ರೇವಣಸಿದ್ಧೇಶ್ವರ ಶ್ರೀಗಳ 38ನೇ ಪುಣ್ಯಾರಾಧನೆ | ಸಾಮೂಹಿಕ ವಿವಾಹ | ದಾಂಪತ್ಯ ಜೀವನಕ್ಕೆ ಕಾಲಿಟ್ಟ 21 ಜೋಡಿ
ಝಳಕಿ: ಸಾಮೂಹಿಕ ವಿವಾಹ ಬಡವರ ಮದುವೆ ಅಲ್ಲ, ಅದು ಭಾಗ್ಯವಂತರ ಮದುವೆ ಎಂದು ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾದ್ಯ ಭಗವತ್ ಪಾದಂಗಳ ಹೇಳಿದರು.
ಸಮೀಪದ ಸುಕ್ಷೇತ್ರ ಜೇವೂರ ಗ್ರಾಮದ ಹಠಯೋಗಿ ರೇವಣಸಿದ್ಧೇಶ್ವರ ಶ್ರೀಗಳ 38ನೇ ಪುಣ್ಯಾರಾಧನೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಭಾಗದ ಜೇವೂರ ಆಧ್ಯಾತ್ಮಿಕ, ಧಾರ್ಮಿಕ, ಸಮಾಜ ಮುಖಿ ಕಾರ್ಯಗಳಿಂದ ಪ್ರಸಿದ್ಧವಾಗಿದೆ. ಸರಳ ಸಾಮೂಹಿಕ ವಿವಾಹದಲ್ಲಿ ಹಸಿಮಣೆ ಏರಿದ ಜೋಡಿಗಳಿಗೆ ಸಮಾಜದಲ್ಲಿ ಮಾದರಿ ವೈವಾಹಿಕ ಜೀವನ ನಡೆಸುವಂತೆ ಸಲಹೆ ನೀಡಿದರು.
ಮಹಾಂತಯ್ಯ ಸ್ವಾಮಿಗಳು ಮಾತನಾಡಿ, ಸಾಲ ಮಾಡಿ ವೈಯಕ್ತಿಕವಾಗಿ ಮದುವೆ ಮಾಡಿಕೊಂಡು ಸಾಲ ತೀರಿಸಲು ಗೋಳಾಡುವುದಕ್ಕಿಂತ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಂಡರೆ ಸುಖಕರ ಜೀವನ ಸಾಗಿಸಬಹುದು ಎಂದರು.
ಹಿರೂರ ಜಯಸಿದ್ದೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿ, ನವ ಜೋಡಿಗಳು ನೂರು ಕಾಲ ಸುಖಕರವಾಗಿ ಬಾಳಲಿ ಎಂದು ಆಶೀರ್ವದಿಸಿದರು.
21 ನವ ಜೋಡಿಗಳಿಗೆ ಹತ್ತಳ್ಳಿ -ಹವಿನಾಳ ಗುರು ಗುರುಪಾದೇಶ್ವರ ಶಿವಾಚಾರ್ಯರು ರಾಚೋಟೇಶ್ವರ ಶಿವಾಚಾರ್ಯರು, ಮಲ್ಲಿಕಾರ್ಜುನ ಶಿವಾಚಾರ್ಯರು, ರುದ್ರಮುನಿದೇವರು ಕರಿಬಸವೇಶ್ವರ ಹೀರೆಮಠ, ಮಾತೋಶ್ರೀ ಶವಶರಣೆ ಮೈತ್ರಾದೇವಿ ಆಶೀರ್ವದಿಸಿದರು.
ಇಂಡಿ ಸಿಡಿಪಿಒ ಶಾರದಾ ಇಂಡಿ, ವಿಠ್ಠಲಗೌಡ ಪಾಟೀಲ, ರಾಘವೇಂದ್ರ ಕಾಪಸೆ, ಗ್ರಾಪಂ ಸದಸ್ಯ ಸತೀಶ ಹತ್ತಿ, ರಾಜಶೇಖರ ಪಾಟೀಲ, ಸಿದ್ದರಾಮ ಗಟ್ಟನಟಿ, ಸಿದ್ದಣ ಬಿರಾದಾರ, ಈರಣ್ಣ ಬಿರಾದಾರ ಸೇರಿದಂತೆ ಇತರರು ಇದ್ದರು.

