ದೇವರಹಿಪ್ಪರಗಿ: ಚಿತ್ರದುರ್ಗದ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ತಳವಾರ ಸಮುದಾಯದ ವಿರೋಧಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಾಗುವುದು ಎಂದು ಕೋಲಿ ಕಬ್ಬಲಿಗ ಯುವವೇದಿಕೆ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ ಹೇಳಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಪತ್ರಿಕೆಯೊಂದಿಗೆ ಮಾತನಾಡಿ, ಗೋವಿಂದ ಕಾರಜೋಳ ಕಳೆದ ಬಿಜೆಪಿ ಸರ್ಕಾರದಲ್ಲಿ ಸಮಾಜಕಲ್ಯಾಣ ಇಲಾಖೆಯ ಮಂತ್ರಿಯಾಗಿದ್ದ ಸಮಯದಲ್ಲಿ ತಳವಾರ ಸಮುದಾಯಕ್ಕೆ ಎಸ್.ಟಿ ಮೀಸಲಾತಿ ನೀಡುವ ವಿಚಾರದಲ್ಲಿ ಗೊಂದಲಕ್ಕೆ ಅವಕಾಶ ನೀಡಿ ತಳವಾರ ಎಸ್.ಟಿ ಗೆಜೆಟ್ ಆಗಿದ್ದರೂ ತಮ್ಮ ವಿರೋಧ ವ್ಯಕ್ತಪಡಿಸುವುದರ ಮೂಲಕ ೨ ವರ್ಷ ಮೀಸಲಾತಿ ಸಿಗದಂತೆ ನೋಡಿಕೊಂಡರು. ಆಗ ಇಡೀ ತಳವಾರ ಸಮುದಾಯ ಸತತ ಹೋರಾಟದ ಮೂಲಕ ಎಸ್.ಟಿ ಪ್ರಮಾಣಪತ್ರ ಪಡೆಯುವಂತಾಯಿತು. ಅದಕ್ಕೆ ತಕ್ಕ ಪಾಠವಾಗಿ ೩೫ ಸಾವಿರ ಸಮುದಾಯದ ಮತದಾರರು ಅವರ ವಿರುದ್ಧ ಮತ ಚಲಾಯಿಸಿ ಮುಧೋಳದಲ್ಲಿ ಅವರ ಸೋಲಿಗೆ ಕಾರಣರಾದರು.
ಗೋವಿಂದ ಕಾರಜೋಳ ಎಲ್ಲ ಸಮುದಾಯಗಳ ಮೀಸಲಾತಿಯ ವಿರೋಧಿಯಾಗಿದ್ದು, ಅವಕಾಶವಾದಿ ರಾಜಕಾರಣಿಯಾಗಿದ್ದಾರೆ. ಎಲ್ಲಿ ತಳವಾರ ಸಮುದಾಯ ಸೇರಿದಂತೆ ಬೇರೆ ಬೇರೆ ಸಮುದಾಯಗಳಿಗೆ ಮೀಸಲಾತಿ ದೊರೆತರೇ, ಇವರಿಗೆ ಅಧಿಕಾರ ದೊರೆಯುತ್ತದೆ ಎಂಬ ಭಯ, ಸ್ವಾರ್ಥ ಹಾಗೂ ದುರುದ್ದೇಶದಿಂದ ಅಡ್ಡಿಪಡಿಸುತ್ತಿದ್ದಾರೆ. ಇಂತಹ ವ್ಯಕ್ತಿ ಈಗ ಚಿತ್ರದುರ್ಗದಲ್ಲಿ ಲೋಕಸಭೆಗೆ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕೀಯದಿಂದ ಕೇಂದ್ರ ರಾಜಕಾರಣಕ್ಕೆ ಅಡಿಯಿಡುತ್ತಿದ್ದಾರೆ. ಒಂದು ವೇಳೆ ಚುನಾಯಿತರಾಗಿ ಆಯ್ಕೆ ಆದಲ್ಲಿ ಕೇಂದ್ರದಲ್ಲಿ ವಿವಿಧ ಸಮುದಾಯಗಳ ಮೀಸಲಾತಿ ವಿಷಯಗಳಿಗೆ ಸಂಬಂಧಿಸಿದಂತೆ ತನ್ನ ವಿರೋಧ ವ್ಯಕ್ತಪಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಇಂಥ ವ್ಯಕ್ತಿಗೆ ಚಿತ್ರದುರ್ಗದಲ್ಲಿ ತಕ್ಕ ಪಾಠ ಕಲಿಸಲಾಗುವುದು. ಈ ವಿಷಯವಾಗಿ ಸಮುದಾಯದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಎಚ್.ಡಿ. ರಂಗಯ್ಯ ಕೂಡ ಮಾತನಾಡಿದ್ದು, ನಾಮಪತ್ರ ಸಲ್ಲಿಕೆ ನಂತರ ೧ ಲಕ್ಷಕ್ಕಿಂತಲೂ ಅಧಿಕ ಸಮುದಾಯದ ಕೋಲಿ ಕಬ್ಬಲಿಗ ಮತದಾರರದಿಂದ ಕಾರಜೋಳರಿಗೆ ತಕ್ಕ ಉತ್ತರ ನೀಡುವುದು ನಿಶ್ಚಿತ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

