನಂದ ಮಹಾಸ್ವಾಮಿಗಳು ಹೇಳಿದರು.
ಶ್ರೀಗಳು ವಿಜಯಪುರ ನಗರದ ಪ್ರತಿಷ್ಠಿತ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಎಸ್.ಬಿ.ವಿಸ್ಡಮ್ ಕರಿಯರ್ ಅಕಾಡೆಮಿಯಲ್ಲಿ ಜರುಗಿದ “ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾರ್ಗದರ್ಶನ ಮಾಡಿದರು.
ಯುವಕರು ರಾಷ್ಟ್ರದ ಶಕ್ತಿ. ಯುವಕರಲ್ಲಿ ದೇಶಪ್ರೇಮ ಸೇವಾ ಮನೋಭಾವ ಯಾವುದೇ ಪಲಾಪೇಕ್ಷೆ ಇಲ್ಲದೆ ಅರ್ಪಣಾ ಮನೋಭಾವದಿಂದ ಬರಬೇಕು. ರಾಷ್ಟ್ರದ ಜಲಸಂಪತ್ತು ಹಾಗೂ ಪ್ರಕೃತಿ ಸಂಪತ್ತನ್ನು ಹಾಳಾಗದಂತೆ ಕಾಯುವುದು ಯುವಕರ ದೊಡ್ಡ ಜವಾಬ್ದಾರಿಯಾಗಿದೆ. ಶಿಸ್ತು ಸಮಯ ಪಾಲನೆ ಹಾಗೂ ದೇಶಪ್ರೇಮವನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ನೀಡಿದರು.
ಸಂಸ್ಥೆಯ ಗೌರವ ಅಧ್ಯಕ್ಷ ಶರಣಯ್ಯ ಎಸ್. ಭಂಡಾರಿಮಠ ಮಾತನಾಡಿ, ರಾಷ್ಟ್ರದ ಅಳಿವು ಉಳಿವು ಯುವಕರ ಕೈಯಲ್ಲಿದೆ. ನಮ್ಮ ರಾಷ್ಟ್ರದಲ್ಲಿರುವ ಯುವಕರು ದೈಹಿಕವಾಗಿ, ಮಾನಸಿಕವಾಗಿ, ಜ್ಞಾನಾತ್ಮಕವಾಗಿ ಸದೃಢರಾದರೆ ದೇಶ ಬಲಿಷ್ಠವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಯ್ಸಳ ಸಂಸ್ಥೆಯ ಅಧ್ಯಕ್ಷ ಕಾಶೀನಾಥ ಗಾಗರೆ, ಉಪನ್ಯಾಸಕರಾದ, ಅಲ್ಲಾಭಕ್ಷ ಚಟ್ಟರಕಿ, ಆನಂದ ಬನಸೋಡೆ, ಮುತ್ತು ಬಿರಾದಾರ, ಪ್ರಭುಗೌಡ ಚಿಕ್ಕನಹಳ್ಳಿ ಹಾಗೂ ವ್ಯವಸ್ಥಾಪಕರಾದ ರಮಜಾನ್ ಭಾಗವಾನ ಉಪಸ್ಥಿತರಿದ್ದರು.
ಸಂಸ್ಥೆಯ ಆಡಳಿತ ಅಧಿಕಾರಿ ಭಾಗೇಶ ಬಿ. ಮುರಡಿ ಸ್ವಾಗತಿಸಿದರು ಹಾಗೂ ಎಸ್. ಎಸ್. ತೆಲಸಂಗ ನಿರೂಪಿಸಿ, ವಂದಿಸಿದರು.

