ಬಸವನಬಾಗೇವಾಡಿ: ವಿಶ್ವಗುರು ಬಸವೇಶ್ವರರ ದಾಸೋಹ ತತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಜ್ಞಾನ, ಅನ್ನ ದಾಸೋಹವನ್ನು ಕೈಗೊಳ್ಳುವ ಮೂಲಕ ಇಡೀ ಜಗತ್ತಿಗೆ ದಾಸೋಹದ ಮಹತ್ವವನ್ನು ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ತಿಳಿಸಿಕೊಟ್ಟಿದ್ದರಿಂದಲೇ ಅವರ ಜನ್ಮ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸುವ ಮೂಲಕ ಅವರಿಗೆ ಇಡೀ ನಾಡು ನಮನ ಸಲ್ಲಿಸುತ್ತಿದೆ ಎಂದು ಯರನಾಳ ವಿರಕ್ತಮಠದ ಗುರುಸಂಗನಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಸುಕ್ಷೇತ್ರ ಯರನಾಳ ಗ್ರಾಮದ ವಿರಕ್ತಮಠದ ಲಿಂ. ಪಂಪಾಪತಿ ಶಿವಯೋಗಿ ಜಾತ್ರಾಮಹೋತ್ಸವ ಹಾಗೂ ಗುರುಸಂಗನಬಸವ ಸ್ವಾಮೀಜಿಗಳ ಜನ್ಮಸುವರ್ಣ ಮಹೋತ್ಸವದಂಗವಾಗಿ ೧೭ ದಿನ ಕಾಲ ಹಮ್ಮಿಕೊಂಡಿರುವ ಸೊನ್ನಲಾಪೂರದ ಶಿವಯೋಗಿ ಸಿದ್ದರಾಮೇಶ್ವರ ಚರಿತ್ರೆ ಪುರಾಣದಲ್ಲಿ ಸೋಮವಾರ ಸಂಜೆ ದಾಸೋಹ ದಿನದಂಗವಾಗಿ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಡಾ. ಶಿವಕುಮಾರ ಸ್ವಾಮೀಜಿ ಅವರು ತಮಗಾಗಿ ಬದುಕದೇ ಇಡೀ ಸಮಾಜಕ್ಕಾಗಿ ಬದುಕಿದ ಸಂತ. ಇನ್ನೊಬ್ಬರ ಬದುಕು ಸುಂದರ ಮಾಡಬೇಕೆಂಬ ಸದುದ್ದೇಶದಿಂದ ನಾಡಿನ ಲಕ್ಷಾಂತರ ಮಕ್ಕಳಿಗೆ ಬೆಳಕಾದರು. ಇಡೀ ಸಮಾಜದ ಒಳಿತಿಗಾಗಿ ಶ್ರಮಿಸಿದರು. ಬಂಥನಾಳದ ಸಂಗನಬಸವ ಶಿವಯೋಗಿಗಳಂತೆ ಶಿವಕುಮಾರ ಸ್ವಾಮೀಜಿಯವರು ದಾಸೋಹಕ್ಕೆ ಮಹತ್ವ ನೀಡಿದ್ದರು. ಬಸವ ಪರಂಪರೆಯನ್ನು ಯಡಿಯೂರ ಸಿದ್ದಲಿಂಗೇಶ್ವರರು ಜಾಗೃತಿಗೊಳಿಸಿದರು. ದಾಸೋಹ, ಕಾಯಕ, ಶೈಕ್ಷಣಿಕ ಸೇವೆ ವಿರಕ್ತಮಠದ ಪರಂಪರೆಯಾಗಿದೆ ಎಂದರು.
ನಾವೆಲ್ಲರೂ ಆರ್ಯ ಪದ್ಧತಿ ಕೈಬಿಡಬೇಕಿದೆ. ಪುರುಷ ಪ್ರಧಾನ ಸಮಾಜ ಅಳಿದು ತಾಯಿಂದಿರಿಗೂ ಗೌರವ ಸಿಗುವಂತಾಗಬೇಕು. ಅಂದಾಗ ಬಸವೇಶ್ವರರ ಸಮಾನತೆಗೆ ಒಂದು ಮೌಲ್ಯ ಬರಲು ಸಾಧ್ಯ. ಲಿಂಗ ಕಟ್ಟಿಕೊಂಡ ಎಲ್ಲ ಮಹಿಳೆಯರೂ ಸುಮಂಗಲೆಯರೇ ಆಗಿದ್ದಾರೆ. ನಮ್ಮ ಜಾತ್ರಾಮಹೋತ್ಸವದಲ್ಲಿ ಲಿಂಗ ಕಟ್ಟಿಕೊಂಡ ಎಲ್ಲ ಮಹಿಳೆಯರಿಗೆ ಏ.13 ರಂದು ಉಡಿ ತುಂಬುವ ಕಾರ್ಯಕ್ರಮ ಮಾಡಲಾಗುವುದು. ನಮ್ಮ ಜನ್ಮ ಸುವರ್ಣ ಮಹೋತ್ಸವದಂಗವಾಗಿ ೫೦ ಸಾವಿರ ಸಸಿಗಳನ್ನು ನೆಡುವ ಸಂಕಲ್ಪ ಇದೆ. ನಾವು ಮುಂಬರುವ ದಿನಗಳಲ್ಲಿ ಪ್ರಸಾದ ರೂಪದಲ್ಲಿ ಭಕ್ತರಿಗೆ ಸಸಿಗಳನ್ನು ನೀಡಿ ಅವು ಬೆಳೆಯುವಂತೆ ನೋಡಿಕೊಳ್ಳಬೇಕೆಂದು ಹೇಳುವುದಾಗಿ ಹೇಳಿದರು.
ಹೂವಿನಹಿಪ್ಪರಗಿ ಪತ್ರಿವನ ಮಠದ ದ್ರಾಕ್ಷಾಯಿಣಿ ಅಮ್ಮನವರು ಮಾತನಾಡಿದರು.
ವಿಜಯಪುರದ ಶಾಂತಾಶ್ರಮದ ಗುರುಶಾಂತೇಶ್ವರ ಸ್ವಾಮೀಜಿ ಮಾತನಾಡಿದರು.
ವೇದಿಕೆಯಲ್ಲಿ ಪ್ರವಚನಕಾರ ಕೊಡೆಕಲ್ಲದ ಗಂಗಾಧರ ಶಾಸ್ತ್ರೀಜಿ, ಬಸವರಾಜ ಮಣ್ಣೂರ ಇದ್ದರು. ವಿರೇಶ ವಾಲಿ, ಸಿದ್ದಾರ್ಥ ಬೈಚಬಾಳ, ಬಾಗೇಕುಮಾರ ಗಂಗಾಪೂರ, ಪುನೀತ ತಾವರಖೇಡ ಅವರಿಂದ ಸಂಗೀತ ಸುಧೆ ಹರಿಯಿತು. ಶರಣಬಸು ಹಳೆಮನಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

