ಜೇವೂರ ರೇವಣಸಿದ್ಧೇಶ್ವರ 38ನೇ ಪುಣ್ಯಾರಾಧನೆ | ಭವ್ಯ ರಥೋತ್ಸವ | ಜನಮನ ರಂಜಿಸಿದ ಕುಸ್ತಿ ಸೆಣಸಾಟ
ಚಡಚಣ: ಸಮೀಪದ ಸುಕ್ಷೇತ್ರ ಜೇವೂರ ಕೈವಲ್ಯಧಾಮ ಮಠದ ಹಠಯೋಗಿ ರೇವಣಸಿದ್ಧೇಶ್ವರ ಮಹಾರಾಜರ 38 ನೇ ಪುಣ್ಯಾರಾಧನೆ ಪ್ರತಿ ವರ್ಷದಂತೆ ಐದು ದಿನಗಳ ಕಾಲ ಅತಿ ವೈಭವದಿಂದ ಜರುಗಿ, ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ತೆರೆ ಎಳೆಯಲಾಯಿತು.
ಜಾತ್ರಾ ಮಹೋತ್ಸವದ ಕೊನೆಯ ದಿನ ಮಂಗಳವಾರದಂದು ಬೆಳಗಿನ ಜಾವ 4 ಗಂಟೆಗೆ ಶ್ರೀ ರೇವಣಸಿದ್ದೇಶ್ವರ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೇರವೇರಿಸಲಾಯಿತು. ನಂತರ ತೋಟದ ದೇವಸ್ಥಾನದಿಂದ ರೇವಣಸಿದ್ಧೇಶ್ವರ ಮಹಾರಾಜರ ಬೆಳ್ಳಿ ಮೂರ್ತಿಯ ಭವ್ಯ ಮೇರವಣಿಗೆ ಆನೆಯ ಅಂಬಾರಿ ಮೇಲೆ ಗ್ರಾಮದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ, ದೇವಸ್ಥಾನ ತಲುಪಿ, ಶ್ರೀ ರೇವಣಸಿದ್ದೇಶ್ವರ ಮಹಾರಾಜರ ಮೂಲ ಗದ್ದುಗೆಗೆ ಅಸಂಖ್ಯಾತ ಭಕ್ತಸ್ತೋಮದ ಸಮ್ಮುಖದಲ್ಲಿ ಭಕ್ತಿ-ಭಾವದಿಂದ ಪುಷ್ಪವೃಷ್ಠಿ ಕಾರ್ಯಕ್ರಮ ನೇರವೇರಿತು.
ಮಧ್ಯಾಹ್ನ 3-30 ಗಂಟೆ ಸುಮಾರಿಗೆ ರೇವಣಸಿದ್ಧೇಶ್ವರ ದೇವಸ್ಥಾನ ಹಿಂಭಾಗದ ಮೈದಾನದಲ್ಲಿ ಅಸಂಖ್ಯಾತ ಜನಸ್ತೋಮದೊಂದಿಗೆ ವಿವಿಧ ಶ್ರೀಗಳ ಸಮ್ಮುಖದಲ್ಲಿ ಅದ್ಧೂರಿ ರಥೋತ್ಸವ ಸಮಾರಂಭ ಜರುಗಿತು.
ರಥೋತ್ಸವ ವೇಳೆ ಖಾರಿಕ್, ಬದಾಮ್, ಶೇಂಗಾ, ಬಾಳೆ ಹಣ್ಣು, ಚುರುಮುರಿ ಎರಚಿ ಭಕ್ತರು ಭಕ್ತಿಯನ್ನು ಸಮರ್ಪಿಸಿದರು.
ಸಾಯಂಕಾಲ 4 ಗಂಟೆಗೆ ಆಯೋಜಿಸಿದ್ದ ಪ್ರಸಿದ್ಧ ಫೈಲ್ವಾನರುಗಳಿಂದ ಕುಸ್ತಿ ಪಂದ್ಯಾವಳಿಗಳಲ್ಲಿ ಜಗಜಟ್ಟಿಗಳ ಗೆಲುವಿಗಾಗಿ ಕಸರತ್ತು ಮಾಡುತ್ತಿರುವದು ಕುಸ್ತಿ ಪ್ರೀಯರ ಮನನವಿಳಿಸುವಂತಿತ್ತು.
ಗೆಲುವು ನನ್ನದೇಯಾಗಬೇಕೆಂದು ಪೈಲ್ವಾನರು ಸೆಣಸಾಟ ನಡೆಸುತ್ತಿರುವ ದೃಶ್ಯ ವಿಕ್ಷಿಸುತ್ತಾ, ಸಿಳ್ಳೆ, ಕೇಕೆ ಹಾಕುತ್ತಾ ಕುಸ್ತಿ ಪ್ರೇಮಿಗಳು ಸಕತ್ ಎಂಜಾಯ್ ಮಾಡಿದರು.
ಸಂಜೆ 7 ಗಂಟೆ ಸುಮಾರಿಗೆ ಚಿತ್ರವಿಚಿತ್ರ ವರ್ಣರಂಜಿತ ಮದ್ದು ಸುಡಲಾಯಿತು. ಈ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

