ವಿಜಯಪುರ: ಜನ ಸೇವೆ ಮಾಡುವುದಕ್ಕೆ ಒಳ್ಳೆಯ ಹೃದಯವಿರಬೇಕೆ ಹೊರತು ಅಧಿಕಾರವಲ್ಲ. ಅಧಿಕಾರವೆಂಬುದು ಕೇವಲ ಸೇವೆ ಮಾಡುವುದಕ್ಕೆ ಇರುವಂತ ಒಂದು ಅವಕಾಶ ಅದನ್ನು ನಾನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದೇನೆ. ನಿಸ್ವಾರ್ಥ ಸೇವೆ ಮಾಡುವ ಮೂಲಕ ಸಮಾಜದ ಹಲವಾರು ರಂಗಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅದರ ಒಂದು ಭಾಗವೇ ಇಂದು ಆರೋಗ್ಯ ಕ್ಷೇತ್ರದಲ್ಲಿ ಸಿದ್ಧೇಶ್ವರ ಸಂಸ್ಥೆ ಹೊಸ ಕ್ರಾಂತಿ ಮಾಡುತ್ತಿದೆ ಎಂದು ವಿಜಯಪುರದ ನಗರ ಶಾಸಕರಾದ ಬಸನಗೌಡ ರಾ ಪಾಟೀಲ್ ಯತ್ನಾಳ ಹೇಳಿದರು.
ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಸಿದ್ಧೇಶ್ವರ ೨೪/೭ ಮೆಡಿಕಲ್‌ನ ಐದನೇ ಮಳಿಗೆಯ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಜಯಪುರ ನಗರವನ್ನು ಮಾದರಿಯ ನಗರವನ್ನಾಗಿ ಮಾಡುವ ಉದ್ಧೇಶದಿಂದ ಶತಮಾನದ ಇತಿಹಾಸವುಳ್ಳ ಸಿದ್ಧೇಶ್ವರ ಸಂಸ್ಥೆಯನ್ನು ಆರೋಗ್ಯ ಕ್ಷೇತ್ರದ ಕಡೆಗೆ ಮುಖಮಾಡಿ ನಿಲ್ಲುವಂತೆ ಮಾಡಿದ್ದರ ಪರಿಣಾಮವಾಗಿ ಸಿದ್ಧಸಿರಿ ಹಾಗೂ ಸಿದ್ಧೇಶ್ವರ ಸಂಸ್ಥೆಯ ಸಹಯೋಗದಲ್ಲಿ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆಯಾಯಿತು. ಇದರ ಮೂಲಕವಾಗಿ ಶ್ರೀ ಈಶ್ವರಗೌಡ ರಾ ಪಾಟೀಲ್ ಯತ್ನಾಳ ಚಾರಿಟಿ ಡಯಾಲಿಸಿಸ್ ಕೇಂದ್ರದ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿಯೇ ಅತ್ಯುತ್ತಮವಾದ ಹೈಟೆಕ್ ಡಯಾಲಿಸಿಸ್ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಹೆಸರಲ್ಲಿ ನಿರ್ಮಾಣವಾದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಕಿಡ್ನಿ ಕಸಿ ಮಾಡುವ ಮೂಲಕ ಬಡವರಿಗೆ ನೆರವಾಗುತ್ತಲಿದ್ದೇವೆ. ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಸತತ ಏಳು ದಿನಗಳ ವರೆಗೂ ಉಚಿತ ಹೆರಿಯನ್ನು ಘೋಷಿಸುವ ಮೂಲಕ ೬೪ ಹೆರಿಗೆಗಳನ್ನು ಉಚಿತವಾಗಿ ನೆರವೇರಿಸಿ ಸಾರ್ವಜನಿಕರ ಆರ್ಥಿಕ ಹೊರೆಯನ್ನು ತಗ್ಗಿಸಿದ್ದೇವೆ. ಸಿದ್ಧೇಶ್ವರ ೨೪/೭ ಮಡಿಕಲ್‌ಗಳನ್ನು ಪ್ರಾರಂಭಿಸುವ ಮೂಲಕ ಹನ್ನೆರಡರಿಂದ ಇಪ್ಪತ್ತು ಪ್ರತಿಷತ ರಿಯಾಯಿತಿಯನ್ನು ನೀಡುವುದರೊಂದಿಗೆ ಮಧ್ಯರಾತ್ರಿಯಾದರೂ ಒಂದು ರೂಪಾಯಿಯ ಮಾತ್ರೆಯನ್ನು ಸಹ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದು