ಆಲಮಟ್ಟಿಯಲ್ಲಿ ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪನ ಯಶಸ್ವಿ
ಆಲಮಟ್ಟಿ: ಪ್ರಸಕ್ತ ಸಾಲಿನ ಮೌಲ್ಯಾಂಕನ ಪರೀಕ್ಷೆಗೆ ಸಾಕಷ್ಟು ಅಡೆತಡೆ ಬಂದಿದ್ದರೂ, ಸರ್ಕಾರ ಮೊದಲೇ ನಿರ್ಧರಿಸಿದ ನಿರ್ಧಾರಕ್ಕೆ ಬದ್ದವಾಗಿ ನಿಂತು ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ, ಅದಕ್ಕೆ ಪೂರಕವಾಗಿಯೂ ಶಿಕ್ಷಕರು ಕೂಡಾ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.
ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ 5 ನೇ ವರ್ಗದ ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ನಿಡಗುಂದಿ ತಾಲ್ಲೂಕಿನ ಸರ್ವ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಣದ ಗುಣಮಟ್ಟದ ಕಲಿಕೆಯ ಅಳತೆಗೋಲಿಗೆ ಮೌಲ್ಯಾಂಕನ ಪರೀಕ್ಷೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಯಲಿದೆ ಎಂದರು. ಶಿಕ್ಷಕ ಸಂಘಟನೆಯ ರಾಜ್ಯ ಘಟಕದ ಪ್ರಯತ್ನದ ಫಲವಾಗಿ 2006 ಕ್ಕೂ ಮುಂಚೆ ನೇಮಕಾತಿ ಅಧಿಸೂಚನೆ ಹೊರಡಿಸಿ, 2007 ರಲ್ಲಿ ನೇಮಕಗೊಂಡ ನೌಕರರಿಗೆ ಎನ್ ಪಿಎಸ್ ಬದಲಾಗಿ ಓಪಿಎಸ್ ಜಾರಿಮಾಡಿಸಲಾಗಿದೆ. 7 ವೇತನ ಆಯೋಗದಲ್ಲಿ ಹೆಚ್ಚಿನ ವೇತನ ಶ್ರೇಣಿ ಕೊಡಿಸಲಾಗಿದೆ ಎಂದರು. ಮುಖ್ಯೋಪಾಧ್ಯರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸುವ ಪ್ರಯತ್ನ ಮುಂದುವರೆದಿದೆ ಎಂದರು.
ಈ ಬಾರಿ ಪ್ರತಿ ಸರ್ಕಾರಿ ಶಾಲೆಗಳಿಗೆ ವಾರ್ಷಿಕ ಶಾಲಾ ಅನುದಾನ ಕನಿಷ್ಠ 45,000 ರೂಗಳನ್ನು ಕೊಡಿಸಲಾಗಿದೆ. ಹೆಚ್ಚು ಮಕ್ಕಳಿದ್ದಲ್ಲಿ ಆ ಅನುದಾನ ಇನ್ನೂ ಹೆಚ್ಚಿದೆ ಎಂದರು. ಸಂಘಟನೆಯ ಪ್ರಯತ್ನದ ಫಲವಾಗಿ ಕಳೆದ ವರ್ಷ ಸುಮಾರು 30 ಸಾವಿರಕ್ಕೂ ಪ್ರಾಥಮಿಕ ಶಾಲಾ ಶಿಕ್ಷಕರು ವರ್ಗಾವಣೆ ಹೊಂದಿದ್ದಾರೆ. ಈಗ ಮತ್ತೆ ವರ್ಗಾವಣೆಗೆ ಅನುಮತಿ ಕೊಡಿಸಲಾಗಿದೆ. ಈಗಾಗಲೇ ವರ್ಗಾವಣೆಯ ಅಧಿಸೂಚನೆಯೂ ಹೊರಬಂದಿದೆ ಎಂದರು.
