ಕನ್ನೊಳ್ಳಿಯ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ನುಡಿ
ಸಿಂದಗಿ: ಒಂದು ಸೂಜಿಯೂ ತಯಾರಾಗದ ಸ್ಥಿತಿಯಲ್ಲಿದ್ದ, ಬಡತನವನ್ನೇ ಹೊದ್ದಿದ್ದ ದೇಶವನ್ನು ಆರ‍್ಥಿಕವಾಗಿ ಉಸಿರಾಡುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಹೇಳಿದರು.
ಸಿಂದಗಿ ತಾಲ್ಲೂಕಿನ ಕನ್ನೊಳ್ಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಸಂವಿಧಾನ ರಕ್ಷಿಸಿದ್ದು ನಾವು. ದುರ‍್ಬಲರನ್ನು ಎತ್ತಿ ಹಿಡಿದದ್ದು ನಮ್ಮ ಪಕ್ಷ. ಬರೀ ಮಾತಿನಿಂದ ಹೊಟ್ಟೆ ತುಂಬಿಸುತ್ತಿರುವವರು ಈಗ ಎಲ್ಲವೂ ನಾವೇ ಮಾಡಿದ್ದೇವೆ ಎನ್ನುತ್ತಿದ್ದಾರೆ ಎಂದರು.
ಪ್ರಧಾನಿ ಮೋದಿಯವರೇ ಗ್ಯಾರಂಟಿಗಳನ್ನು ಟೀಕಿಸಿದರು. ಸದ್ಯ ಅವರೇ ಸಿದ್ದರಾಮಯ್ಯರ ಆಡಳಿತದಿಂದ ಪ್ರೇರಿತರಾಗಿ ಅವರೇ ‘ಮೋದಿ ಗ್ಯಾರಂಟಿ’ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಕಳೆದ ಹತ್ತು ವರ‍್ಷಗಳಲ್ಲಿ ಏನೇನೂ ಮಾಡಲಿಲ್ಲ. ನುಡಿದಂತೆ ನಡೆದವರು ನಾವು. ಜನರಿಗೆ ಹೇಳಿದಂತೆ ರಾಜ್ಯ ಸರಕಾರ ನಡೆದುಕೊಂಡಿದೆ. ಹೆಣ್ಣುಮಕ್ಕಳ, ಯುವಕರ ಮನ ಗೆದ್ದಿದೆ. ಹೀಗಾಗಿ ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿದರೆ ಅಲ್ಲಿಯೂ ಗ್ಯಾರಂಟಿಗಳು ಜಾರಿಯಾಗಲಿವೆ. ಜಿಗಜಿಣಗಿಯವರು ಮೂರು ಸಲ ಸಂಸದರಾದರೂ ಒಂದು ಪೈಸೆಯ ಕೆಲಸ ಮಾಡಿಲ್ಲ, ಲೋಕಸಭೆಯಲ್ಲಿ ಒಂದೇ ಪ್ರಶ್ನೆ ಕೇಳಲಿಲ್ಲ. ಈಗ ಬದಲಾವಣೆ ಕಾಲ ಬಂದಿದ್ದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ವಿನಂತಿಸಿದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮಾಣ ವಚನ ತೆಗೆದುಕೊಂಡ ಕ್ಷಣ ಘೋಷಿಸಿದ್ದ ಗ್ಯಾರಂಟಿಗಳನ್ನು ಒಂಭತ್ತೇ ತಿಂಗಳಲ್ಲಿ ಜಾರಿಗೆ ತಂದು, ಮನೆ ಮನೆ ಮುಟ್ಟಿಸಿದ್ದಾರೆ. ಕೋಟಿಗಳನ್ನು ಮೀರಿದ ಫಲಾನುಭವಿಗಳ ಯೋಜನೆ ಜಾರಿಯಾಗಿದ್ದು ವಿಶ್ವ ದಾಖಲೆ. ನಾವು ಕೆಲಸ ಮಾಡಿ ಮತ ಕೇಳುತ್ತಿದ್ದೇವೆ ಎಂದರು.
ಈಗ ರಾಮ ಮಂದಿರದ ಹೆಸರಲ್ಲಿ ಓಟು ಕೇಳುತ್ತಿರುವವರ ಬಳಿ ಯಾವ ವಿಷಯವಿಲ್ಲ. ಕಳೆದ ಸಲ ಫುಲ್ವಾಮಾ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಈ ಬಾರಿಯೂ ಭಾವನೆಗಳನ್ನು ಕೆರಳಿಸಿ ಜನರ ಬಳಿ ಬರುತ್ತಿದ್ದಾರೆ. ಈಗಾಗಲೇ ನಾವು ಜಯದ ಹತ್ತಿರ ಇದ್ದೇವೆ. ಒಳ್ಳೆಯ ವಾತಾವರಣವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷರಾದ ಮಲ್ಲಣ್ಣ ಸಾಲಿ, ಮಹಾಂತಗೌಡ ಪಾಟೀಲ, ಮುಖಂಡರಾದ ಎಸ್.ಎಮ್. ಪಾಟೀಲ ಗಣಿಹಾರ, ಶಂಕಪ್ಪ ಕೊಣ್ಣೂರ, ರಮೇಶ ಗುಬ್ಬೇವಾಡಿ, ಬ್ಲಾಕ್ ಅಧ್ಯಕ್ಷ ಸುರೇಶ ಪೂಜಾರಿ, ಚಂದ್ರಶೇಖರ ದೇವರೆಡ್ಡಿ, ಖತೀಬ್ ಮುಲ್ಲಾ, ಅರವಿಂದ ಹಂಗರಗಿ, ಮುಸ್ತಾಕ ಮುಲ್ಲಾ, ರಾಜು ಕುಚಬಾಳ, ಶಿವಯೋಗಿ ಹತ್ತಿ, ಪ್ರವೀಣ ಕಂಟಗೊಂಡ, ರಾಮಲಿಂಗ ಖೇಡಗಿ, ಶಿವು ಕೊಟಾರಗಸ್ತಿ, ರಾಚಪ್ಪ ತಂಬಾಕೆ ಅನೇಕರಿದ್ದರು.

