ಅಕಾಲಿಕ ಆಣೆಕಲ್ಲು ಮಳೆ ಹಾಗೂ ಬಿರುಗಾಳಿಗೆ ಬೆಳೆಹಾನಿ | ಪ್ರತಿಭಟನೆ ಎಚ್ಚರಿಕೆ
ವಿಜಯಪುರ: ಶನಿವಾರ ಸಂಜೆ ಸುರಿದ ಅಕಾಲಿಕ ಆಣೆಕಲ್ಲು ಮಳೆ ಹಾಗೂ ಭೀಕರ ಗಾಳಿಯಿಂದ ಜಿಲ್ಲೆಯ ಹಲವೆಡೆ ಲಿಂಬೆ, ದ್ರಾಕ್ಷಿ, ದಾಳಿಂಬೆ, ಮಾವು, ಚಿಕ್ಕು, ತೆಂಗು ಸೇರಿದಂತೆ ವಿವಿಧ ರೀತಿಯ ತೋಟಗಾರಿಕೆ ಬೆಳೆಗಳು ನೆಲಕ್ಕೆ ಉರುಳಿವೆ, ಜೊತೆಗೆ ಸಿಡಿಲು ಬಡಿದು ಎತ್ತು, ಕುರಿ, ಕೋಳಿಗಳು ಸಾವನ್ನಪ್ಪಿರುವ ಘಟನೆಗಳು ನಡೆದು ರೈತರಿಗೆ ಸಾಕಷ್ಟು ನಷ್ಟವುಂಟಾಗಿದೆ ನಷ್ಟಗೊಂಡ ರೈತರಿಗೆ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿ ಪರಿಹಾರಕ್ಕಾಗಿ ಆಗ್ರಹಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡುತ್ತಾ, ಶನಿವಾರ ರಾತ್ರಿ ಜಿಲ್ಲೆಯ ಹಲವು ಕಡೆ ಏಕಾಏಕಿ ಅಕಾಲಿಕ ಆಣೆಕಲ್ಲು ಮಳೆ ಹಾಗೂ ಭೀಕರ ಗಾಳಿಯಿಂದಾಗಿ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿರುವುದು ಕಂಡು ಬಂದಿದೆ, ಸಮೀಪದ ಜಂಬಗಿ(ಆಹೇರಿ) ಮಾದಾಳ ವಸ್ತಿ ಎಂಭ ಗ್ರಾಮದ ಸುಮಾರು ೪೦-೫೦ ರೈತರ ಜಮೀನಿನಲ್ಲಿನ ಲಿಂಬೆ ಗಿಡಗಳು ಗಾಳಿಗೆ ನೆಲಕ್ಕೆ ಉರುಳಿ ಎಲ್ಲಾ ಲಿಂಬೆ, ಮಿಡಿಲಿಂಬೆಕಾಯಿ, ಹಾಗೂ ಹೂಗಳು ನೆಲಕ್ಕೆ ಬಿದ್ದು ಬೆಲೆ ಬಾಳುವ ಲಿಂಬೆ ಮಾರುಕಟ್ಟೆಗೆ ಕಳುಹಿಸಿ ಕೈತುಂಬ ಹಣ ಬರುವಾಗ ಈ ರೀತಿಯಾಗಿ ನಷ್ಟಗೊಂಡಿರುವ ಘಟನೆ ನಡೆದಿವೆ. ಬರಗಾಲದಿಂದ ನೀರು ಸಿಗದಿರುವ ವೇಳೆ ಇರುವ ಅಲ್ಪಸ್ವಲ್ಪ ನೀರಿನಲ್ಲಿ ಹಾಗೂ ಟ್ಯಾಂಕರ್ ನೀರು ಹಾಕಿಕೊಂಡು ಕೂಸಿನಂತೆ ಬೆಳೆಸಿದ ಪ್ರತಿ ಡಾಗ ಲಿಂಬೆಗೆ ೭೦೦೦ ರೂ ನಡೆದಿರುವಂತಹ ವೇಳೆ ಈ ನಷ್ಟ ನುಂಗಲಾರದ ತುತ್ತಾಗಿದೆ
ಇದೇರೀತಿ ದಾಳಿಂಬೆ, ಚಿಕ್ಕು, ಮಾವು, ತೆಂಗು, ಸೇರಿದಂತೆ ಇನ್ನಿತರ ಹಣ್ಣಿನ ಗಿಡಗಳು ನೆಲಕ್ಕೆ ಬಿದ್ದು ನಷ್ಟ ಉಂಟಾಗಿವಿರುವ ಘಟನೆ ನಡೆದಿದೆ, ಒಣ ಮೇವಿನ ಭಣವಿ ಹಾಗೂ ಹಲವಾರು ಪತ್ರೆ ಮನೆಗಳು, ಮನೆಗಳು ಗಾಳಿಗೆ ಬಿದ್ದು ನಷ್ಟ ಉಂಟಾಗಿರುವ ಘಟನೆ ನಡೆದಿದೆ, ಬೋಮ್ಮನಹಳ್ಳಿ ಗ್ರಾಮದಲ್ಲಿ ಮುರುಗೆಪ್ಪ ಚೌಗುಲಾ ಅವರ ೧೦೦೦ ಬಾಳೆ ಗಿಡ ನೆಲಕ್ಕೆ ಉರುಳಿವೆ, ನಾಗಠಾಣ ಗ್ರಾಮದ ಅರವಿಂದ ಗುಣಕಿ, ರಾಜಕುಮಾರ ಗುಣಕಿ, ಗಂಗಾಧರ ಗುಣಕಿ, ಆಕಾಶ ಗುಣಕಿ ಅವರ ೮ ಟ್ರ್ಯಾಕ್ಟರನಷ್ಟು ಕಣಿಕಿ, ೩ ಚೀಲ ಗೋಧಿ, ಪೈಪ ಸೇರಿದಂತೆ ಇತರ ನಷ್ಟ ಉಂಟಾಗಿದೆ, ಗುಣಕಿ ಗ್ರಾಮದಲ್ಲಿ ಸಿಡಿಲಿಗೆ ೨ ಎತ್ತು ಮೃತಪಟ್ಟು, ೧ ಕುರಿ, ಕೋಳಿ, ಸಹ ಮೃತಪಟ್ಟಿರುವ ಘಟನೆ ನಡೆದಿದೆ ಎನ್ನಲಾಗಿದೆ
