ಮುರುಘೇಂದ್ರ ಶಿವಯೋಗಿಗಳ ಶತಮಾನೋತ್ಸವ | ಮೂರ್ತಿ ಪ್ರತಿಷ್ಠಾಪನೆ | ಗೋಪುರ ಕಳಸಾರೋಹಣ | ಧರ್ಮಸಭೆ
*– ರೇಖಾ ಪಿ.ಗದ್ಯಾಳ*
ತಿಕೋಟಾ: ಹೊಗಳಿಕೆ ಮತ್ತು ತೆಗಳಿಕೆಗಳು ಜೀವನದ ಅವಿಭಾಜ್ಯ ಅಂಗವಾಗಿವೆ. ಲೋಕದಲ್ಲಿ ಹುಟ್ಟಿದ ಮೇಲೆ ಸ್ತುತಿ ಹಾಗೂ ನಿಂದನೆಗಳು ಬಂದೇ ಬರುತ್ತವೆ. ಆಗ ಸಮಾಧಾನ ಚಿತ್ತದಿಂದ ಸ್ವೀಕರಿಸುವ ಗುಣ ಇರಬೇಕು. ಆ ಗುಣಗಳು ಮಹಾತ್ಮರಲ್ಲಿ ಇರುತ್ತವೆ ಎಂದು ಶ್ರೀಶೈಲ್ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕನಮಡಿ ಗ್ರಾಮದಲ್ಲಿ ಮುರುಘೇಂದ್ರ ಶಿವಯೋಗಿಗಳ ಶತಮಾನೋತ್ಸವ, ಮೂರ್ತಿ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ ನಿಮಿತ್ಯ ಶನಿವಾರ ನಡೆದ ಧರ್ಮ ಚಿಂತನೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಶಿವಯೋಗಿಗಳಿಗೆ ಸ್ತುತಿ, ಗುಣಗಾನ ಹಾಗೂ ಸೇವೆ ಮಾಡಿದರೆ ಪುಣ್ಯ ಬರುವದು. ನಿಂದನೆ, ಹಿಂಸೆ ಹಾಗೂ ದುಃಖ ಮಾಡಿದರೆ ಪಾಪದ ಫಲ ದೊರೆಯುವದು. ಶಿವಯೋಗಿಗಳು ನಿರ್ಲಿಪ್ತ ಮನೋಭಾವದಿಂದ ಇರುತ್ತಾರೆ. ಯಾರೇ ನಿಂದನೆ ಮಾಡಿದರೂ ನಾವು ಸ್ವೀಕರಿಸದೇ ಬಿಟ್ಟು ಬಿಡಬೇಕು. ಈ ಗುಣ ಮಹಾತ್ಮರಲ್ಲಿ ಇರುತ್ತದೆ. ಅಂತಹ ಎತ್ತರದ ಸ್ಥಾನದಲ್ಲಿ ಮುರುಘೇಂದ್ರ ಶಿವಯೋಗಿಗಳು ಇದ್ದಾರೆ ಎಂದು ಬಣ್ಣಿಸಿದರು.
ಕಣ್ಣು ಎರಡಾದರೂ ನೋಡುವ ನೋಟ ಒಂದೇ, ಸಮಾಜದ ಕಲ್ಯಾಣವೇ ಮೂಲ ಧ್ಯೇಯವಾಗಿದೆ. ಲಕ್ಷಾಂತರ ಭಕ್ತರು ಶ್ರೀಶೈಲ್ ಕಡೆ ಹೊರಟಿದ್ದರೆ ನಾವು ನಿಮ್ಮ ಕಡೆ ಬಂದಿದ್ದೇವೆ, ಇಲ್ಲಿಯ ಧಾರ್ಮಿಕ ಸಂಬಂಧ ಗಟ್ಟಿಯಾಗಿದೆ. ಕನಮಡಿಯ ಕೀರ್ತಿ ಜಗತ್ತಿನೆಡೆ ಪಸರಿಸಲಿ ಎಂದು ಶುಭ ಹಾರೈಸಿದರು.
ಕನ್ನೂರ ಸೋಮನಾಥ ಶಿವಾಚಾರ್ಯ ಮಾತನಾಡಿ, ಗುಡಿಯ ದೇವರಕ್ಕಿಂತ ಮನೆಯಲ್ಲಿ ಜೊತೆಗಿರುವ ತಂದೆ ತಾಯಿಯೇ ದೇವರು. ಅನ್ನ ಕೊಡುವ ರೈತ, ದೇಶ ಕಾಯುವ ಸೈನಿಕ ಈ ದೇಶಕ್ಕೆ ಅತಿ ಮುಖ್ಯ ಎಂದರು.
ಪ್ರವಚನಕಾರ ಬಾಬುರಾವ ಮಹಾರಾಜ ಮಾತನಾಡಿ ಜಗತ್ತಿನಲ್ಲಿ ಅಳುವ , ನಗುವ ಮಾತನಾಡುವ ಪ್ರಾಣಿ ಮನುಷ್ಯ. ಇದು ಭಾವೈಕ್ಯತೆಯ ಕಾರ್ಯಕ್ರಮವಾಗಿದೆ ಎಂದರು.
ವಿರಕ್ತಮಠದ ವಿಜಯಕುಮಾರ ಸ್ವಾಮೀಜಿ, ಮಹಾರಾಷ್ಟ್ರದ ಶಂಭುಲಿಂಗ ಶಿವಾಚಾರ್ಯ, ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ, ದಾದಪೀರ ದರ್ಗಾ ಹಜರತ್ ಸೈಯದ್ ಹೈದರವಲಿ ಖಾದರಿ ಸಜ್ಜಾದ ನಾಸಿನ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿವಲಿಂಗ ಶಿವಾಚಾರ್ಯ, ಗುರುಪಾದೇಶ್ವರ ಶಿವಾಚಾರ್ಯ, ಶಿವಬಸವ ಶಿವಾಚಾರ್ಯ,ಸುಭಾಸಗೌಡ ಪಾಟೀಲ, ಎಂ.ಆರ್.ತುಂಗಳ, ಶಿವಪುತ್ರ ಅವಟಿ, ಶಂಕರಗೌಡ ಬಿರಾದಾರ, ಅಶೋಕ ಶಿರಡೋಣ, ಧರೇಪ್ಪ ಬಿರಾದಾರ, ಭೀಮರಾವ ಕೊಂಡಿ, ಮಲ್ಲಯ್ಯ ಹಿರೇಮಠ, ಸಂತೋಷ ಮಠಪತಿ, ಈರಯ್ಯ ಮಠಪತಿ, ಶರಣು ಅವಟಿ, ಆನಂದಪ್ಪ ಬಸರಗಿ, ಸಂಗನಬಸವೇಶ್ವರ ಸ್ವಾಮೀಜಿ, ಬ್ರಹ್ಮದೇವರು ಜಮ್ಮನದ್ದಿನ್ನಿ ಇದ್ದರು.
ಸ್ವಾಗತವನ್ನು ಶ್ರೀಶೈಲ ವೀರಕ್ತಮಠ, ನಿರೂಪಣೆ ಚನ್ನಯ್ಯ ಮಠಪತಿ, ವಂದನಾರ್ಪಣೆಯನ್ನು ಎನ್.ಕೆ.ಬೀಳೂರ ನೆರವೇರಿಸಿದರು.