ಆ ಸೇವೆಯನ್ನು ಇಂದು ಇಂಡಿಗೆ ವಿಸ್ತರಣೆ ಮಾಡುವ ಮೂಲಕ ಇಂಡಿ ಭಾಗದ ಜನರು ನನಗೆ ಮಾಡಿದ ಆಶಿರ್ವಾದದ ಋಣವನ್ನು ತೀರಿಸುವುದಕ್ಕೆ ಯತ್ನಿಸುತ್ತಿದ್ದೇನೆ ಎಂದು ಹೇಳಿದ ಅವರು ಸಿದ್ಧೇಶ್ವರ ಡೈಗ್ನೊಸ್ಟಿಕ್ ಮೂಲಕ ರಕ್ತ ಹಾಗೂ ಮೂತ್ರ ತಪಾಸಣಾ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುತ್ತಿರುವುದು ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾಗಿದೆ. ನಮ್ಮ ಸಂಸ್ಥೆಯ ಈ ಎಲ್ಲ ಸೇವೆಗಳನ್ನು ಪಡೆದುಕೊಳ್ಳುವ ಮೂಲಕ ಸಾರ್ವಜನಿಕರು ಸದೃಢ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಜೊತೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಇಂಡಿಯ ಮಾಜಿ ಶಾಸಕ ಎಸ್‌ಎಸ್ ಬಗಲಿಯವರು, ಇಂದು ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ಜಿಲ್ಲೆಯ ಹಲವು ಭಾಗಗಳಲ್ಲಿ ರಿಯಾಯಿತಿ ದರದ ಮೆಡಿಕಲ್ ಸೇವೆಯನ್ನು ಒದಗಿಸುತ್ತಿರುವುದು ನಿಜಕ್ಕೂ ಸಾರ್ವಜನಿಕರಿಗೆ ಬಹಳಷ್ಟು ನೆರವಾಗುತ್ತಿದೆ. ಅದರಲ್ಲೂ ಮಧ್ಯರಾತ್ರಿಯಲ್ಲಿ ಮನೆ ಬಾಗಿಲಿಗೆ ಮಾತ್ರೆಗಳನ್ನು ತಲುಪಿಸುವ ಕಾರ್ಯ ಸುಲಭವಲ್ಲ. ಅಂಥಹ ಕಾರ್ಯವನ್ನು ಮಾಡುತ್ತಿರುವ ಸಿದ್ಧೇಶ್ವರ ಸಂಸ್ಥೆಗೆ ಆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಈ ರೀತಿಯ ಸೇವೆ ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಹಬ್ಬಲಿ ಹಾಗೂ ಇನ್ನೂ ಹೆಚ್ಚಿನ ಸೇವೆಯನ್ನು ಮಾಡುವ ಅವಕಾಶ ಬಸನಗೌಡ ರಾ ಪಾಟೀಲ್ ಯತ್ನಾಳ ಅವರಿಗೆ ನೀಡಲಿ ಎಂದು ಶುಭ ಹಾರೈಸಿದರು.
ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಜನತಾದಳದ ಮುಖಂಡ ಬಿ.ಡಿ.ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
ಗೊಳಸಾರ ಮಠದ ಅಭಿನವ ಶ್ರೀ ಅಭಿನವ ಪುಂಡಲಿಂಗ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ರಾಮನಗೌಡ ಬ. ಪಾಟೀಲ್ ಯತ್ನಾಳ, ಜೆಎಸ್‌ಎಸ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೆಡ್ಕರ್, ತಾಲೂಕಾ ವೈದ್ಯಾಧಿಕಾರಿ ಅರ್ಚನಾ ಕುಲಕರ್ಣಿ, ಡಾ. ಎಂ.ಜಿ.ಪಾಟೀಲ, ಸಿ.ಎಂ.ಶಹಾ, ರಮೇಶ ಗುತ್ತೇದಾರ, ಜಗದೀಶ ಕ್ಷತ್ರಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