ಇದೇರೀತಿಯಾಗಿ ಜಿಲ್ಲೆಯ ಹಲವೆಡೆ ಆಣೆಕಲ್ಲು ಮಳೆ ಹಾಗೂ ಗಾಳಿಯಿಂದಾಗಿ ಸಾಕಷ್ಟು ಪ್ರಮಾಣದ ನಷ್ಟ ಉಂಟಾಗಿರುವುದು ಕಂಡು ಬಂದಿದೆ, ಆದ್ದರಿಂದ ಸಂಬಂಧಿಸಿದ ತಹಶಿಲ್ದಾರರು, ತೋಟಗಾರಿಕೆ, ಕಂದಾಯ ಇಲಾಖೆಯ ಅಧಿಕಾರಿಗಳಿಂದ ವಿಸೃತವಾದ ಸಮೀಕ್ಷಾ ವರದಿಯನ್ನು ತರಿಸಿಕೊಂಡು ಸೂಕ್ತ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಷ್ಟಗೊಂಡ ಪ್ರತಿಯೊಬ್ಬ ರೈತರಿಗೆ ಎಕರೆಗೆ ಸುಮಾರು ೫ ಲಕ್ಷ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.
ಈ ವಿಷಯವನ್ನು ಗಂಭೀರವೆಂದು ಪರಿಗಣಿಸಿ ಜಿಲ್ಲಾಧಿಕಾರಿಗಳು ಜಿಲ್ಲೆಯಾಧ್ಯಂತ ಸಮೀಕ್ಷೆ ಮಾಡಿ ತುರ್ತು ವಿಪತ್ತು ಪರಿಹಾರ ನಿಧಿಯಡಿ ಜಿಲ್ಲಾಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತೇವೆ. ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ಜಿಲ್ಲೆಯ ಎಲ್ಲಾ ರೈತರಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ತಾಲೂಕಾ ಅಧ್ಯಕ್ಷ ಅರುಣಗೌಡ ತೇರದಾಳ, ತಾಲೂಕಾ ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ(ಬ್ಯಾಲ್ಯಾಳ), ತಾಲೂಕಾ ಉಪಾಧ್ಯಕ್ಷ ಪ್ರಕಾಶ ತೇಲಿ, ಜಿಲ್ಲಾ ಸಂಚಾಲಕ ಮಹಾಂತೇಶ ಮಮದಾಪುರ, ಸದಸ್ಯರಾದ ಮಲ್ಲಿಕಾರ್ಜುನ ಮಹಾಂತಮಠ, ತಾಲೂಕ ಯುವ ಘಟಕದ ಅಧ್ಯಕ್ಷರಾದ ಪ್ರಭು ಕಾರಜೋಳ, ನಗರ ಘಟಕದ ಅಧ್ಯಕ್ಷ ಸಂಗಪ್ಪ ಚಲವಾದಿ, ಹಾಜಿಲಾಲ ಖರ್ಜಗಿ, ಅಫಜಲಪುರ ಟಕ್ಕೆ, ಸಂತೋಷ ಮುಡಗಿ, ಗಣೇಶ ತಗಡೆ, ಪ್ರಕಾಶ ಹತ್ತಳ್ಳಿ, ಸಾಹೇಬಣ್ಣ ಕೆರೂರ, ಸಿದ್ದಪ್ಪ ಕೆರೂರ, ಸತೀಶ ಕೆರೂರ, ಓಗೆಪ್ಪ ಬಿರಾದಾರ, ಸೋಮನಾಥ ನಂದಿಕೋಲ, ಶ್ರೀಶೈಲ ಪೂಜಾರಿ, ಅರವಿಂದ ಗುಣಕಿ, ಸಂಗಪ್ಪ ಕೋಣಸಿರಸಗಿ, ರಾಜಕುಮಾರ ಗುಣಕಿ, ಸೇರಿದಂತೆ ಜಂಬಗಿ, ಆಹೇರಿ, ನಾಗಠಾಣ, ದ್ಯಾಬ್ಯಾರಿ ಗ್ರಾಮದ ಉಪಸ್ಥಿತರಿದ್ದರು.

