ಜನರ ಜೀವದ ಜೊತೆ ಚಲ್ಲಾಟ | ಅಧಿಕಾರಿಗಳ ನಿಷ್ಕಾಳಜಿ | ನೀರು ಕುಡಿದ ಹಲವರ ಆರೋಗ್ಯದಲ್ಲಿ ಏರುಪೇರು
*ಚೇತನ ಶಿವಶಿಂಪಿ*
ಮುದ್ದೇಬಿಹಾಳ: ಪ್ರತಿ ದಿನ ಮನುಷ್ಯನ ದೇಹಕ್ಕೆ ಸೇರೋ ನೀರು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತೆ. ಊಟ ಇಲ್ದೆ ಮನುಷ್ಯ ಸುಮಾರು ದಿನಗಳ ಕಾಲ ಬದುಕಬಲ್ಲ. ಆದರೆ ನೀರು ಸೇವಿಸದೇ ಬದುಕಲಾರ ಎಂದು ವೈಜ್ಞಾನಿಕವಾಗಿಯೂ ಖಚಿತಗೊಂಡಿದೆ.
ಕುಡಿಯುವ ನೀರು ಕಲುಷಿತವಾಗಿರಬಾರದು, ಪರಿಶುದ್ಧವಾಗಿರಬೇಕು ಅಂತಾ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶುದ್ಧವಾದ ಕುಡಿಯುವ ನೀರು ಪೂರೈಸಲು ಅನುದಾನ ನೀಡಿ ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವಂತೆ ಆದೇಶಿಸುತ್ತೆ. ಸರ್ಕಾರದ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತಯಾರಾಗಿದೆ ಅಂದರೆ ಸಾರ್ವಜನಿಕರು ಹಿಂದೂ ಮುಂದೂ ನೋಡದೇ ಕುಡಿಯೋಕೆ ಪ್ರಾರಂಭಿಸುತ್ತಾರೆ. ಆದರೆ ಇನ್ಮುಂದೆ ಆರ್‌ಓ ಪ್ಲಾಂಟ್ ನ ನೀರು ಕುಡಿಯೋಕೆ ಯೋಗ್ಯ ಇದೆನಾ ಅಂತ ಟೆಸ್ಟ ಮಾಡಿಸಿ ಕುಡಿಯಲು ಮುಂದಾಗಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ಇಲ್ಲೊಂದು ಶುದ್ಧ ಕುಡಿಯುವ ನೀರಿನ ಘಟಕ ನೀಡಿದೆ.
ಪಟ್ಟಣದ ತಹಶೀಲ್ದಾರ ಕಚೇರಿಯ ಬಳಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕೆಲವೇ ತಿಂಗಳುಗಳ ಹಿಂದೆಯಷ್ಟೇ ಉದ್ಘಾಟನೆಯಾದ ಶುದ್ಧ ಕುಡಿಯುವ ನೀರಿನ ಘಟಕ ಈ ಸಂದೇಶವನ್ನು ರವಾನಿಸಿದೆ. ಅಮೃತ ನಗರೋತ್ಥಾನ ಯೋಜನೆ ಹಂತ-೪ ರ ಅಡಿ ನಿರ್ಮಿಸಲಾದ ಈ ಶುದ್ಧ ಕುಡಿಯುವ ನೀರಿನ ಘಟಕ ಸಧ್ಯ ಕುಡಿಯೋಕೆ ಯೋಗ್ಯವಿಲ್ಲ (ಅನ್‌ಫಿಟ್) ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ.
೨೦ ಲಕ್ಷ ಅನುದಾನದ ಅಡಿಯಲ್ಲಿ ನಿರ್ಮಿಸಲಾದ ಒಟ್ಟು ಮೂರು ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಇದೂ ಒಂದು. ಸರ್ಕಾರಿ ಕಾಲೇಜಿನ ಅಂದಾಜು ೨ಸಾವಿರ ವಿದ್ಯಾರ್ಥಿಗಳು, ಹತ್ತಿರದಲ್ಲೇ ಇರುವ ಅಗ್ನಿಶಾಮಕ ದಳದ ಒಟ್ಟು ೨೭ ಸಿಬ್ಬಂದಿಗಳ ಕುಟುಂಬಕ್ಕೆ ಮತ್ತು ವಿಬಿಸಿ ಹೈಸ್ಕೂಲ್ ನ ವಿದ್ಯಾರ್ಥಿಗಳು ಸೇರಿದಂತೆ ವಾಯು ವಿಹಾರಿಗಳಿಗೆ, ವಿದ್ಯಾ ನಗರದ ಕೆಲ ನಿವಾಸಿಗಳಿಗೆ ಈ ಶುದ್ಧ ಕುಡಿಯುವ ನೀರಿನ ಘಟಕ ವರದಾನವಾಗಿತ್ತು. ಆದರೆ ಈ ನೀರು ಕುಡಿಯಲು ಯೋಗ್ಯ ಇದೆಯೇ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳದೇ ಶುದ್ಧ ಕುಡಿಯುವ ನೀರಿನ ಘಟಕ ಅಂತಾ ನಾಮಫಲಕ ಹಾಕಿ ಜನತೆಯ ಜೀವಗಳ ಜೊತೆ ಚಲ್ಲಾಟವಾಡದಂತಾಗಿದೆ.
ಇಲಾಖೆಯವರ ಈ ನಿಷ್ಕಾಳಜಿತನದಿಂದ ಈ ನೀರು ಕುಡಿದ ಹಲವರ ಆರೋಗ್ಯದಲ್ಲಿ ಏರುಪೇರಾಗಿದೆ. ದೇಹದಲ್ಲಿ ಶಕ್ತಿ ಇಲ್ಲದಂತಾಗೋದು, ವಾಂತಿ-ಬೇಧಿ, ತಲೆ ಸುತ್ತು ಬಂದು ಚೇತರಿಸಿಕೊಂಡ ಉದಾಹರಣೆಗಳಿವೆ. ಅದೃಷ್ಟವಶಾತ್ ಯಾರ ಪ್ರಾಣಕ್ಕೂ ಹಾನಿಯಾಗಿಲ್ಲ. ಈ ಸಮಸ್ಯೆಯನ್ನ ಸೂಕ್ಷ್ಮವಾಗಿ ಗಮನಿಸಿದ ಕೆಲವರು ಸಧ್ಯ ಈ ನೀರನ್ನು ಕುಡಿಯೋದನ್ನ ಬಿಟ್ಟಿದ್ದು ಕೂಡಲೇ ಸಂಬಂಧಿಸಿದವರು ಜಾಗೃತರಾಗಿ ಈ ಘಟಕದ ಸಮಸ್ಯೆಯನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

