ನರೇಗಾ ಯೋಜನೆಯಡಿ ದಿನಗೂಲಿ ಹಣ ರೂ.೩೧೬ ರಿಂದ ರೂ.೩೪೯ ಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶ
ವಿಜಯಪುರ: ಗ್ರಾಮೀಣ ಪ್ರದೇಶದಲ್ಲಿನ ಜನರು ವಲಸೆ ಹೋಗುವುದನ್ನು ತಪ್ಪಿಸಲು ಹಮ್ಮಿಕೊಂಡ ಮಹತ್ವಾಕಾಂಕ್ಷಿ ಯೋಜನೆ ನರೇಗಾ. ಈಗ ನರೇಗಾ ಯೋಜನೆಯಡಿ ಕೆಲಸ ಮಾಡುವು ಕಾರ್ಮಿಕರಿಗೆ ದಿನಗೂಲಿಯ ಮೊತ್ತ ೩೪೯ರೂ ಮಾಡಲಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ರಿಶಿ ಆನಂದ ಕರೆ ನೀಡಿದ್ದಾರೆ.
ಶನಿವಾರ ಪತ್ರಿಕಾ ಪ್ರಕಟಣೆಯ ಮೂಲಕ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತಾಲಯದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ಕೆಲಸ ಒದಗಿಸಿ ವಲಸೆ ತಡೆಯುವ ಉದ್ದೇಶದಿಂದ “ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ/ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ” ಅಭಿಯಾನವನ್ನು ಮಾರ್ಚ್ ೧೫ ರಿಂದ ಮೇ ೩೧ ೨೦೨೪ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
೨೦೨೩-೨೪ನೇ ಸಾಲಿನಲ್ಲಿ ಮಳೆ ಕೊರತೆಯಿಂದ ವಿಜಯಪುರ ಜಿಲ್ಲೆಯ ೧೩ ತಾಲೂಕುಗಳನ್ನೂ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಕೂಲಿಕಾರ್ಮಿಕರ, ರೈತರ ಕೃಷಿ ಚಟುವಟಿಕೆಗಳು ಕುಂಠಿತವಾಗಿರುವ ಕಾರಣದಿಂದ ಗ್ರಾಮೀಣ ಪ್ರದೇಶದಲ್ಲಿ ಅಕುಶಲ ಕೂಲಿಕಾರ್ಮಿಕರ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿರುತ್ತದೆ. ಇಂತಹ ಕುಟುಂಬಗಳಿಗೆ ಪ್ರತಿದಿನ ರೂ.೩೪೯ ಕೂಲಿ ಜೊತೆಗೆ ೧೦೦ ದಿನಗಳ ಕೆಲಸ ನೀಡಲಾಗುತ್ತದೆ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಮುಂದಿನ ೨೦೨೪-೨೫ ನೇ ಸಾಲಿಗೆ ವಿಜಯಪುರ ಜಿಲ್ಲೆಗೆ ೪೨ ಲಕ್ಷ ಮಾನವ ದಿನಗಳನ್ನು ಸೃಜಿಸಲು ಗುರಿ ಹೊಂದಲಾಗಿದೆ. ಗುರಿ ಹೊಂದಿದ ಮಾನವದಿನಗಳನ್ನು ಸೃಜಿಸಲು ಗ್ರಾಮ ಪಂಚಾಯತಿ ಕ್ರಿಯಾ ಯೋಜನೆಗಳನ್ನು ಈಗಾಗಲೇ ಅನುಮೋದಿಸಲಾಗಿದೆ. ಅನುಮೋದನೆಯಾದ ಕಾಮಗಾರಿಗಳಲ್ಲಿನ ಸಮುದಾಯ ಹಾಗೂ ಕೂಲಿ ಆಧಾರಿತ ಕಾಮಗಾರಿಗಳನ್ನು ಮಾತ್ರ ಆರ್ಥಿಕ ವರ್ಗದ ಏಪ್ರಿಲ್, ಮೇ ಮತ್ತು ಜೂನ್ ಮಾಹೆಗಳಲ್ಲಿ ಅನುಷ್ಠಾನಗೊಳಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ತಲೆದೋರಿರುವ ಬರದಿಂದ ಗ್ರಾಮೀಣ ಪ್ರದೇಶದಿಂದ ಅನೇಕ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸ್ಥಳೀಯವಾಗಿ ಅಕುಶಲ ಕೆಲಸ ಒದಗಿಸಲಾಗುತ್ತಿದೆ. ಜನರು ಉದ್ಯೋಗ ಅರಸಿ ವಲಸೆ ಹೋಗುತ್ತಿರುವುದನ್ನು ತಡೆಯಲು, ಮುಂಗಾರು ಆರಂಭಕ್ಕೂ ಮುನ್ನ ಹೆಚ್ಚಿನ ಜನರಿಗೆ ಸ್ಥಳೀಯವಾಗಿ ನಿಗದಿತ ಸಮಯದಲ್ಲಿ ನಿರಂತರ ಕೆಲಸ ಒದಗಿಸುವುದು ಅಗತ್ಯವಾಗಿರುತ್ತದೆ. ಬೇಸಿಗೆ ಬಂದರೆ ಗ್ರಾಮಗಳನ್ನು ತೊರೆದು ಬೇರೆ ರಾಜ್ಯಗಳಿಗೆ ಹಾಗೂ ಜಿಲ್ಲೆಗಳಿಗೆ ಜನರು ವಲಸೆ ಹೋಗುವುದನ್ನು ತಡೆಗಟ್ಟುವುದು ಹಾಗೂ ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೆ ನಿರಂತರ ಉದ್ಯೋಗ ಒದಗಿಸಿ ಜೀವನ ಸಂಕಷ್ಟ ನೀಗಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಉದ್ಯೋಗ ಚೀಟಿ ಹೊಂದಿರುವ ಎಲ್ಲ ಕುಟುಂಬಗಳು ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ಸ್ಥಳೀಯವಾಗಿ ಉದ್ಯೋಗ ಪಡೆದು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.
ಮಹಾತ್ಮಗಾಂಧಿ ನರೇಗಾ ಯೋಜನೆಯ ಉದ್ದೇಶಗಳು:
ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ ೧೦೦ ದಿನಗಳಿಗೆ ಕಡಿಮೆ ಇಲ್ಲದಂತೆ ಅಕುಶಲ ಉದ್ಯೋಗ ಒದಗಿಸುವುದು.
ದೀರ್ಘಕಾಲಿಕ ಬಾಳಿಕೆ ಬರುವ ಆಸ್ತಿಗಳ ಸೃಜನೆಯೊಂದಿಗೆ ಗ್ರಾಮೀಣರ ಜೀವನೋಪಾಯಕ್ಕೆ ಅವಕಾಶಗಳನ್ನು ಕಲ್ಪಿಸುವುದು.
ಸ್ವಯಂ ಪ್ರೇರಿತವಾಗಿ ಸಾಮಾಜಿಕ ಒಳಗೊಳ್ಳುವಿಕೆಯನ್ನು ಖಚಿತಪಡಿಸುವುದು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲಪಡಿಸುವುದು.
“ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ/ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ” ಅಭಿಯಾನದಲ್ಲಿ ಕೈಗೊಳ್ಳುತ್ತಿರುವ ಕ್ರಮಗಳು:
ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ತಾಲೂಕು ಐಇಸಿ ಸಂಯೋಜಕರು, ಗ್ರಾಮ ಕಾಯಕ ಮಿತ್ರ, ತಾಂಡಾ ರೋಜಗಾರ ಮಿತ್ರ ಹಾಗೂ ಕ್ರಿಯಾಶೀಲ ಕಾಯಕಬಂಧುಗಳ ಮೂಲಕ ಗ್ರಾಮಗಳಲ್ಲಿ ಪ್ರತಿ ಮನೆ-ಮನೆ ಭೇಟಿ ಕಾರ್ಯ ನಡೆಯುತ್ತಿದೆ.
ಪ್ರತಿ ಮನೆ-ಮನೆಗಳಿಗೆ ಭೇಟಿ ನೀಡಿ ನಮೂನೆ-೬ ನ್ನು ವಿತರಿಸುವುದು ಮತ್ತು ಕೂಲಿಕಾರರಿಂದ ಕೆಲಸಕ್ಕಾಗಿ ಬೇಡಿಕೆ ಪಡೆಯಲಾಗುತ್ತಿದೆ.
ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದ ಕೂಲಿಕಾರರಿಗೆ ನಿರಂತರವಾಗಿ ಉದ್ಯೋಗ ಒದಗಿಸುವುದು.
ಯೋಜನೆಯಡಿ ಪಾಲ್ಗೊಳ್ಳಲು ಪರಿಶಿಷ್ಟ ಜಾತಿ/ಪಂಗಡ, ಭೂ ರಹಿತ ಕುಟುಂಬ, ಸಣ್ಣ ಮತ್ತು ಅತೀ ಸಣ್ಣ ರೈತರು, ವಿಶೇಷ ಚೇತನರು, ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಉತ್ತೇಜಿಸಲಾಗುತ್ತಿದೆ.
ಗ್ರಾಮೀಣ ಜನರಿಗೆ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಉದ್ಯೋಗ ಒದಗಿಸಿ ವಲಸೆ/ಗುಳೆ ಹೋಗುವುದನ್ನು ತಡೆಗಟ್ಟುವುದು.
ಸ್ವ-ಸಹಾಯ ಗುಂಪುಗಳ ಮಹಿಳೆಯರಲ್ಲಿ ಯೋಜನೆಯ ಕುರಿತು ಅರಿವು ಮೂಡಿಸಿ, ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು.
ಉದ್ಯೋಗ ಚೀಟಿ ಹೊಂದಿರುವ ೨೦ ರಿಂದ ೩೦ ಕೂಲಿಕಾರರ ಗುಂಪುಗಳನ್ನು ರಚಿಸಿ ಕಾಯಕ ಬಂಧುಗಳನ್ನು (ಮೇಟ್) ಗುರುತಿಸುವುದು. ಮಹಿಳೆಯರಿಗೆ ಪ್ರತ್ಯೇಕ ಗುಂಪುಗಳನ್ನು ರಚಿಸಿ, ಮಹಿಳಾ ಕಾಯಕ ಬಂಧು (ಮೇಟ್)ಗಳನ್ನು ಗುರುತಿಸುವುದು.
ಮಹಿಳಾ ಭಾಗವಹಿಸುವಿಕೆಯನ್ನು ಕಡ್ಡಾಯವಾಗಿ ೬೦% ರಷ್ಟು ಹೆಚ್ಚಿಸುವುದು. ಇದಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸುವುದು. ಮಹಿಳಾ ಸ್ವ-ಸಹಾಯ ಸಂಘಗಳನ್ನು ಒಳಗೊಂಡು ಕಾಯಕ ಸಂಘಗಳ ರಚನೆ ಮಾಡುವುದು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯೋಜನೆಯ ಕುರಿತು ವ್ಯಾಪಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ಮಹಿಳಾ ಭಾಗವಹಿಸುವಿಕೆ ಗುರಿ:
ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಬರಗಾಲ ಘೋಷಣೆ ಆಗಿರುವುದರಿಂದ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಯಾವುದೇ ಉದ್ಯೋಗ ದೊರೆಯದೇ ಇರುವ ಕಾರಣ ಗ್ರಾಮೀಣ ಜನರಿಗೆ ಮುಖ್ಯವಾಗಿ ಮಹಿಳೆಯರಿಗೆ ಮನವರಿಕೆ ಮಾಡುವ ಮೂಲಕ ನರೇಗಾ ಯೋಜನೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸಲಾಗುತ್ತಿದೆ. ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯಗಳ ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷವಾಗಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣವನ್ನು ಹೆಚ್ಚಿಸಲು ವಿಶೇಷ ಒತ್ತು ನೀಡಲಾಗಿದೆ. ಮಹಿಳಾ ಭಾಗವಹಿಸುವಿಕೆ ಶೇ.೬೦.೦೦ರಷ್ಟು ಹೆಚ್ಚಿಸಲು ಗುರಿ ಹೊಂದಲಾಗಿದೆ.
ಕಾಮಗಾರಿ ಸ್ಥಳದಲ್ಲಿ ಸಿಗುವ ಸೌಲಭ್ಯಗಳು:
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ.
ನೆರಳಿನ ವ್ಯವಸ್ಥೆ.
ಪ್ರಥಮ ಚಿಕಿತ್ಸಾ ವ್ಯವಸ್ಥೆ.
