ಚುನಾವಣಾ ಬಾಂಡ್ ಮೂಲಕ ಕಾಂಗ್ರೆಸ್ & ಬಿಜೆಪಿಗೆ ತಲಾ ಐದು ಕೋಟಿ ರೂ. ದೇಣಿಗೆ
ವಿಜಯಪುರ: ಹೊನ್ನಾವರದ ಮೀನುಗಾರರ ಪರಿಸ್ಥಿತಿ ಪ್ರತಿದಿನ ಶೋಚನಿಯವಾಗ್ತಿದೆ. ಈ ನಡುವೆ ಮೀನುಗಾರರ ವಿರೋಧದ ನಡುವೆಯೂ ಬಂದರು ನಿರ್ಮಾಣ ಮಾಡುತ್ತಿರುವ ಹೊನ್ನಾವರ ಖಾಸಗಿ ಬಂದರು ಲಿಮಿಟೆಡ್ (HPPL) ಸಂಸ್ಥೆಯ ಮಾತೃ ಸಂಸ್ಥೆ ಚುನಾವಣಾ ಬಾಂಡ್ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿಗೆ ತಲಾ ಐದು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ ಎಂದು ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ
ಡಾ. ಗೌತಮ್ ಆರ್ ಚೌಧರಿ ಆರೋಪಿಸಿದ್ದಾರೆ.
ಸುಪ್ರೀಂ ಕೋರ್ಟ್ ಕಟ್ಟು ನಿಟ್ಟಾಗಿ ಮಾಹಿತಿ ನೀಡುವಂತೆ ತಿಳಿಸಿದ ಬಳಿಕ ಯಾವೆಲ್ಲಾ ಪಕ್ಷಗಳಿಗೆ ದೇಣಿಗೆ ಸಂದಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.GVPR Engineers ಲಿಮಿಟೆಡ್ ಸಂಸ್ಥೆ ೨೦೨೪ ರ ಜನವರಿಯಲ್ಲಿ ನೀಡಿದ 16996, 16994, 16998, 16992, 16990, ಬಾಂಡ್ ಸಂಖ್ಯೆಯ ದೇಣಿಗೆಗಳು ಕಾಂಗ್ರೆಸ್ ಅಧ್ಯಕ್ಷರ ಖಾತೆಗೆ ಸೇರಿವೆ. ಈ ಕಂಪನಿ ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿದ ಬಳಿಕ ಮೀನುಗಾರರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಜೋರಾಗಿಯೇ ನಡೆಯುತ್ತಿದೆ. ಸ್ಥಳೀಯರು ವರ್ಷಗಳಿಂದ ವಿರೋಧಿಸುತ್ತಾ ಬಂದಿದ್ದರೂ ಬಂದರು ಯೋಜನೆಯ ಕಾಮಗಾರಿಗಳು ನಡೆಯುತ್ತಲೇ ಇದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಲೇ ಬೇಕು. ಈ ಕೂಡಲೇ ಈ ಕಾಮಗಾರಿ ಕೆಲಸಗಳು ನಿಲ್ಲಬೇಕು. ಸರಕಾರ ಇನ್ನಾದರೂ ಮೀನುಗಾರರ ಬೇಡಿಕೆಗೆ ಸ್ಪಂದಿಸಿ ಅವರ ನೆರವಿಗೆ ಧಾವಿಸಬೇಕೆಂದು ಡಾ.ಗೌತಮ್ ಚೌಧರಿ ಆಗ್ರಹಿಸಿದ್ದಾರೆ.

