ಮಹಾ ದಾಸೋಹಿ ಶರಣಬಸವೇಶ್ವರ 57 ಜಾತ್ರಾಮಹೋತ್ಸವ ಹಾಗೂ 24 ನೇ ಮಹಾ ರಥೋತ್ಸವ
ಕೆಂಭಾವಿ: ಪಟ್ಟಣದ ಮಹಾ ದಾಸೋಹಿ ಶರಣಬಸವೇಶ್ವರ 57 ಜಾತ್ರಾಮಹೋತ್ಸವ ಹಾಗೂ 24 ನೇ ಮಹಾ ರಥೋತ್ಸವದ ಅಂಗವಾಗಿ ರಥೋತ್ಸವದ ಪೂರ್ವಭಾವಿ ಶುಕ್ರವಾರ ಸಾಯಂಕಾಲ 6-30 ಕ್ಕೆ ನೂತನ ಮೊದಲ ಉಚ್ಚಾಯಿ ಉತ್ಸವ ಸಡಗರ ಸಂಭ್ರಮದೊಂದಿಗೆ ನೆರವೇರಿತು. ವಿಶೇಷವಾಗಿ ಮಹಿಳೆಯರೇ ಉಚ್ಚಾಯಿ ರಥೋತ್ಸವವನ್ನು ಎಳೆಯುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು.
ಇದಕ್ಕೂ ಮುನ್ನ ಪುರಾಣಿಕರಾದ ಗದುಗಿನ ಸಿದ್ದೇಶ್ವರ ಶಾಸ್ತ್ರಿಗಳು ಶಿವರಾತ್ರಿ ಜಾಗರಣೆಯೆಂದು ಪ್ರಾರಂಭವಾದ ಮಹಾ ದಾಸೋಹಿ ಶರಣಬಸವೇಶ್ವರ ಪುರಾಣ ಮಹಾಮಂಗಲಗೊಳಿಸಿದರು. ರಾಜಶೇಖರಸ್ವಾಮಿ ಹಿರೇಮಠ ಇವರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಿದರು. ಉಚ್ಚಾಯಿ ಉತ್ಸವದ ಸಾನ್ನಿಧ್ಯವನ್ನು ಷ ಬ್ರ ಚನ್ನಬಸವ ಶಿವಾಚಾರ್ಯರು ವಹಿಸಿ ಉಚ್ಚಾಯಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥಕ್ಕೆ ಕಳಸಾರೋಹಣ ಆಗುತ್ತಿದ್ದಂತೆ ಸಾವಿರಾರು ಜನ ಮಹಿಳೆಯರು ಶರಣಬಸವೇಶ್ವರ ಮಹಾರಾಜಕೀ ಜೈ ಎಂದು, ಜಯಘೋಷಣೆ ಹಾಕುತ್ತಾ ಉಚ್ಚಾಯಿ ರಥ ಎಳೆದು ಪುನೀತರಾದರು.
ದೇವಸ್ಥಾನ ಸಮಿತಿಯ ಪ್ರಮುಖರಾದ ಸಿದ್ದನಗೌಡ ಪೊಲೀಸ್ ಪಾಟೀಲ, ಬಾಪುಗೌಡ ಪೊಲೀಸ್ ಪಾಟೀಲ, ಅರುಣೋದಯ ಸೊನ್ನದ, ಮುರಿಗೇಶ ಸಾಹು ಹುಣಸಗಿ,. ಶರಣಪ್ಪ ಬಂಡೋಳಿ, ಮಹಿಪಾಲರಡ್ಡಿ ಡಿಗ್ಗಾವಿ, ಸಂಜೀವರಾವ್ ಕುಲ್ಕರ್ಣಿ, ತೋಟಪ್ಪ ಅರಿಕೇರಿ, ರಮೇಶ ಸೊನ್ನದ, ಪ್ರಧಾನಪ್ಪ ಪೂಜಾರಿ, ಈರಣ್ಣ ಸೊನ್ನದ, ಶರಣಗೌಡ ಪಾಟೀಲ, ಸೇರಿದಂತೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತ ವೃಂದ ಉಚ್ಚಾಯಿ ರಥೋತ್ಸವದ ಸಂಭ್ರಮದಲ್ಲಿ ಭಾಗವಹಿಸಿದ್ದರು.
ಖ್ಯಾತ ಹಿಂದುಸ್ತಾನಿ ಗಾಯಕ ಬಸವರಾಜ ಬಂಟನೂರ ಹಾಗೂ ಯಮನೇಶ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು.

