ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜಂಟಿ ಸಭೆಯಲ್ಲಿ ಸಂಸದ ಜಿಗಜಿಣಗಿ ಭರವಸೆ
ವಿಜಯಪುರ: ಜೆಡಿಎಸ್ ಕಚೇರಿ ಭೇಟಿ ನೀಡಿದ್ದು ಹಾಗೂ ಜೆಡಿಎಸ್ ಕಾರ್ಯಕರ್ತರ ಜೊತೆ ಬೆರೆತಿರುವುದು ಮತ್ತೆ ಮಾತೃ ಪಕ್ಷಕ್ಕೆ ಬಂದಂತಹ ಅನುಭವ ಆಗುತ್ತಿದೆ ಎಂದು ಸಂಸದ ವಿಜಯಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.
ಮಂಗಳವಾರ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜಂಟಿ ಸಭೆಯಲ್ಲಿ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆ, ದೇವೇಗೌಡ, ಜೆ.ಎಚ್.ಪಟೇಲ ಅವರ ಅಡಿಯಲ್ಲಿ ಬೆಳೆದು ಈ ಮಟ್ಟಕ್ಕೆ ಬಂದಿದ್ದೇನೆ. ಈಗ ಜೆಡಿಎಸ್ ಎನ್‌ಡಿಎ ಒಕ್ಕೂಟಕ್ಕೆ ಸೇರ್ಪಡೆಯಾಗಿರುವದರಿಂದ ಜೆಡಿಎಸ್-ಬಿಜೆಪಿ ಕಾರ್ಯಕರ್ತರನ್ನು ಒಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಆಶ್ವಾಸನೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ ಎರಡು ಪಕ್ಷಗಳ ನಾಯಕರು ಮುಖಂಡರು, ಕಾರ್ಯಕರ್ತರು ಒಂದು ತಂಡವಾಗಿ ಕೆಲಸ ಮಾಡಿ ಪರಸ್ಪರ ಸಮನ್ವಯ ಸಾಧಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕಾರ್ಯವಾಗಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆಮ್ಮೊ ಪ್ರಧಾನಿಯಾಗಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹ ಬಿಜೆಪಿ ಜೊತೆ ಕೈ ಜೋಡಿಸಿದ್ದು, ಮೋದಿ ಅವರ ಆಡಳಿತದ ವಿಶ್ವಾಸಕ್ಕೆ ಸಾಕ್ಷಿ ಎಂದು ಬಣ್ಣಿಸಿದರು.
ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಈ ಹಿಂದೆ ಬಿಜೆಪಿ ಜೊತೆಗಿನ ಯಾವುದೇ ಭಿನ್ನಾಭಿಪ್ರಾಯ ವ್ಯತ್ಯಾಸಗಳನ್ನು ಅದನ್ನು ಮರೆತು ಕಾರ್ಯನಿರ್ವಹಿಸುವುಂತೆ ಮಾಜಿ ಪ್ರಧಾನಿ ದೇವೇಗೌಡರು ಕರೆ ನೀಡಿದ್ದಾರೆ. ಜಿಲ್ಲೆಯ ಎಲ್ಲ ಬೂತಗಳಲ್ಲಿ ಜಿಡಿಎಸ್ ಶಕ್ತಿ ಇದೆ. ಜೆಡಿಎಸ್ ಮುಖಂಡರು ಬಿಜೆಪಿ ನಾಯಕರು ಪರಸ್ಪರ ಸಮನ್ವಯ ಸಾಧಿಸಿಕೊಂಡು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕು ಆ ಮೂಲಕ ಉಭಯ ಪಕ್ಷಗಳ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವದಿಲ್ಲ. ಎರಡು ಪಕ್ಷಗಳ ಎನ್‌ಡಿಎ ಮೈತ್ರಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ಚುನಾವಣೆಯಲ್ಲಿ ಗೆಲ್ಲಲು ಯಾವುದೇ ವ್ಯತ್ಯಾಸವಾಗದಂತೆ ಕಾರ್ಯನಿರ್ವಹಿಸುವದರ ಜೊತೆಗೆ ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಿ ಅತ್ಯಂತ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದರೆ ಚುನಾವಣೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.
ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ ಮಾತನಾಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರುಣ ಶಹಾಪೂರ, ಬಿ.ಜಿ.ಪಾಟೀಲ ಹಲಸಂಗಿ ಸೇರಿದಂತೆ ಹಲವರು ಮಾತನಾಡಿದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ರಾಜಶೇಖರ ಶೀಲವಂತ, ಚಂದ್ರಶೇಖರ ಕವಟಗಿ, ಸಂಜೀವ ಐಹೊಳೆ, ಕಾಸುಗೌಡ ಬಿರಾದಾರ, ಬಸವರಾಜ ಹೊನವಾಡ, ಬಸವರಾಜ ಭಜಂತ್ರಿ, ಬಿ.ಡಿ.ಪಾಟೀಲ, ಅಪ್ಪರಾಬೇಗಂ ಚಪ್ಪರಬಂದ ಸೇರಿದಂತೆ ಅನೇಕ ಬಿಜೆಪಿ-ಜೆಡಿಎಸ್ ಮುಖಂಡರು ಇದ್ದರು.