ಶಿಶುಪಾಲನಾ ವ್ಯವಸ್ಥೆ :
ನರೇಗಾ ಕೂಲಿಕಾರರ ೦ ರಿಂದ ೩ ವರ್ಷದೊಳಗಿನ ಮಕ್ಕಳಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಕೂಸಿನ ಮನೆ ಎಂಬ ಶೀರ್ಷಿಕೆಯಡಿ ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಮಕ್ಕಳನ್ನು ಆರೈಕೆ ಮಾಡಲು ಮಕ್ಕಳ ಆರೈಕೆದಾರರನ್ನು ಗುರುತಿಸಲಾಗಿದೆ. ನರೇಗಾ ಕೂಲಿಕಾರರು ಮಕ್ಕಳನ್ನು ಕೂಸಿನ ಮನೆಗಳಲ್ಲಿ ಬಿಟ್ಟು ಕೆಲಸಕ್ಕೆ ಹೋಗಲು ಅವಕಾಶವಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಆಹಾರ ಪೂರೈಕೆ ಸಹ ಮಾಡಲಾಗುತ್ತಿದೆ.
ನರೇಗಾ ಯೋಜನೆಯಡಿ ಅನುಷ್ಠಾ ಮಾಡಬಹುದಾದ ಕಾಮಗಾರಿಗಳು:
ವೈಯಕ್ತಿಕ ಕಾಮಗಾರಿಗಳು: ಬದು ನಿರ್ಮಾಣ, ಕೃಷಿ ಹೊಂಡ, ಇಂಗು ಗುಂಡಿ(ಸೋಕ್ ಫಿಟ್), ಕೊಳವೆ ಬಾವಿ ಮರು ಪೂರಣ ಘಟಕ, ದನದ/ಕುರಿ/ಆಡಿನ ಶೆಡ್, ತೋಟಗಾರಿಕೆ ಬೆಳೆಗಳಾದ ಮಾವು, ಚಿಕ್ಕು, ನಿಂಬೆ, ದಾಳಿಂಬೆ, ತೆಂಗು, ನುಗ್ಗೆ, ಗುಲಾಬಿ, ದ್ರಾಕ್ಷಿ ಕೃಷಿಗೆ ಅವಕಾಶ.
ಸಮುದಾಯ ಕಾಮಗಾರಿಗಳು: ಸಮಗ್ರ ಕೆರೆ ಅಭಿವೃದ್ಧಿ, ಸಾರ್ವಜನಿಕ ನಾಲಾ/ಬಾಂದಾರ ಹೂಳೆತ್ತುವುದು, ಸಮಗ್ರ ಶಾಲಾ ಅಭಿವೃದ್ಧಿ(ಆಟದ ಮೈದಾನ, ಕಂಪೌಂಡ್, ಶೌಚಾಲಯ, ಅಡುಗೆ ಕೋಣೆ ನಿರ್ಮಾಣ), ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು, ಸ್ಮಶಾನ ಅಭಿವೃದ್ಧಿ, ಅರಣ್ಯೀಕರಣ ಮತ್ತು ಅರಣ್ಯ ಭೂಮಿಯಲ್ಲಿ ಟ್ರೆಂಚ್ ನಿರ್ಮಾಣ.
ಕೆಲಸದಲ್ಲಿ ಶೇ.೫೦ರಷ್ಟು ರಿಯಾಯತಿ ಮತ್ತು ಪೂರ್ಣ ಕೂಲಿ:
ಬಾಣಂತಿ ಮಹಿಳೆಯರಿಗೆ, ಗರ್ಭಿಣಿಯರಿಗೆ, ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ನರೇಗಾ ಕೂಲಿಯಲ್ಲಿ ಅರ್ಧದಷ್ಟು ಕೆಲಸ ಪೂರ್ತಿ ಕೂಲಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನರೇಗಾ ಸಹಾಯವಾಣಿ ಸಂಖ್ಯೆ: ೮೨೭೭೫೦೬೦೦೦ ಹಾಗೂ ಜಿಲ್ಲಾ ಪಂಚಾಯತಿಯ ನರೇಗಾ ಸಹಾಯವಾಣಿ ಸಂಖ್ಯೆ: +೯೧ ೯೪೮೦೮ ೩೧೬೯೯ ಗೆ ಸಂಪರ್ಕಿಸಬಹುದು ಮತ್ತು ತಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


