ನಾಗೂರ ಯಮನೂರೇಶ್ವರ ಜಾತ್ರೆ | ಹೊನಲುಬೆಳಕಿನ ಕಬಡ್ಡಿ ಟೂರ್ನಾಮೆಂಟ್
ಬಸವನಬಾಗೇವಾಡಿ: ಗ್ರಾಮೀಣ ಕ್ರೀಡೆಗಳ ಉಳಿವು ಮತ್ತು ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮಣ್ಣೂರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ ಮುಳವಾಡ ಹೇಳಿದರು.
ಪಟ್ಟಣದ ಸಮೀಪವಿರುವ ನಾಗೂರ ಗ್ರಾಮದ ಆರಾಧ್ಯದೈವ ಯಮನೂರೇಶ್ವರ ಜಾತ್ರೆಯಂಗವಾಗಿ ಮಂಗಳವಾರ ಸಂಜೆ ಗೆಳೆಯರ ಬಳಗವು ಹಮ್ಮಿಕೊಂಡಿದ್ದ ಹೊನಲು-ಬೆಳಕಿನ ಕಬಡ್ಡಿ ಟೂರ್ನಾಮೆಂಟ್ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮಹತ್ವ ಪಡೆಯಬೇಕಾಗಿದೆ. ಕಬಡ್ಡಿಯಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳು ಸೋಲು-ಗೆಲುವುವನ್ನು ಸರಿ ಸಮಾನವಾಗಿ ಸ್ವೀಕರಿಸಬೇಕು. ಗ್ರಾಮೀಣ ಮಟ್ಟದಲ್ಲಿ ನಡೆಯುವ ಕ್ರೀಡೆಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕೆಂದರು.
ದೇಶೀಯ ಆಟಗಳಾದ ಕಬಡ್ಡಿ, ಹಾಕಿ, ಖೋ ಖೋ, ಕುಸ್ತಿಯಂತಹ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಇಂತಹ ಕ್ರೀಡೆಗಳಲ್ಲಿ ಯುವಜನಾಂಗ ಭಾಗವಹಿಸುವಂತೆ ಪ್ರೇರಣೆ ನೀಡುವಂತಾಗಬೇಕು. ದೇಶೀಯ ಕ್ರೀಡೆಗಳಿಂದ ನಮ್ಮ ದೇಹ, ಮನಸ್ಸು ಸದೃಢವಾಗುತ್ತದೆ. ಇಂದು ಪಾಶ್ಚಿಮಾತ್ಯ ಕ್ರೀಡೆಯಾದ ಕ್ರಿಕೆಟ್ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಇದೇ ರೀತಿಯಲ್ಲಿ ನಮ್ಮ ದೇಶೀಯ ಕ್ರೀಡೆಗಳು ಜನಪ್ರಿಯತೆ ಗಳಿಸುವಂತೆ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಣ್ಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲು ಸುಬ್ಬು ಲಮಾಣಿ, ಸುನೀಲ ಹೊನ್ನುಟಗಿ, ಕುಮಾರ ನಿಡಗುಂದಿ, ಬಂದೇನವಾಜ ವಾಲೀಕಾರ, ಮುತ್ತಪ್ಪ ಮಣಗೂರ, ಮೌಲಾಲಿ ಕೊಲ್ಹಾರ, ಶ್ರೀಶೈಲ ತೆಲಗಿ, ಗುರಯ್ಯ ಶೀಕಳವಾಡಿ, ಅಯ್ಯಪ್ಪ ಕಡ್ಲಿಮಟ್ಟಿ, ದಾನಪ್ಪ ಬಾಗೇವಾಡಿ,ಉಮೇಶ ಚಲವಾದಿ, ಚನ್ನಯ್ಯ ಹಾಲ್ಯಾಳಮಠ, ಮಂಜುನಾಥ ಮುಳವಾಡ, ಗಿರಿಯಪ್ಪ ಹೆಬ್ಬಾಳ, ಮಹಾಂತೇಶ ಗೌರಾ, ಯಮನಪ್ಪ ಪೂಜಾರಿ, ಶರಣಯ್ಯ ಸ್ವಾಮಿ, ಶಿವಯ್ಯ ಶೀಕಳವಾಡಿ, ಸತ್ಯಪ್ಪ ಬಂಡಿವಡ್ಡರ, ನಿಂಗಪ್ಪ ಮಸೂತಿ, ವಿರೇಶ ಮರೋಳ, ಮಹಿಬೂಬ ವಾಲೀಕಾರ, ಏಕಾನಂದ ಪೂಜಾರಿ, ಮುತ್ತು ಪೂಜಾರಿ, ಮುತ್ತಪ್ಪ ಬಂಡಿವಡ್ಡರ, ಮಹೇಶ ಮರೋಳ ಇತರರು ಇದ್ದರು.
ವಿಜೇತ ತಂಡಗಳುಃ ಜಾತ್ರೆಯಂಗವಾಗಿ ಹಮ್ಮಿಕೊಂಡಿದ್ದ ಹೊನಲು-ಬೆಳಕಿನ ಕಬಡ್ಡಿ ಟೂರ್ನಾಮೆಂಟ್ದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ೨೫ ತಂಡಗಳು ಭಾಗವಹಿಸಿದ್ದವು. ಪ್ರತಿಯೊಂದು ತಂಡಗಳ ನಡುವೆ ನಡೆದ ಕಬಡ್ಡಿ ಪಂದ್ಯಾವಳಿ ರೋಚಕವಾಗಿ ನಡೆದವು. ರಾತ್ರಿ ೧೦ ಗಂಟೆಗೆ ಆರಂಭವಾದ ಕಬಡ್ಡಿ ಪಂದ್ಯಾವಳಿ ಬೆಳಗ್ಗೆ ೧೦.೩೦ ರವರೆಗೆ ನಡೆಯಿತು. ಪ್ರಥಮ ಸ್ಥಾನ ನಾಗೂರ ತಂಡ, ದ್ವಿತೀಯ ಸ್ಥಾನ ಸಾರವಾಡ ತಂಡ, ತೃತೀಯ ಸ್ಥಾನ ಬಾಗಲಕೋಟ ತಂಡ ಪಡೆದುಕೊಂಡವು.

