ದೇವರಹಿಪ್ಪರಗಿ: ಗ್ರಾಮದ ೪ ಮತ್ತು ೫ ನೇ ವಾರ್ಡಿನ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದ ಗ್ರಾಮ ಪಂಚಾಯಿತಿ ಸಿಬ್ಬಂದಿ ವಿರುದ್ಧ ಮಹಿಳೆಯರು ಖಾಲಿ ಕೊಡಗಳನ್ನು ಇಟ್ಟು ಕೂಡಲೇ ನೀರು ಪೂರೈಸಲು ಆಗ್ರಹಿಸಿದರು.
ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಸೋಮವಾರ ಮಹಿಳೆಯರು ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯಿತಿಗೆ ಆಗಮಿಸಿ ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆಯ ಕುರಿತು ಸಿಬ್ಬಂದಿಯ ಗಮನ ಸೆಳೆದರು.
ಈ ಸಂದರ್ಭದಲ್ಲಿ ಅನಸುಬಾಯಿ ಬಿರಾದಾರ ಮಾತನಾಡಿ, ನಮ್ಮ ವಾರ್ಡುಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ನೀರು ಸಮಯಕ್ಕೆ ಸರಿಯಾಗಿ ಪೂರೈಸಲು ಹಲವು ಬಾರಿ ಮನವಿ ಮಾಡಿದರೂ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಹೀಗಾದರೆ ನೀರಿಗಾಗಿ ಮಹಿಳೆಯರು ಯಾರನ್ನು ಕೇಳಬೇಕು? ಗ್ರಾಮದಲ್ಲಿ ೨೫ ಕೊಳವೆಭಾವಿ ಹಾಗೂ ೩ ಭಾವಿಗಳಿದ್ದರೂ ಅವುಗಳಲ್ಲಿ ನೀರಿನ ಕೊರತೆ ಕಂಡು ಬಂದಿದೆ. ಆದ್ದರಿಂದ ಗ್ರಾಮ ಪಂಚಾಯಿತಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನೀರು ಪೂರೈಸಲು ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮುಂದೆ ಉಗ್ರ ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿಸಿ ನಂತರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿ.ವ್ಹಿ.ಪಟ್ಟಣಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಜಯಕರ್ನಾಟಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಪ್ಪಗೌಡ ಬಿರಾದಾರ, ಯಲ್ಲಮ್ಮ ಬಾಗೇವಾಡಿ, ಸಾಬವ್ವ ಯಾಳವಾರ, ಸಾವಿತ್ರಿ ಯರಗಲ್, ಸಿದ್ದವ್ವ ಯಾಳವಾರ, ಶಾಂತಾಬಾಯಿ ತಳವಾರ, ಹುಸೇನಬಿ ಅಂಬಳನೂರ, ಲಕ್ಷ್ಮಿ ಯಾಳವಾರ, ಶಾರದಾ ಬಜಂತ್ರಿ, ರೇಣುಕಾ ಹಡಪದ, ಸಿಬ್ಬಂದಿ ರಫೀಕ್ ಬ್ಯಾಕೋಡ, ಮಾಂತಗೌಡ ಬಿರಾದಾರ, ಬಸಲಿಂಗಪ್ಪ ಬಿರಾದಾರ, ಶಂಕರಗೌಡ ಬಿರಾದಾರ, ಸಂಗನಗೌಡ ಬಿರಾದಾರ ಸಹಿತ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