1000 ಮಕ್ಕಳಿಗೆ ಸಮವಸ್ತ್ರ: ಸರ್ಕಾರ ನೀಡುವ ಎರಡು ಜತೆ ಉಚಿತ ಸಮವಸ್ತ್ರದ ಜತೆ, ಬೆಂಗಳೂರಿನ ಸಂಘಟನೆಯೊಂದನ್ನು ಸಂರ್ಪಕಿಸಲಾಗಿದ್ದು, ಅವರು ತಾಲ್ಲೂಕಿನ 1000 ಸರ್ಕಾರಿ ಶಾಲೆಯ ಮಕ್ಕಳಿಗೆ ಒಂದು ಜತೆ ಸಮವಸ್ತ್ರ ನೀಡಲು ಒಪ್ಪಿದ್ದು, ಅದನ್ನು ಜೂನ್ ನಲ್ಲಿ ಕೊಡಿಸಲಾಗುವುದು ಎಂದು ನುಗ್ಗಲಿ ತಿಳಿಸಿದರು.
ವೈಯಕ್ತಿಕವಾಗಿ 100 ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಕೊಡಿಸಲಾಗುವುದು ಎಂದರು. ಈಗಾಗಲೇ ಇನ್ಫೋಸಿಸ್ ಫೌಂಡೇಶನ್ ಸಂರ್ಪಕಿಸಿ 50 ಲಕ್ಷ ರೂ ವೆಚ್ಚದಲ್ಲಿ ತಾಲ್ಲೂಕಿನ ಪ್ರತಿ ಶಾಲೆಗೂ ಕಂಪ್ಯೂಟರ್ ನೀಡಲಾಗಿದೆ ಎಂದರು.
ಶಿಕ್ಷಕ ಸಂಘಟನೆಯ ನಿಡಗುಂದಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸಲೀಂ ದಡೆದ ಮಾತನಾಡಿ, ತಾಲ್ಲೂಕಿನ ಪ್ರತಿ ಶಿಕ್ಷಕರಿಗೂ ಈ ಬಾರಿ ಉಚಿತವಾಗಿ ಆದಾಯ ತೆರಿಗೆಯ ಮಾಹಿತಿ ನೀಡಲಾಗಿದೆ. ಗುರುತಿನ ಚೀಟಿ ನೀಡಲಾಗಿದೆ. ಈಗ ಪ್ರತಿ ಶಿಕ್ಷಕರಿಗೂ ಸೇವಾ ಪುಸ್ತಕದ ಆಧಾರದಲ್ಲಿ ಜ್ಯೋತಿ ಸಂಜೀವಿನಿಯ ಆರೋಗ್ಯ ಕಾರ್ಡ್ ನ್ನು ಜೂನ್ ವೇಳೆಗೆ ನೀಡಲಾಗುವುದು ಎಂದರು. ತಾಲ್ಲೂಕಿನ ಪ್ರತಿ ಶಿಕ್ಷಕರ ಬಾಕಿಯಿರುವ ಸಂಪೂರ್ಣ ಅರಿಅರ್ಸ್ ಹಣದ ಬಿಲ್ ಮಾಡಿಸಲಾಗಿದೆ ಎಂದರು.
ವೇದಿಕೆಯಲ್ಲಿ ಸಂಘಟನೆಯ ಮುಖಂಡರಾದ ಆರ್.ಎಸ್. ಕಮತ, ಸಲೀಂ ದಡೆದ, ಬಿ.ಎಸ್. ಯರವಿನತೆಲಿಮಠ, ಎಂ.ಎಂ. ಮುಲ್ಲಾ, ಮುತ್ತು ಹೆಬ್ಬಾಳ, ಪವಾಡೆಪ್ಪ ಚಲವಾದಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ ಹುರಕಡ್ಲಿ, ಭಾಷಾಸಾಬ್ ಮನಗೂಳಿ, ಬಿ.ಐ. ಖ್ಯಾಡಿ, ಎಸ್.ಐ. ಕಾರಕೂನ ಮತ್ತೀತರರು ಇದ್ದರು.

