ತಾತ ಕೊರೆಸಿದ್ದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮೊಮ್ಮಗ
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಸಮೀಪ ಜಮೀನಿನಲ್ಲಿ ಕೊರೆಸಿದ್ದ ತೆರೆದ ಕೊಳವೆ ಬಾವಿಗೆ ಎರಡು ವರ್ಷದ ಮಗು ಬಿದ್ದಿರುವ ಘಟನೆ ನಡೆದಿದೆ.
ಮಂಗಳವಾರ ಕೊಳವೆ ಬಾವಿಯನ್ನು ಕೊರೆಸಲಾಗಿತ್ತು. ಆದರೆ ನೀರು ಬರದ ಹಿನ್ನಲೆಯಲ್ಲಿ ಅದನ್ನು ಹಾಗೆ ಬಿಡಲಾಗಿತ್ತು. ಶಂಕರಪ್ಪ ಅವರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು. ಇಂದು ಆಟವಾಡಲು ಹೋಗಿದ್ದ ವೇಳೆ ಶಂಕರಪ್ಪ ಅವರ ಮೊಮ್ಮಗ ಸ್ವಾತಿಕ್ ಆಯತಪ್ಪಿ ಬೋರ್ ವೆಲ್ ಗೆ ಬಿದ್ದಿದ್ದಾನೆ. ಸಾತ್ವಿಕ್ ರಕ್ಷಣೆಗೆ ಬಿರುಸಿನ ಕಾರ್ಯಾಚರಣೆ ಆರಂಭಿಸಲಾಗಿದೆ.
ಇಂಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಈ ಕುರಿತು ಸಹಾಯಕ ಕಮಿಷನರ್ ಅಬಿದ್ ಗದ್ಯಾಲ್ ಅವರು, ಸಂಜೆ 6 ಗಂಟೆ ಸುಮಾರಿಗೆ ಬಾಲಕ ಬಿದ್ದಿದ್ದಾನೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು, ಕಂದಾಯ ಅಧಿಕಾರಿಗಳು, ಅಗ್ನಿಶಾಮಕ ಮತ್ತು ತುರ್ತು ರಕ್ಷಣಾ ಸಿಬ್ಬಂದಿಯ ತಂಡವನ್ನು ರವಾನಿಸಿದ್ದೇವೆ. ವೈದ್ಯರು ಆಮ್ಲಜನಕದ ಪೂರೈಕೆಯನ್ನೂ ಮಾಡುತ್ತಿದ್ದಾರೆ. ಇದಲ್ಲದೇ, ಈಗಾಗಲೇ ಜೆಸಿಬಿಗಳು ಸಮಾನಾಂತರವಾಗಿ ಅಗೆಯುವ ಕೆಲಸ ಆರಂಭಿಸಲಾಗಿದೆ ಎಂದರು.
ಪ್ರಾಥಮಿಕ ವರದಿಯ ಪ್ರಕಾರ, ಬಾಲಕ ಸುಮಾರು 20 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾನೆ. ಬಾಲಕನನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

